ವಿಶ್ವದಲ್ಲೇ ಭಾರತ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದ ಬೆನ್ನಲ್ಲೇ ಜನಸಂಖ್ಯೆಯ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಎಂಟು ಹೊಸ ನಗರಗಳನ್ನು ಅಭಿವೃದ್ಧಿ ಮಾಡುವ ಚಿಂತನೆ ನಡೆಸಿದೆ.
ದೇಶದಲ್ಲಿ ಹೊಸನಗರಗಳನ್ನು ಅಭಿವೃದ್ಧಿಪಡಿಸಬೇಕು ಎಂದು 15ನೇ ಹಣಕಾಸು ಅಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂ.ಬಿ.ಸಿಂಗ್ ಗುರುವಾರ ಮಾಹಿತಿ ನೀಡಿದ್ದಾರೆ.
ಹಣಕಾಸು ಆಯೋಗದ ಶಿಫಾರಸಿನ ನಂತರ ರಾಜ್ಯಗಳು 26 ಹೊಸ ನಗರಗಳನ್ನು ರಚಿಸಲು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಕಳುಹಿದ್ದವು. ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಎಂಟು ಹೊಸ ನಗರಗಳ ಅಭಿವೃದ್ಧಿಯ ಕರಿತು ಚಿಂತನೆ ನಡೆಸಲಾಗಿದ್ದು, ಅವುಗಳ ಸ್ಥಳಗಳು ಮತ್ತು ಅಭಿವೃದ್ಧಿ ಸಮಯವನ್ನು ಕೇಂದ್ರ ಸರ್ಕಾರವು ಪ್ರಕಟಿಸಲಿದೆ ಎಂದು ಎಂ.ಬಿ ಸಿಂಗ್ ಹೇಳಿದ್ದಾರೆ.
ಈಗಿರುವ ನಗರಗಳು ಜನರ ಅಗತ್ಯಗಳನ್ನು ಒಂದೇ ಜಾಗದಲ್ಲಿ ಪೂರೈಸಲು ಸಾಧ್ಯವಾಗದ ಕಾರಣ ದೇಶದಲ್ಲಿ ಹೊಸ ನಗರಗಳನ್ನು ನಿರ್ಮಿಸುವ ಅಗತ್ಯವಿದೆ. ಅಸ್ತಿತ್ವದಲ್ಲಿರುವ ನಗರಗಳ ಹೊರವಲಯದಲ್ಲಿ ಮಾಡುತ್ತಿರುವ ಆಕಸ್ಮಿಕ ವಿಸ್ತರಣೆಯಿಂದಾಗಿ ಇದು ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದರು.
ಹೊಸ ನಗರಗಳನ್ನು ಅಭಿವೃದ್ಧಿಪಡಿಸಿದ್ದೇ ಆದರೆ ಕನಿಷ್ಠ200ಕಿ.ಮೀ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಹೊಸ ನಗರಗಳ ಸ್ಥಾಪನೆಗೆ ಆರ್ಥಿಕ ಮಾರ್ಗಸೂಚಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ.