ಸಾಮಾನ್ಯವಾಗಿ ನಾವು ಯಾವುದೇ ಅಂಗಡಿಗೆ ಹೋಗಿ ಏನೇ ಖರೀದಿ ಮಾಡಿದರು ಕೂಡ ಬಿಲ್ ಪಾವತಿಸುವ ಮುನ್ನ ನಮ್ಮ ಮೊಬೈಲ್ ನಂಬರನ್ನು ಪಡೆಯುತ್ತಾರೆ. ಒಂದು ವೇಳೆ ನಾವು ನಂಬರ್ ಕೊಡದೇ ಇದ್ದರೆ ಒತ್ತಾಯಿಸಿಯಾದರೂ ನಮ್ಮಿಂದ ನಂಬರ್ ಪಡೆಯುತ್ತಾರೆ. ಆದರೆ ಇನ್ನು ಮುಂದೆ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಮೊಬೈಲ್ ನಂಬರ್ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಯಾವುದೇ ಅಂಗಡಿಗಳಿಗೆ ಹೋದರು ಬಿಲ್ ಕೊಡುವ ಮೊದಲು ಮೊಬೈಲ್ ನಂಬರ್ ಕೇಳುತ್ತಾರೆ. ಒಂದುವೇಳೆ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಕೊಡಲಿಲ್ಲ ಎಂದರೆ ಆಗ ಸೇವೆಗಳನ್ನು ನೀಡಲು ಅಂಗಡಿಯವರು ನಿರಾಕರಿಸುತ್ತಾರೆ ಎಂಬ ಹಲವು ದೂರುಗಳು ಬಂದಿದ್ದು, ಆ ದೂರಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಇದೊಂದು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದ್ದು ಗ್ರಾಹಕರ ವೈಯಕ್ತಿಕ ಸಂಪರ್ಕದ ಮೊಬೈಲ್ ನಂಬರ್ ಗಳನ್ನು ನೀಡುವಂತೆ ಚಿಲ್ಲರೆ ವ್ಯಾಪಾರಿಗಳು ಒತ್ತಾಯಿಸಬಾರದು ಎಂದು ರೋಹಿತ್ ಕುಮಾರ್ ಹೇಳಿದ್ದಾರೆ.
ನಂಬರ್ ನೀಡುವುದು ಭಾರತದಲ್ಲಿ ಕಡ್ಡಾಯವಲ್ಲ:
ಬಿಲ್ ಪಡೆದುಕೊಳ್ಳಲು ಗ್ರಾಹಕರು ಅಂಗಡಿಗಳಿಗೆ ಮೊಬೈಲ್ ನಂಬರ್ ನೀಡುವುದು ಭಾರತದಲ್ಲಿ ಕಡ್ಡಾಯವಲ್ಲ. ಹೀಗೆ ನಂಬರ್ ನೀಡುವುದರಿಂದ ಗ್ರಾಹಕರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುಬಹುದು ಆದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಸೈಬರ್ ವಂಚನೆ ಸಾಧ್ಯತೆ:
ಅಂಗಡಿಯವರಿಗೆ ಗ್ರಾಹಕರು ಹೀಗೆ ತಮ್ಮ ವೈಯಕ್ತಿಕ ನಂಬರ್ ಕೊಡುವುದರಿಂದ ಸೈಬರ್ ವಂಚನೆ ಹೆಚ್ಚಾಗುವ ಸಾಧ್ಯತೆಗಳಿವೆ. ನಂಬರ್ ಗಳು ಸೈಬರ್ ವಂಚಕರಿಗೆ ಸಿಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಈ ಯೋಜನೆ ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ.