ನಮ್ಮ ದಿನನಿತ್ಯದ ಜಂಜಾಟಗಳ ಮಧ್ಯೆ, ಮಾನಸಿಕ ಒತ್ತಡವನ್ನು ಹೆಚ್ಚಾಗಿಸಿಕೊಂಡು, ಊರಿಬಿಸಿಲಿನಿಂದ ಮೈಸುಟ್ಟು ಕೊಂಡಾಗ ಯಾವುದಾದರೂ ಜಲಪಾತಕ್ಕೆ ಹೋಗಿ ತಲೆಕೊಟ್ಟು ತಂಪಾಗಿಸಿಕೊಳ್ಳಬೇಕೆಂದು ಯೋಚನೆ ಮನಸ್ಸಿಗೆ ಬಂದಾಗ ನನಗೆ ನೆನಪಾಗಿದ್ದು ಕೂಡ್ಲು ಪಾಲ್ಸ್.
ಕೂಡ್ಲು ಫಾಲ್ಸ್ ಅಂತ ನಾನು ಹೇಳಿದ್ದೆ ತಡ ನನ್ನ ಸ್ನೇಹಿತರೆಲ್ಲ, ನಾನ್ ರೆಡಿ, ನಾನ್ ರೆಡಿ ಲೆಟ್ಸ್ ಗೋ ಎಂದು ಹೊರಟೆ ಬಿಟ್ಟರು….
ಅಂದು ಭಾನುವಾರ ಮುಂಜಾನೆ ಬೇಗ ಎದ್ದು ಬೆಳಗಿನ ಉಪಹಾರ ಮುಗಿಸಿ ಮಧ್ಯಾಹ್ನಕ್ಕೆ ಬೇಕಾಗುವಂತ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಕಾರನ್ನು ಹತ್ತಿ ಕುಳಿತುಕೊಂಡೆವು. ಈ ಕೂಡ್ಲು ಫಾಲ್ಸ್ ಕಾರ್ಕಳದಿಂದ ೪೦ ಕಿ.ಮೀ. ಉಡುಪಿಯಿಂದ ೪೭ ಕಿ.ಮೀ. ಹೆಬ್ರಿಯಿಂದ ೨೦ ಕಿಮೀ. ಆಗುಂಬೆ ಯಿಂದ ೩೦ ಕಿ.ಮೀ. ದೂರದಲ್ಲಿದೆ.
ಈ ಕೂಡ್ಲು ಜಲಪಾತವು ಹೆಬ್ರಿ ಬಳಿಯ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಆಳವಾಗಿರುವ ಒಂದು ರಮಣೀಯ ಜಲಪಾತವಾಗಿದೆ. ಇದನ್ನು “ಸೀತಾ” ಜಲಪಾತವೆಂತಲೂ ಕರೆಯುತ್ತಾರೆ.
ಈ ಜಲಪಾತವು ಅತ್ಯಂತ ಸುಂದರವಾದ ಮತ್ತು ಅತ್ಯಂತ ಪ್ರಾಚೀನ ಜಲಪಾತಗಳಲ್ಲಿ ಒಂದು ಎನ್ನಬಹುದು. ಅಲ್ಲದೆ ಉಡುಪಿ ಪ್ರವಾಸ ಪ್ಯಾಕೇಜ್ ಗಳ ಭಾಗವಾಗಿ ಆಗುಂಬೆ ಬಳಿ ಭೇಟಿ ನೀಡಿ ಈ ಸುಂದರವಾದ ಜಲಪಾತವನ್ನು ಮನ ತುಂಬಿಸಿಕೊಳ್ಳಬಹುದು.
ದಟ್ಟವಾದ ಕಾಡಿನ ಮಧ್ಯೆ ಕಾರು ಸಂಚರಿಸುವಾಗ ಯಾವಾಗ ನಾವು ಫಾಲ್ಸ್ ಅನ್ನು ತಲುಪುತ್ತೇವೆ, ನೀರಿನಲ್ಲಿ ಎಷ್ಟು ಗಂಟೆಗಳ ಕಾಲ ಎಂಜಾಯ್ ಮಾಡಬಹುದು, ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಅಂತು ಕಾರಿಂದ ಇಳಿಯುವ ಜಲಪಾತವನ್ನು ಸವಿಯುವ ಗಳಿಗೆ ಬಂದೇ ಬಿಟ್ಟಿತು.
ಕಾಡಿನೊಳಗೆ ಆಳವಾಗಿ ನೆಲೆಗೊಂಡಿರುವ ಕೂಡ್ಲು ತೀರ್ಥವು ದಟ್ಟವಾದ ಕಾನನದ ಮೂಲಕ ಎರಡು ಕಿಲೋಮೀಟರ್ ಚಾರಣ ಮಾಡಿಕೊಂಡು ಮಾತ್ರ ತಲುಪಬಹುದಾದಂತಹ ಪ್ರತ್ಯೇಕ ಸೌಂದರ್ಯವಾಗಿ ಉಳಿದಿದೆ.
ಕೂಡ್ಲು ಜಲಪಾತದ ಗೇಟುಗಳು ೯:೩೦ಕ್ಕೆ ತೆರೆದು ೪:೦೦ ಗಿಂತ ಮೊದಲು ಹೊರಗಿರಬೇಕು.ದ್ವಾರದಿಂದ ಜಲಪಾತಕ್ಕೆ ೩೦ ನಿಮಿಷಗಳ ಕಾಲನಡಿಗೆ ಇರುತ್ತದೆ ಅದಕ್ಕಾಗಿ ನೀವು ಕೂಡ್ಲು ಪಾಲ್ಸ್ ಪ್ಲಾನ್ ಮಾಡಿದವರು ಗಟ್ಟಿಯಾಗಿ ಹೊಟ್ಟೆ ತುಂಬಿಸಿಕೊಂಡು, ಹಸಿವಾದಾಗ ತಿನ್ನಲು ಆಹಾರ ಪದಾರ್ಥಗಳನ್ನು ಮತ್ತು ನೀರನ್ನು ಕೊಂಡೊಯ್ಯುವುದು ಉತ್ತಮ.
ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ನಡುವೆ ಮತ್ತು ಆಗುಂಬೆ ಶ್ರೇಣಿಗಳ ಪಕ್ಕದಲ್ಲಿರುವ ಈ ಜಲಪಾತಕ್ಕೆ ಟ್ರಕಿಂಗ್ ಮಾಡುತ್ತ ಸಂಚರಿಸುವಾಗ ಹಚ್ಚ ಹಸರಿನ ಪ್ರಕೃತಿಯ ಸೊಬಗು ಸವಿಯುತ್ತಾ ಹೋಗುತ್ತಿರುವಾಗ, ಚಾರಣವು ದೀರ್ಘ, ಆಯಾಸದಾಯಕ ಅನಿಸಿದರೂ ಜಲಪಾತದ ಅದ್ಭುತ ನೋಟವು ಚಾರಣಿಗರನ್ನು ಪುನರ್ಯೌವನಗೊಳಿಸುತ್ತದೆ. ಹಾಗೆ ಅವರ ಆಯಾಸವನ್ನು ದೂರ ಮಾಡಿಸುತ್ತದೆ. ಚಾರಣದ ಮಧ್ಯೆ ಒಂದು ಚಿಕ್ಕ ಹೊಳೆ ದಾಟಿದ ಸ್ವಲ್ಪ ದೂರ ಚಾರಣ ಮಾಡಿದ ನಂತರ ಗುಡ್ಡದ ತುದಿಯಿಂದ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು ೩೦೦ ಅಡಿ ಎತ್ತರದಿಂದ ಧುಮುಕುವ ಆ ಅಪಾರವತಾರದಂತಹ ಕಂಪ ಸೂಸುತ್ತಾ ಬೀಳುವ ಹಾಲ್ನೊರೆಯ ಜಲಪಾತವೇ ಆ ಕೂಡ್ಲು ಫಾಲ್ಸ್.
ಜಲಪಾತವನ್ನು ಅಷ್ಟು ಎತ್ತರದಿಂದ ನೋಡಿದ ಕೂಡಲೇ ಅದರ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಲೇ ನೀರಿಗೆ ಹೋಗಿ ದುಮ್ಮುಕಿದೆವು. ಅದರಲ್ಲೂ ಸ್ನೇಹಿತರೊಟ್ಟಿಗೆ ಹೋಗಿದ್ದಾಗ ಕೇಳಬೇಕೆ?ಎಕ್ಸ್ಟ್ರಾ ಮೋಜು ಮಸ್ತಿಯನ್ನು ಮಾಡುತ್ತ ನಾಲ್ಕು ಗಂಟೆಗಳ ಸಖತ್ ಎಂಜಾಯ್ ಮಾಡಿದ್ವಿ. ನೀರು ಎತ್ತರದಿಂದ ಅಪಾರ ಶಕ್ತಿಯಿಂದ ಕೆಳಕ್ಕೆ ಬೀಳುತ್ತಿರುವುದರಿಂದ ನಮ್ಮ ತಲೆಯನ್ನು ಆ ನೀರಿಗೆ ಹಿಡಿದಾಗ ಉಗುರುಗಳಿಂದ ನಮ್ಮ ತಲೆಗೆ ಚುಚ್ಚಿ ಮಸಾಜ್ ಮಾಡುತ್ತಿದೆ ಎಂದು ಫೀಲ್ ಆಗುತ್ತಿತ್ತು. ನಾವು ಎಷ್ಟು ಆ ನೀರಿನ ರಭಸಕ್ಕೆ ಇನ್ವಾಲ್ ಆಗಿಬಿಟ್ಟಿದ್ದೀವಿ ಅಂದ್ರೆ ಅಲ್ಲಿನ ಸೆಕ್ಯೂರಿಟಿ ನಮಗೆ ವಿಸಲ್ಸ್ ಹಾಕಿ ನಮ್ಮನ್ನು ಕರೆದಾಗಲೇ ಹೊರಡಬೇಕು ನಾವು, ಬಂದು ತುಂಬಾ ಸಮಯವಾಗಿದೆ ಎಂದು ನೆನಪಾದದ್ದು. ಆಗ ಲಘು ಬಗೆಯಿಂದ ಓಡಿ ಬಂದು ಕೊಂಡು ಹೋಗಿದ ತಿಂಡಿ ತಿನಿಸುಗಳನ್ನು ತಿಂದು ಮತ್ತೆ ನಮ್ಮ ಕಾಲ್ನಡಿಗೆಯನ್ನು ಕಾರಿನತ್ತ ಬೆಳೆಸಿದವು. ಲೈಫಿನಲ್ಲಿ ಒಮ್ಮೆ ನೋಡಲೇಬೇಕೆನಿಸಿರುವ ಆ ವಿಸ್ಮರಣೀಯ ಪ್ರವಾಸ ತಾಣಗಳಲ್ಲಿ ಈ ಕೂಡ್ಲು ಫಾಲ್ಸ್ ಕೂಡ ಒಂದು.