ಮಂಗಳೂರು: ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ಎಂದು ಎನ್ಎಸ್ ಯುಐ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಮನೆಗೆ ಮುತ್ತಿಗೆ ಯತ್ನ ನಡೆಸಿದ್ದಾರೆ.
ಈ ವೇಳೆ ಉರ್ವ ಠಾಣೆಯ ಪೊಲೀಸರು ನಳಿನ್ ಅವರ ಮನೆಗಿಂತ ಮೊದಲೇ ಬ್ಯಾರಿಕೇಡ್ ಅಳವಡಿಸಿ ಮುತ್ತಿಗೆ ಹಾಕುವವರನ್ನು ತಳ್ಳಿದ್ದಾರೆ. ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಮುತ್ತಿಗೆ ಹಾಕಲು ಅವಕಾಶ ನೀಡಬೇಕೆಂದು ಉರ್ವ ಠಾಣಾಧಿಕಾರಿ ಭಾರತಿಯವರಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಅವಕಾಶ ನೀಡದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ನೂಕಿ ಮುತ್ತಿಗೆ ಹಾಕುವ ಯತ್ನ ನಡೆದಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡದೆ 20-25 ಮಂದಿ ಎನ್ಎಸ್ ಯುಐ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುತ್ತಿಗೆಯತ್ನದ ವೇಳೆ ನಳಿನ್ ಹಠಾವೋ ದೇಶ್ ಬಚಾವೋ ಘೋಷಣೆ ಕೇಳಿ ಬಂದಿದೆ.