ಬೆಂಗಳೂರು: ರಾಜಧಾನಿಯಲ್ಲಿ ಶ್ರೀಮಂತ ಬಡಾವಣೆಯೊಂದರ ಫ್ಲಾಟ್ ಮೇಲೆ ಧಾಳಿ ನಡೆಸಿದ ನಗರದ ಸಿಸಿಬಿ ಪೋಲೀಸರು ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಬೇಧಿಸಿದ್ದಾರೆ.
ಆನ್ ಲೈನ್ ಮೂಲಕವೇ ತಮ್ಮ ದಂಧೆ ನಡೆಸುತಿದ್ದ ಆರೋಪಿಗಳು ಯುವತಿಯರನ್ನು ಡೋರ್ ಡೆಲಿವರಿ ಮಾಡುತಿದ್ದುದು ಪೋಲೀಸರನ್ನೇ ಬೆಚ್ಚಿ ಬೀಳಿಸಿದೆ. ಈ ದಂಧೆಗೆಂದೇ ಐಷಾರಾಮಿ ನಾಲ್ಕು ಬೆಡ್ ರೂಂ ಗಳ ಅಪಾರ್ಟ್ ಮೆಂಟ್ ನ್ನು ಬಾಗಲುಗುಂಟೆ ಬಳಿಯ ಎಂಇಎ ಲೇಔಟ್ ನಲ್ಲಿ ಬಾಡಿಗೆಗೆ ಪಡೆಯಲಾಗಿತ್ತು. ಇಲ್ಲಿ ನೇಪಾಳ , ಬಾಂಗ್ಲಾದೇಶ , ಮುಂಬೈ ನಿಂದ ಕರೆ ತಂದಿರುವ ಯುವತಿಯರನ್ನು ಇರಿಸಲಾಗಿತ್ತು.
ಆರೋಪಿಗಳು ಡೇಟಿಂಗ್ ವೆಬ್ ಸೈಟ್ www.locanto.com ಮೂಲಕ ಯುವತಿಯರ ಫೋಟೋಗಳನ್ನು ಪ್ರಕಟಿಸುತಿದ್ದರು.
ಯುವತಿಯರಿಗಾಗಿ ಹುಡುಕಾಡುವ ಗ್ರಾಹಕರು ಅಲ್ಲಿ ನೀಡಲಾಗಿದ್ದ ನಂಬರ್ ಗೆ ಕರೆ ಮಾಡುತಿದ್ದರು. ಗ್ರಾಹಕರ ವಾಟ್ಸ್ ಅಪ್ ಗೆ ವಿವಿಧ ಯುವತಿಯರ ಫೋಟೋ ಕಳಿಸುತಿದ್ದ ಆರೋಪಿಗಳು ದರವನ್ನೂ ಕಳಿಸುತಿದ್ದರು. ನಂತರ ಗ್ರಾಹಕರು ತಮಗೆ ಬೇಕಾದ ಯುವತಿಯನ್ನು ಆಯ್ಕೆ ಮಾಡಿ ಪುನಃ ಫೋಟೋ ವಾಪಸ್ ಕಳಿಸುತಿದ್ದರು. ನಂತರ ಆರೋಪಿಗಳು ಅಡ್ವಾನ್ಸ್ ಹಣವಾಗಿ ಶೇಕಡಾ 50 ರಷ್ಟನ್ನು ತಮ್ಮ ಖಾತೆಗೆ ಹಾಕಿಸಿಕೊಳ್ಳುತಿದ್ದರು. ನಂತರ ನಿಗದಿತ ದಿನ , ಮತ್ತು ಸಮಯಕ್ಕೆ ಯುವತಿಯರನ್ನು ಕಾರಿನಲ್ಲಿ ಕರೆದೊಯ್ದು ಗ್ರಾಹಕರ ಮನೆ ಬಾಗಿಲಿಗೆ ಬಿಡಲಾಗುತಿತ್ತು. ಯುವತಿಯರನ್ನು ಬಿಡುವಾಗಲೇ ಉಳಿದ ಹಣವನ್ನೂ ಪಡೆದುಕೊಳ್ಳಲಾಗುತಿತ್ತು ಎಂದು ಪೋಲೀಸರು ತಿಳಿಸಿದ್ದಾರೆ.
ಯುವತಿಯರ ಅಂದ ಚಂದ, ಮೈ ಮಾಟಕ್ಕೆ ತಕ್ಕಂತೆ ಒಂದು ರಾತ್ರಿಗೆ 5 ರಿಂದ 15 ಸಾವಿರ ರೂಪಾಯಿಗಳವರೆಗೂ ಚಾರ್ಜ್ ಮಾಡಲಾಗುತಿತ್ತು. ಈ ಕುರಿತು ಮಾಹಿತಿ ಪಡೆದಿದ್ದ ಸಿಸಿಬಿ ಪೋಲೀಸರು ಕಳೆದ ಭಾನುವಾರ ಸಂಜೆ ಧಾಳಿ ನಡೆಸಿ ಆರೋಪಿಗಳಾದ ಮಂಜುನಾಥ್ ,ಪ್ರದೀಪ್ ,ಶಿವರಾಜ್ ,ಬಸವರಾಜ್, ರಾಯಾ, ಉಮೇಶ್ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೆಲವು ವರ್ಷಗಳಿಂದಲೇ ಈ ದಂಧೆಯನ್ನು ನಡೆಸುತಿದ್ದರು ಎಂದು ತಿಳಿದು ಬಂದಿದೆ. ಈ ವೃತ್ತಿಯಲ್ಲಿ ತೊಡಗಿದ್ದ ಆರು ಯುವತಿಯರನ್ನೂ ಪೋಲೀಸರು ರಕ್ಷಿಸಿ ಕಳಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ದೇಶದ ಕಾನೂನಿನ ಪ್ರಕಾರ ವಯಸ್ಕ ಮಹಿಳೆಯು ವೇಶ್ಯಾ ವೃತ್ತಿಯನ್ನು ನಡೆಸಲು ಅನುಮತಿ ಇದೆಯಾದರೂ ಇವರನ್ನು ಇಟ್ಟುಕೊಂಡು ಯಾರೂ ವ್ಯಾಪಾರವನ್ನು ಮಾಡುವುದು ಅಥವಾ ಹಣ ಗಳಿಸುವ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಗ್ರಾಹಕರು ವೇಶ್ಯಾ ಗೃಹದಲ್ಲಿ ಪೋಲೀಸ್ ಧಾಳಿಯ ವೇಳೆ ಸಿಕ್ಕಿ ಬಿದ್ದರೂ ಅವರನ್ನಾಗಲೀ ಅಥವಾ ಯುವತಿಯರನ್ನಾಗಲೀ ಆರೋಪಿಗಳನ್ನಾಗಿ ಮಾಡಲೂ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟು ತೀರ್ಪು ನೀಡಿದೆ.