ಬೆಳಗಾವಿ: ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು ಕಣಕ್ಕಿಳಿದಿರುವ ಲಕ್ಷ್ಮಣ ಸವದಿ ಮತ್ತು ಬಿಜೆಪಿಯ ಹಾಲಿ ಶಾಸಕ ಮಹೇಶ ಕುಮಟಳ್ಳಿ ನಡುವೆ ಅಥಣಿಯಲ್ಲಿ ತೀವ್ರ ಜಿದ್ದಾ-ಜಿದ್ದಿ ಏರ್ಪಟ್ಟಿದೆ.
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಕುಮಟಳ್ಳಿ ಪರ ಪ್ರಚಾರ ನಡೆಸುತ್ತಿದ್ದು, ಇದೇ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಲಕ್ಷ್ಮಣ ಸವದಿ ಕ್ಷೇತ್ರವನ್ನು ಮರಳಿ ಪಡೆಯಲು ಹಾತೊರೆಯುತ್ತಿದ್ದಾರೆ.
ಸವದಿ ಅವರಿಗೆ ಟಿಕೆಟ್ ಕೈತಪ್ಪಿದ ಕಾರಣ ಬಿಜೆಪಿಯಿಂದ ಕಾಂಗ್ರೆಸ್ಗೆ ವಲಸೆ ಬಂದರು. ಇದರಿಂದ ಕಮಲ ಪಾಳಯ ಇಕ್ಕಟ್ಟಿಗೆ ಸಿಲುಕಿಸಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸವದಿಯನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಕುಮಟಳ್ಳಿ ಗೆಲುವಿಗೆ ಜಾರಕಿಹೊಳಿ ಕಳೆದ ಕೆಲವು ತಿಂಗಳಿನಿಂದ ಬೀಡು ಬಿಟ್ಟಿದ್ದಾರೆ. ಅಥಣಿಯಲ್ಲಿ ಜನಪ್ರಿಯ ನಾಯಕರಾಗಿರುವ ಕುಮಟಳ್ಳಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆಯಿಂದ ಬೆಂಬಲವನ್ನು ಹೊಂದಿದ್ದಾರೆ.
2013ರಲ್ಲಿ ಲಕ್ಷ್ಮಣ ಸವದಿ ಅವರು ಮಹೇಶ್ ಕುಮಟಳ್ಳಿಯವರನ್ನು 24 ಸಾವಿರ ಮತಗಳಿಂದ ಸೋಲಿಸಿದ್ದರು, ಆದರೆ 2018 ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಕುಮಟಳ್ಳಿ ಎದುರು ಸೋತರು. ಗೆದ್ದ ನಂತರ ಕುಮಟಳ್ಳಿ ಬಿಜೆಪಿಗೆ ಪಕ್ಷಾಂತರ ಮಾಡುವ ಮೂಲಕ ಎಚ್ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಹಕರಿಸಿದ 17 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ತಂಡವನ್ನು ಸೇರಿಕೊಂಡರು.
ಕ್ಷೇತ್ರದ 2.20 ಲಕ್ಷ ಮತದಾರರಲ್ಲಿ ಸುಮಾರು ಒಂದು ಲಕ್ಷ ಲಿಂಗಾಯತರು, 40 ಸಾವಿರ ಮರಾಠರಿದ್ದಾರೆ. 30 ಸಾವಿರ ಎಸ್ಸಿಗಳು ಮತ್ತು 28 ಸಾವಿರ ಮುಸಲ್ಮಾನರಿದ್ದಾರೆ. ಲಿಂಗಾಯತರು ಪ್ರಮುಖ ಮತದಾರರಾಗಿರುವುದರಿಂದ ಅಥಣಿಯಲ್ಲಿ ಕಣದಲ್ಲಿರುವ ಬಹುತೇಕ ಅಭ್ಯರ್ಥಿಗಳು ಹಲವು ದಶಕಗಳಿಂದ ಲಿಂಗಾಯತರೇ ಆಗಿದ್ದಾರೆ. ಸವದಿ ಮತ್ತು ಕುಮಟಳ್ಳಿ ಇವರಿಬ್ಬರೂ ಕೂಡ ಈ ಪ್ರಬಲ ಸಮುದಾಯದಿಂದ ಬಂದವರಾಗಿದ್ದು, ಅಂತಿಮವಾಗಿ ಯಾರು ಮತದಾರರನ್ನು ಒಲಿಸಿಕೊಳ್ಳಲಿದ್ದಾರೆ ಎಂದು ಕಾಲವೇ ನಿರ್ಧರಿಸಬೇಕಿದೆ