ಲಕ್ನೋ: ರಸ್ತೆ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾದ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಮೂವರು ದುಷ್ಕರ್ಮಿಗಳನ್ನು ಭಾನುವಾರ ಪೋಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಪ್ರಕರಣದ ಮೂವರು ಆರೋಪಿಗಳು ಪೊಲೀಸ್ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ಆಗ ಪೋಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.
ಪೊಲೀಸ್ ಎನ್ಕೌಂಟರ್ನಲ್ಲಿ ಇಬ್ಬರು ಆರೋಪಿಗಳಾದ ಶಹಬಾಜ್ ಮತ್ತು ಫೈಸಲ್ ಅವರ ಕಾಲುಗಳಿಗೆ ಗುಂಡು ತಗುಲಿದರೆ, ಮೂರನೇ ಆರೋಪಿ ಅರ್ಬಾಜ್ ಪರಾರಿಯಾಗಲು ಯತ್ನಿಸಿದಾಗ ಕಾಲು ಮುರಿದುಕೊಂಡಿದ್ದಾನೆ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ಈ ಘಟನೆ ನಡೆದಿದೆ ಎಂದು ಅಂಬೇಡ್ಕರ್ ನಗರ ಎಸ್ಪಿ ಅಜಿತ್ ಸಿನ್ಹಾ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 302, 354, 298 ಮತ್ತು 304 ಮತ್ತು ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಭಾನುವಾರ ಬೆಳಗ್ಗೆ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಗೆ ಹೋಗುತ್ತಿದ್ದಾಗ ಆರೋಪಿಗಳು ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವಂತೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ವಾಹನ ನಿಲ್ಲಿಸಿದಾಗ ಚಾಲಕನಿಂದ ಬಂದೂಕು ಕಸಿದುಕೊಂಡು ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಓಡಲು ಯತ್ನಿಸಿದರು ಎಂದು ಅವರು ತಿಳಿಸಿದರು. ಪರಿಣಾಮವಾಗಿ, ಪೊಲೀಸರು ಅವರ ಕಾಲುಗಳಿಗೆ ಗುಂಡು ಹಾರಿಸಿದರು. ಶಹಬಾಜ್ ಮತ್ತು ಫೈಸಲ್ ಗುಂಡೇಟು ತಗುಲಿದೆ ಆದರೆ ಮೂರನೇ ಆರೋಪಿಯು ಎಡವಿ ಬಿದ್ದು, ಅವನ ಕಾಲು ಮುರಿದುಕೊಂಡಿದ್ದಾನೆ. ಭಾರೀ ಭದ್ರತೆಯ ನಡುವೆ ಗಾಯಗೊಂಡ ಆರೋಪಿಗಳನ್ನು ಚಿಕಿತ್ಸೆಗಾಗಿ ಬಾಸ್ಖಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಸೆಪ್ಟೆಂಬರ್ 15, ಶುಕ್ರವಾರ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್ ನಲ್ಲಿ ತೆರಳುತಿದ್ದ ಆರೋಪಿಗಳು ಸೈಕಲ್ ನಲ್ಲಿ ತೆರಳುತಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳ ದುಪಟ್ಟಾವನ್ನು ಎಳೆದು ಯುವತಿಯ ಸಾವು ಸಂಭವಿಸಿತ್ತು. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಭಯಾನಕ ಘಟನೆಯು ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳಲ್ಲಿ ಒಬ್ಬ ಆಕೆಗೆ ಕಿರುಕುಳ ನೀಡಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಆರೋಪಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಂಡು, ದೋಷಾರೋಪ ಪಟ್ಟಿ ಸಲ್ಲಿಸಿ ಒಂದು ತಿಂಗಳೊಳಗೆ ಶಿಕ್ಷೆ ವಿಧಿಸಲಾಗುವುದು ಎಂದು ಎಸ್ಪಿ ಹೇಳಿದರು. ದುಷ್ಕರ್ಮಿಗಳ ಕಿರುಕುಳದಿಂದ 17 ವರ್ಷದ ಯುವತಿಯು ತಪ್ಪಿಸಿಕೊಳ್ಳಲು ಸೈಕಲ್ ತಿರುಗಿಸಿದ್ದಾಳೆ ಆದರೆ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾಳೆ. ಆಗ ಮತ್ತೋರ್ವ ದುಷ್ಕರ್ಮಿಯ ಬೈಕ್ ಆಕೆಯ ಮೇಲೆಯೇ ಹರಿದು ಸಾವಿಗೀಡಾಗಿದ್ದಾಳೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ನಡೆದಾಗ ಆಕೆಯ ಜೊತೆಗಿದ್ದ ಸಂತ್ರಸ್ತೆಯ ಸ್ನೇಹಿತೆ ಘಟನೆಯನ್ನು ವಿವರಿಸಿದ್ದು ತನ್ನ ಸ್ನೇಹಿತೆಯರೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ದುಷ್ಕರ್ಮಿಗಳು ಕೆಲವು ದಿನಗಳಿಂದ ಕಿರುಕುಳ ನೀಡುತ್ತಿರುವುದಾಗಿ ಅಳುತ್ತಾ ಹೇಳಿಕೊಂಡಿದ್ದಳು ಎಂದಿದ್ದಾಳೆ. ಶಹಬಾಜ್, ಫೈಸಲ್ ಮತ್ತು ಇನ್ನೊಬ್ಬ ಹುಡುಗ ತನ್ನನ್ನು ಹಿಂಬಾಲಿಸುತಿದ್ದಾರೆ ಎಂದೂ ಆಕೆ ಹೇಳಿಕೊಂಡಿದ್ದಾಳೆ. ಶುಕ್ರವಾರ, ಒಬ್ಬ ತನ್ನ ದುಪಟ್ಟಾವನ್ನು ಎಳೆದಿದ್ದರಿಂದ ಅವಳು ಸೈಕಲ್ನಿಂದ ಬಿದ್ದಳು. ಇದಾದ ಕೆಲವೇ ಕ್ಷಣಗಳಲ್ಲಿ ಫೈಸಲ್ ಹಿಂದಿನಿಂದ ಆಕೆಯ ಮೇಲೆ ಬೈಕ್ ಚಲಾಯಿಸಿದ್ದಾನೆ. ‘ನಾನು ಅಲ್ಲಿಗೆ ತಲುಪುವಷ್ಟರಲ್ಲಿ ಅವಳ ಬಾಯಿಂದ ರಕ್ತ ಬರುತ್ತಿತ್ತು ಮತ್ತು ಅವಳಿಗೆ ಮಾತಾಡಲು ಆಗಲಿಲ್ಲ ಎಂದು ಸ್ನೇಹಿತೆ ಹೇಳಿದಳು.
ಸಂತ್ರಸ್ತೆಯ ತಂದೆ ಸಭಾಜೀತ್ ವರ್ಮಾ ಮಾಧ್ಯಮಗಳಿಗೆ ತಮ್ಮ ಮಗಳು ಜೀವಶಾಸ್ತ್ರದ ವಿದ್ಯಾರ್ಥಿನಿ ಎಂದು ಹೇಳಿದ್ದಾರೆ. ಅವಳು ಅಧ್ಯಯನದಲ್ಲಿ ತುಂಬಾ ಚೆನ್ನಾಗಿದ್ದಳು ಮತ್ತು ವೈದ್ಯಳಾಗಬೇಕೆಂದು ಬಯಸಿದ್ದಳು.
ಈ ದುಷ್ಕರ್ಮಿಗಳ ಕೃತ್ಯದ ಬಗ್ಗೆ ಒಂದು ವಾರದ ಹಿಂದೆ ಪೊಲೀಸರಿಗೆ ಮೌಖಿಕ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. ಅಂದು ಕ್ರಮ ಕೈಗೊಂಡಿದ್ದರೆ ಇಂದು ಮಗಳು ಬದುಕಿರುತ್ತಿದ್ದಳು ಎಂದು ತಿಳಿಸಿದರು. 8 ವರ್ಷಗಳ ಹಿಂದೆ ಈಕೆಯ ತಾಯಿ ತೀರಿಕೊಂಡಿದ್ದರು, ಓದುವ ಜತೆಗೆ ಮಗಳೂ ಮನೆಕೆಲಸ ಮಾಡುತ್ತಿದ್ದಳು. ವೃದ್ಧಾಪ್ಯದಲ್ಲಿ ಆಸರೆಯಾಗಲಿ ಎಂದು ಮಗಳನ್ನು ಓದಿಸಲು ಕಳುಹಿಸಿದ್ದೆ, ಈಗ ಮಗಳಾಗಲಿ, ಪತ್ನಿಯಾಗಲಿ ಉಳಿದಿಲ್ಲ ಎಂದರು.
ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿರುವ ಹನ್ಸ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ದುರಂತ ಘಟನೆ ನಡೆದಿದೆ. ಮೃತಳನ್ನು ನೈನ್ಸಿ ಪಟೇಲ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತೆ ಹರಿಪುರದ ರಾಮರಾಜಿ ಇಂಟರ್ ಕಾಲೇಜಿನಲ್ಲಿ ಓದುತ್ತಿದ್ದಳು.