ಬಮಾಕೋ(ಮಾಲಿ): ಇಸ್ಲಾಮಿಕ್ ಉಗ್ರಗಾಮಿಗಳು ಗುರುವಾರ ಉತ್ತರ ಮಾಲಿಯಲ್ಲಿ ಪ್ರಯಾಣಿಕರ ದೋಣಿ ಮತ್ತು ಮಿಲಿಟರಿ ಶಿಬಿರದ ಮೇಲೆ ಎರಡು ಪ್ರತ್ಯೇಕ ದಾಳಿ ನಡೆಸಿದರು ಎಂದು ಸರ್ಕಾರ ಹೇಳಿದೆ, ಪಶ್ಚಿಮ ಆಫ್ರಿಕಾದ ರಾಷ್ಟ್ರವಾಗಿರುವ ಮಾಲಿಯಲ್ಲಿ ಸಶಸ್ತ್ರ ಗುಂಪುಗಳಿಂದ ಹೆಚ್ಚು ನಿಯಂತ್ರಿಸಲ್ಪಡುವ ಈ ಪ್ರದೇಶದಲ್ಲಿ ಉಗ್ರರು ಡಜನ್ಗಟ್ಟಲೆ ನಾಗರಿಕರು ಮತ್ತು ಸೈನಿಕರನ್ನು ಕೊಂದಿದ್ದಾರೆ. ದಾಳಿಯಲ್ಲಿ ಕನಿಷ್ಠ 49 ನಾಗರಿಕರು ಮತ್ತು 15 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಸೇನೆಯು ಸುಮಾರು 50 ದಾಳಿಕೋರರನ್ನು ಕೊಂದಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮಾಲಿಯನ್ ಸರ್ಕಾರದ ಪ್ರಕಾರ ಅಲ್ ಖೈದಾದ ಅಂಗಸಂಸ್ಥೆ ಈ ದಾಳಿಗಳನ್ನು ನಡೆಸಿದೆ. UNESCO ವಿಶ್ವ ಪರಂಪರೆಯ ತಾಣವಾಗಿ ನೋಂದಾಯಿಸಲ್ಪಟ್ಟ 15 ಮತ್ತು 16 ನೇ ಶತಮಾನಗಳಲ್ಲಿ ಇಸ್ಲಾಮಿಕ್ ಪ್ರಭಾವದ ತಾಣವಾದ ಟಿಂಬಕ್ಟು ಮೇಲೆ ದಿಗ್ಬಂಧನವನ್ನು ಹೇರುವ ಮೂಲಕ ಇಸ್ಲಾಮಿಸ್ಟ್ ಗುಂಪುಗಳು ಉತ್ತರ ಮಾಲಿಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಆಗಸ್ಟ್ ಮಧ್ಯದಲ್ಲಿ ದಿಗ್ಬಂಧನ ಪ್ರಾರಂಭವಾದಾಗಿನಿಂದ ಕನಿಷ್ಠ 33,000 ಜನ ನಾಗರಿಕರು ಸ್ಥಳಾಂತರಗೊಂಡಿದ್ದಾರೆ.
ನೌಕೆಯು ನೈಜರ್ ನದಿಯಲ್ಲಿ ಸಾಗುತ್ತಿದ್ದಾಗ ನದಿಯ ದೋಣಿಯ ಮೇಲೆ ಗುರುವಾರ ಬೆಳಗ್ಗೆ ದಾಳಿ ನಡೆದಿದೆ. ಕಳೆದ ಶುಕ್ರವಾರ, ದಾಳಿಕೋರರು ಟಿಂಬಕ್ಟುಗೆ ಹೋಗುತ್ತಿದ್ದ ಅದೇ ನದಿಯಲ್ಲಿ ಮತ್ತೊಂದು ದೋಣಿಯಲ್ಲಿದ್ದ ಮೂವರನ್ನು ಹತ್ಯೆ ಮಾಡಿದ್ದಾರೆ. ಗುರುವಾರದ ನಂತರ, ದಾಳಿಕೋರರು ಎರಡನೇ ದಾಳಿಯನ್ನು ನೆರೆಯ ಗಾವೊ ಪ್ರದೇಶದ ಮಿಲಿಟರಿ ಶಿಬಿರದ ಮೇಲೆ ನಡೆಸಿದರು. ಮಾರಣಾಂತಿಕ ದಾಳಿಯ ನಂತರ ಮಾಲಿಯನ್ ಸರ್ಕಾರವು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿತು.
ಸರ್ಕಾರದ ಕೋರಿಕೆಯ ಮೇರೆಗೆ ವಿಶ್ವ ಸಂಸ್ಥೆ ತನ್ನ 17,000 ಸೈನಿಕರ ಶಾಂತಿಪಾಲನಾ ಕಾರ್ಯಾಚರಣೆ MINUSMA ಅನ್ನು ಮಾಲಿಯಿಂದ ಹಿಂಪಡೆಯಲು ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಈ ಮಾರಣಾಂತಿಕ ದಾಳಿ ನಡೆದಿದೆ. ಮಾಲಿಯಲ್ಲಿ ಶಾಂತಿಪಾಲನಾ ಕಾರ್ಯಾಚರಣೆ ಹಿಂತೆಗೆದುಕೊಳ್ಳುವಿಕೆಯು ವರ್ಷಾಂತ್ಯದೊಳಗೆ ಮುಕ್ತಾಯಗೊಳ್ಳಲಿದೆ.
ವಿಶ್ವ ಸಂಸ್ಥೆ ಕಳೆದ ತಿಂಗಳು ಟಿಂಬಕ್ಟು ಪ್ರದೇಶದಲ್ಲಿ ಎರಡು ಮಿಲಿಟರಿ ಶಿಬಿರಗಳನ್ನು ತೆರವು ಗೊಳಿಸಿತು. ಸ್ವಲ್ಪ ಸಮಯದ ನಂತರ ಉಗ್ರರು ಹಲವಾರು ದಿಗ್ಬಂಧನಗಳನ್ನು ವಿಧಿಸಿದರು. ಮಾಲಿಯ ಉತ್ತರದಲ್ಲಿ ನಡೆಯುತ್ತಿರುವ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು 2012 ರಲ್ಲಿ ಸಂಘರ್ಷದ ನಡುವೆ ವಿಶ್ಲೇಷಕರು ಹೋಲಿಕೆಗಳನ್ನು ಮಾಡಿದ್ದಾರೆ, ಇದು ಅಂತಿಮವಾಗಿ ಇಸ್ಲಾಮಿಸ್ಟ್ ಉಗ್ರರ ಗುಂಪು ಟಿಂಬಕ್ಟುವನ್ನು ತಿಂಗಳುಗಳವರೆಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ಅಲ್ಲಿ ಷರಿಯಾ ಕಾನೂನನ್ನು ಜಾರಿಗೊಳಿಸಲು ಕಾರಣವಾಯಿತು.
ಮಾಲಿಯ ಜುಂಟಾ ಗುಂಪು ರಷ್ಯಾದ ಖಾಸಗಿ ಅರೆಸೈನಿಕ ಗುಂಪು ವ್ಯಾಗ್ನರ್ ಜೊತೆ ಪಾಲುದಾರಿಕೆ ಹೊಂದಿದೆ, ಇದು ಮಾಲಿಯಲ್ಲಿ ಅಂದಾಜು 1,500 ಹೋರಾಟಗಾರರನ್ನು ಹೊಂದಿದೆ. ವಿಶ್ವ ಸಂಸ್ಥೆಯ ತಜ್ಞರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ ಪ್ರಕಾರ, 2022 ರ ಆರಂಭದಲ್ಲಿ ಮಾಲಿಯನ್ ಮಿಲಿಟರಿಯೊಂದಿಗೆ ಈ ಗುಂಪು ಕಾರ್ಯಾಚರಣೆಗಳನ್ನು ನಡೆಸಲು ಪ್ರಾರಂಭಿಸಿದಾಗಿನಿಂದ ನಾಗರಿಕ ಸಾವುಗಳು ಹೆಚ್ಚಿವೆ.
ವ್ಯಾಗ್ನರ್ ಗುಂಪಿನ ನೇತೃತ್ವವನ್ನು ಈ ಹಿಂದೆ ಯೆವ್ಗೆನಿ ವಿ. ಪ್ರಿಗೊಜಿನ್ ವಹಿಸಿದ್ದರು, ಅವರು ಕಳೆದ ಜೂನ್ನಲ್ಲಿ ರಷ್ಯಾದಲ್ಲಿ ಅಲ್ಪಾವಧಿಯ ದಂಗೆಯನ್ನು ನಡೆಸಿ ನಂತರ ಆಗಸ್ಟ್ ತಿಂಗಳಿನಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು, ಪಾಶ್ಚಿಮಾತ್ಯ ಅಧಿಕಾರಿಗಳು ಇದು ವಿಮಾನದಲ್ಲಿ ಸ್ಫೋಟ ಎನ್ನಲಾಗಿದೆ. ರಷ್ಯಾದ ರಕ್ಷಣಾ ಅಧಿಕಾರಿಗಳ ನಿಯೋಗವು ಕಳೆದ ವಾರ ಮಾಲಿಗೆ ಪ್ರಯಾಣಿಸಿ , ದೇಶದ ಮಿಲಿಟರಿ ನಾಯಕರನ್ನು ಭೇಟಿಯಾಯಿತು, ಪಾಶ್ಚಿಮಾತ್ಯ ರಾಜತಾಂತ್ರಿಕರು ವ್ಯಾಗ್ನರ್ ಗುಂಪಿನ ಕೆಲವು ಚಟುವಟಿಕೆಗಳ ನಿಯಂತ್ರಣವನ್ನು ಕ್ರೆಮ್ಲಿನ್ ಮರುಪಡೆಯಲು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.