ಇತ್ತೀಚೆಗೆ ಸ್ಯಾಂಡಲ್ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಅವರು ಹೃದಯಘಾತವಾಗಿ ನಿಧನರಾದ ನಂತರ ಕಿಟೋ ಡಯಟ್ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಸ್ಪಂದನಾ ರವರು ಕಿಟೋ ಡಯಟ್ ಮಾಡಿ ತೂಕ ಕಳೆದುಕೊಳ್ಳಲು ಪ್ರಯತ್ನಿಸಿದ್ದರು ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಈ ಮಧ್ಯೆ ಡಯಟ್ ಮಾಡುವ ವಿಧಾನ ಹಾಗೂ ಒಬ್ಬೊಬ್ಬರು ಅನುಸರಿಸುವ ಡಯಟ್ ಪದ್ಧತಿ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ.
ಬೇಗನೇ ಸಣ್ಣ ಆಗಬೇಕು ಎಂದು ಬಯಸುವವರಿಗಾಗಿ ಕಿಟೋ ಡಯಟ್ ಜನಪ್ರಿಯತೆ ಪಡೆದಿದ್ದು, ಸದ್ಯ ಇದೇ ವಿಚಾರ ಚರ್ಚೆಯಲ್ಲಿದೆ. ಹಾಗಾದರೆ ಏನಿದು ಕೀಟೋ ಡಯಟ್ ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇದರ ಅನಾನುಕೂಲ ಏನು? ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಸೆಲೆಬ್ರಿಟಿಗಳು ತೂಕ ಇಳಿಸಲು ಮತ್ತು ತೂಕ ನಿಯಂತ್ರಿಸಲು ಕೀಟೋ ಡಯಟ್ ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೀಟೋ ಡಯಟ್ ಟ್ರೆಂಡ್ ಬಹಳ ವೇಗವಾಗಿ ಹೆಚ್ಚುತ್ತಿದೆ. ಕೆಲವರು ಇದನ್ನು ಒಳ್ಳೆಯದು ಎನ್ನುತ್ತಾರೆ. ಇನ್ನು ಕೆಲವರು ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸುತ್ತಾರೆ.
ದೇಹಕ್ಕೆ ಹೆಚ್ಚು ಪ್ರೋಟಿನ್ ಹಾಗೂ ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿಯೇ ಈ ಕಿಟೋ ಡಯಟ್. ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದೆ. ಶೇ.70% ಕೊಬ್ಬು, 25 ರಷ್ಟು ಪ್ರೋಟಿನ್ ಹಾಗೂ ಶೇ.5 ರಷ್ಟು ಮಾತ್ರ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಕಿಟೋ ಡಯಟ್ನ ಮತ್ತೊಂದು ಅಂಶವೆನೇಂದರೆ ಉಪವಾಸ. ಕಿಟೋ ಡಯಟ್ ಅನ್ನು ಇದು ವೇಗಗೊಳಿಸಲು ಸಹಾಯ ಮಾಡುತ್ತದೆ. ಈ ಉಪವಾಸ, ಆಹಾರ ಸೇವನೆಯನ್ನು ದಿನಕ್ಕೆ ಸುಮಾರು 8 ಗಂಟೆಗಳವರೆಗೆ ಸೀಮಿತಗೊಳಿಸಬೇಕು. ಇನ್ನುಳಿದ 16 ಗಂಟೆಗಳ ಕಾಲ ಉಪವಾಸ ಮಾಡಬೇಕು.
ಕಿಟೋ ಡಯಟ್ನ 4 ವಿಧಗಳು:
* ಸ್ಟ್ಯಾಂಡರ್ಡ್ ಕೆಟೋಜೆನಿಕ್ ಡಯಟ್ : ಈ ಡಯಟ್ ಫಾಲೋ ಮಾಡುವವರು ಅತ್ಯಂತ ಕಡಿಮೆ ಕಾರ್ಬ್, ಮಧ್ಯಮ ಪ್ರೋಟೀನ್ ಮತ್ತು ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸಬೇಕು. ಇದು ಸಾಮಾನ್ಯವಾಗಿ 70% ಕೊಬ್ಬು, 20% ಪ್ರೋಟೀನ್ ಮತ್ತು ಕೇವಲ 10% ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ
* ಸೈಕ್ಲಿಕಲ್ ಕೆಟೋಜೆನಿಕ್ ಡಯಟ್: ಈ ಡಯಟ್ನಲ್ಲಿ ಹೆಚ್ಚಿನ ಕಾರ್ಬ್ ರೀಫೀಡ್ ಅವಧಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ 5 ಕೆಟೋಜೆನಿಕ್ ದಿನಗಳು ನಂತರ 2 ಅಧಿಕ ಕಾರ್ಬ್ ದಿನಗಳು.
* ಟಾರ್ಗೆಟೆಡ್ ಕೆಟೋಜೆನಿಕ್ ಡಯಟ್ : ಈ ಡಯಟ್ ವ್ಯಾಯಾಮದ ಸುತ್ತ ಕಾರ್ಬೋಹೈಡ್ರೇಟ್ಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ.
* ಹೈ ಪ್ರೋಟೀನ್ ಕೆಟೋಜೆನಿಕ್ ಡಯಟ್ : ಇದು ಹೆಚ್ಚಿನ ಪ್ರೋಟೀನ್ ಅನ್ನು ಒಳಗೊಂಡಿದ್ದು, 60% ಕೊಬ್ಬು, 35% ಪ್ರೋಟೀನ್ ಮತ್ತು 5% ಕಾರ್ಬೋಹೈಡ್ರೇಟ್ಗಳು ಸೇರಿಸಬೇಕಾಗುತ್ತದೆ.
ಕೀಟೋ ಡಯಟ್ನ ಆಹಾರಗಳು:
ಕೆಟೋಜೆನಿಕ್ ಆಹಾರವು ಸರಾಸರಿ 70 ರಿಂದ 80 ಪ್ರತಿಶತ ಕೊಬ್ಬು, 5 ರಿಂದ 10 ಪ್ರತಿಶತ ಕಾರ್ಬೋಹೈಡ್ರೇಟ್ ಮತ್ತು ಒಟ್ಟು ದೈನಂದಿನ ಕ್ಯಾಲೊರಿಗಳಲ್ಲಿ 10 ರಿಂದ 20 ಪ್ರತಿಶತ ಪ್ರೋಟೀನ್ ಬೇಕು. ಆಹಾರದಲ್ಲಿ 2000 ಕ್ಯಾಲೋರಿ ಅಗತ್ಯವಿದ್ದರೆ, ಅದು ಸುಮಾರು 165 ಗ್ರಾಂ ಕೊಬ್ಬು, 40 ಗ್ರಾಂ ಕಾರ್ಬೋಹೈಡ್ರೇಟ್ಗಳು ಮತ್ತು 75 ಗ್ರಾಂ ಪ್ರೋಟೀನ್ ಹೊಂದಿರಬೇಕು. ಬ್ರೆಡ್, ಧಾನ್ಯ ಅಥವಾ ಏಕದಳ ತಯಾರಿಕೆಯ ಪದಾರ್ಥ, ಪಾಸ್ತಾ, ಅಕ್ಕಿ, ಆಲೂಗಡ್ಡೆ, ಪಿಷ್ಟ ತರಕಾರಿಗಳು, ಕಾಳುಗಳು ಮತ್ತು ಹಣ್ಣಿನ ರಸಗಳು ಮತ್ತು ಹೆಚ್ಚಿನ ಹಣ್ಣುಗಳ ಸೇವನೆ ನಿಷೇಧಿಸಲಾಗಿದೆ. ಮಾಂಸ, ಸಂಸ್ಕರಿಸಿದ ಮಾಂಸ, ಬೆಣ್ಣೆ ಒಳಗೊಂಡಿರುವ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಸೇವಿಸಲಾಗುತ್ತದೆ.
ಹೃದಯದ ಮೇಲೆ ಕಿಟೋ ಡಯಟ್ ಪ್ರಭಾವ:
ಕಿಟೋ ಡಯಟ್ ಆಹಾರದಲ್ಲಿ ಅತಿಯಾದ ಪ್ರೋಟಿನ್ ಅಂಶಗಳು ಹೆಚ್ಚಾಗಿ ಇರುತ್ತದೆ. ಕಾರ್ಬೋಹೈಡ್ರೇಟ್ ಇರುವುದಿಲ್ಲ. ನಮ್ಮ ದೇಹಕ್ಕೆ ಪ್ರೋಟಿನ್ ಜೊತೆಗೆ ಕಾರ್ಬೋಹೈಡ್ರೇಟ್ ಕೂಡಾ ತುಂಬಾ ಮುಖ್ಯವಾಗುತ್ತದೆ. ಅತಿಯಾದ ಪ್ರೋಟಿನ್ ಫುಡ್ಗಳಿಂದ ರಕ್ತನಾಳಗಳಿಗೆ ಹಾನಿ ಆಗುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತದೆ. ಹೀಗಾಗಿ ಕೀಟೋ ಡಯಟ್ ಒಂದು ಹಂದಲ್ಲಿ ಇರಲಿ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಕೆಲವು ಸಂಶೋಧನೆಗಳು ಕೀಟೊ ಡಯಟ್ ಮಾಡುವವರಲ್ಲಿ ಎಂಡೋಥೀಲಿಯಲ್ ಕಾರ್ಯವನ್ನು ದುರ್ಬಲಗೊಳಿಸಬಹುದು ಎಂದು ಸೂಚಿಸುತ್ತದೆ. ಈ ಎಂಡೋಥೀಲಿಯಲ್, ರಕ್ತನಾಳಗಳ ಆರೋಗ್ಯಕ್ಕೆ ಸಂಬಂಧಿಸಿದ್ದು, ದುರ್ಬಲಗೊಂಡ ಎಂಡೋಥೀಲಿಯಲ್ ಹೃದ್ರೋಗಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.