ದಾವಣಗೆರೆ: ಇಲ್ಲಿನ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ನಡೆದ ಗೃಹ ಜ್ಯೋತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕ ಹರೀಶ್ ಅವರು ಭಾಷಣದಲ್ಲಿ ಆಡಿದ ಮಾತಿನಿಂದಾಗಿ ಕೆಲ ಕಾಲ ಗೊಂದಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ. ಎಸ್. ಬಸವಂತಪ್ಪ, ಅವರು ಕಾಂಗ್ರೆಸ್ನ ಜನಪ್ರಿಯ ಕಾರ್ಯಕ್ರಮ ‘ಅನ್ನಭಾಗ್ಯ’ಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂದು ಆರೋಪಿಸಿದರು. ನಂತರ ಮಾತನಾಡಿದ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರು ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಜನತೆಗೆ ಭರವಸೆಗಳನ್ನು ನೀಡುವಾಗ, ಪ್ರಧಾನಿ ನರೇಂದ್ರ ಮೋದಿ ಕೇಳಿ ಅನ್ನಭಾಗ್ಯ ಘೋಷಣೆ ಮಾಡಿದ್ದಿರಾ ಎಂದು ಪ್ರಶ್ನಿಸಿದರು. ಈ ವೇಳೆ ಶಾಸಕರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಹರೀಶ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದಾಗ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಜನರ ಆಕ್ರೋಶದ ನಡುವೆಯೂ ಶಾಸಕರು ಭಾಷಣ ಮುಂದುವರಿಸಿದರು.
ಮುಂದುವರೆಸಿದ ಹರೀಶ್ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಂತೆ, ದೇಶದ ಎಲ್ಲ ಪಕ್ಷಗಳು ಚುನಾವಣೆಯ ವೇಳೆ ಇದೇ ರೀತಿ ಆಮಿಷವೊಡ್ಡಿ, ಅಧಿಕಾರಕ್ಕೆ ಬಂದು ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ, ದೇಶದ ಅಭಿವೃದ್ಧಿ ಏನಾಗಲಿದೆ ಎಂಬುದನ್ನು ಕೂಡ ನಾವು ಚಿಂತಿಸಬೇಕು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಭರವಸೆ ಈಡೇರಿಸಿದ್ದೀರಾ?. ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಮೋದಿಯವರು ಆಡಳಿತ ನಡೆಸಿ 9 ವರ್ಷ ಆಗಿದೆ. ಇನ್ನೂ ಜನರ ಖಾತೆಗೆ ಹಣ ಬಂದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆ ಈಡೇರಿಸಿದೆ. ನೀವು ಗ್ಯಾರಂಟಿ ಬಗ್ಗೆ ಮಾತನಾಡುತ್ತೀರಾ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ಈ ವೇಳೆ ಶಾಸಕರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಆದರೆ, ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಮುಂದುವರಿಸಿದಾಗ ಆಕ್ರೋಶಗೊಂಡ ಹರೀಶ್ ಅವರು ‘ಗಂಡಸ್ತನ ಇದ್ದಿದ್ದರಿಂದಲೇ ಹರಿಹರ ಕ್ಷೇತ್ರದಲ್ಲಿ 8 ಸಲ ಸ್ಪರ್ಧಿಸಿದ್ದೇನೆ. ನೀವು ಅಡ್ಡಿಪಡಿಸುವುದನ್ನು ನಿಲ್ಲಿಸುವವರೆಗೂ ನಾನು ಈ ಜಾಗ ಬಿಟ್ಟು ಕದಲಲ್ಲ’ ಎಂಬುದಾಗಿ ಪಟ್ಟು ಹಿಡಿದರು. ಪೊಲೀಸರು ಮಧ್ಯಪ್ರವೇಶ ಮಾಡಿ, ಶಾಸಕರ ಭಾಷಣಕ್ಕೆ ತೊಂದರೆ ಕೊಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕಾರ್ಯಕ್ರಮದಿಂದ ಹೊರಕಳುಹಿಸಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುವುದಾಗಿ ಮೊದಲು ಕೇಂದ್ರ ಸರ್ಕಾರ ಹೇಳಿತ್ತು. ನಂತರ ಯಥನಾಲ್ ತಯಾರಿಸಲು ಬೇಕು ಎಂದು ಕಾರಣ ಹೇಳಿ ಅಕ್ಕಿ ನೀಡಲು ನಿರಾಕರಿಸಿದೆ ಎಂದು ಆರೋಪಿಸಿದರು. ಕೋವಿಡ್ ಸಂಕಷ್ಟದಲ್ಲಿ ಗಂಟೆ ಹೊಡೆಯುವಂತೆ ಹೇಳಿದ ಪ್ರಧಾನಿ ಯಾವುದೇ ಸಹಾಯ ಮಾಡಲಿಲ್ಲ. ಈಗ ನಾವು ಚುನಾವಣೆಯಲ್ಲಿ ನೀಡಿದ ಭರವಸೆ ನೀಡಿದಂತೆ ಅವುಗಳನ್ನ ಪೂರೈಕೆ ಮಾಡುತ್ತಿದ್ದೇವೆ. ಇದರ ಬಗ್ಗೆ ಇಲ್ಲ ಸಲ್ಲ ಆರೋಪ ಮಾಡುವುದು ಸರಿಯಲ್ಲ ಎಂದರು.