‘ದಿ ಎಲಿಫಂಟ್ ವಿಸ್ಪರರ್ಸ್’ ಎಂಬ ಆಸ್ಕರ್ ಪ್ರಶಸ್ತಿ ಗೆದ್ದ ಡಾಕ್ಯುಮೆಂಟರಿಯನ್ನು ಬಹುತೇಕ ತಾವೆಲ್ಲರೂ ಇತ್ತೀಚೆಗೆ ನೋಡಿರುತ್ತೀರಿ. ಅದರಲ್ಲಿ ಬೆಳ್ಳಿ ಹಾಗೂ ಬೊಮ್ಮನ್ ದಂಪತಿಯ ಆನೆ ಪ್ರೀತಿಯನ್ನು ಮೆಚ್ಚಿರುತ್ತೀರಿ. ಇದೀಗ ಬೆಳ್ಳಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆಯಂತೆ!
ಹಾ ಹೌದು..ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫಂಟ್ ವಿಸ್ಪರರ್ಸ್’ ಖ್ಯಾತಿಯ ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಮಗದೊಮ್ಮೆ ಸುದ್ದಿಯಲ್ಲಿದ್ದಾರೆ. ಆನೆಗಳ ಮೇಲೆ, ಅದರಲ್ಲೂ ಮುದ್ದು ಆನೆಮರಿಗಳ ಮೇಲೆ ಪ್ರೀತಿಯ ಮಳೆ ಸುರಿಸಿದ್ದ ಬೆಳ್ಳಿಗೆ ಇದೀಗ ತಮಿಳುನಾಡು ಸರ್ಕಾರಿ ನೌಕರಿ ಲಭಿಸಿದೆಯಂತೆ! ತಮಿಳುನಾಡು ಸರ್ಕಾರವು ದಿ ಎಲಿಫೆಂಟ್ ವಿಸ್ಪರರ್ಸ್ ಎಂಬ ಸಾಕ್ಷ್ಯಚಿತ್ರದಿಂದ ಖ್ಯಾತಿ ಪಡೆದ ಬೆಳ್ಳಿಗೆ ಸರ್ಕಾರಿ ನೌಕರಿ ನೀಡಿದೆ.
ಈ ಹಿಂದೆ ತಾತ್ಕಾಲಿಕ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಿ ತನ್ನ ಕೌಶಲ್ಯ ಮತ್ತು ಸಮರ್ಪಣಾ ಮನೋಭಾವದಿಂದ ಸರ್ಕಾರದ ಗಮನ ಸೆಳೆದಿದ್ದಾಳೆ. ತಮಿಳುನಾಡಿನ ನೀಲಗಿರಿ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಮೊದಲ ಖಾಯಂ ಮಹಿಳಾ ಆನೆ ಪಾಲಕರನ್ನಾಗಿ ಬೆಳ್ಳಿಯನ್ನು ತಮಿಳುನಾಡಿನ ಸರ್ಕಾರ ನೇಮಿಸಿದೆ. ಹೀಗಾಗಿಯೇ ಬೆಳ್ಳಿ ಕೌಶಲ್ಯ ಮತ್ತು ಸಮರ್ಪಣಾ ಮನೋಭಾವದಿಂದ ಈ ಜವಾಬ್ದಾರಿಯುತ ಸ್ಥಾನವನ್ನು ಗಳಿಸಿದ್ದಾಳೆ ಎಂದು ತಮಿಳುನಾಡು ರಾಜ್ಯ ಅರಣ್ಯ ಇಲಾಖೆ ಹೇಳಿದೆ. ತಮಿಳುನಾಡು ಸರ್ಕಾರದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಯಾಗಿರುವ ಸುಪ್ರಿಯಾ ಸಾಹು ಟ್ವಿಟರ್ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ಇದು ಅಸಾಧಾರಣ ಸುದ್ದಿ ಎಂದಿದ್ದಾರೆ.
ಇನ್ನು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕೌ ಆನೆ ಶಿಬಿರದಲ್ಲಿ ಅಮೂಲ್ಯ ಆನೆ ಮರಿಗಳನ್ನು ಉಳಿಸುವಲ್ಲಿ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆಗಾಗಿ ಬೆಳ್ಳಿ ತಮಿಳುನಾಡು ಸರ್ಕಾರದಿಂದ ಕಾಯಂ ಮಹಿಳಾ ಕಾವಾಡಿ (ಆನೆ ಪಾಲನೆದಾರ) ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ ಅಂತ ಟ್ವೀಟ್ ಮಾಡಿದ್ದಾರೆ. ಸರ್ಕಾರದ ವಿಶೇಷ ಸಮಾರಂಭ ಒಂದರಲ್ಲಿ ಬೆಳ್ಳಿ ಅವರನ್ನು ಅರಣ್ಯ ಸಚಿವ ಎಂ ಮತಿವೆಂಥನ್, ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಮತ್ತು ಸುಪ್ರಿಯಾ ಸಾಹು ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೆಳ್ಳಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿದರು.ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ಆಸ್ಕರ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಗಳಿಸಿದ್ದರು.
ತಮಿಳುನಾಡು ರಾಜ್ಯದ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ಸ್ಥಳದ ನೈಸರ್ಗಿಕ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ. ಇದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬುಡಕಟ್ಟು ಜನರ ಜೀವನವನ್ನು ಅನ್ವೇಷಿಸುತ್ತದೆ.
ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾಗದ್ದ ಮೋದಿ ಅವರ ಫೋಟೋ ಸಖತ್ ವೈರಲ್ ಕೂಡ ಆಗಿತ್ತು.