ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ–ನರೇಗಾ) ಅಡಿಯಲ್ಲಿ ಕಾರ್ಮಿಕರ ಮಕ್ಕಳ ಲಾಲನೆ-ಪೋಷಣೆಗಾಗಿ 4,000 ಕೂಸಿನ ಮನೆಗಳ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ನರೇಗಾ ಯೋಜನೆಯ ನಿಯಮಗಳ ಪ್ರಕಾರ, ಯೋಜನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಲಾಗಿದೆ. ಇದರಂತೆ ಕನಿಷ್ಠ ಮೂರನೇ ಒಂದು ಭಾಗದಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದು, ಬಹುತೇಕ ಹೆಣ್ಣುಮಕ್ಕಳು ಯುವತಿಯರು, ಮಗುವಿನ ತಾಯಿಯಂದಿರೇ ಆಗಿದ್ದಾರೆ. ಆದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯು 4,000 ಶಿಶುವಿಹಾರಗಳ ತೆರೆಯಲು ಸಿದ್ಧತೆ ನಡೆಸಿದೆ.
ಶೇ.50ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಕೆಲಸದೊಂದಿಗೆ ಮಕ್ಕಳ ಪೋಷಣೆ ಮಾಡಬೇಕಾಗುತ್ತದೆ. ಹೀಗಾಗಿಯೇ ಮಕ್ಕಳ ಪಾಲನೆ ಹಾಗೂ ಪೋಷಣೆಗೆ ಸರ್ಕಾರ ಶಿಶುವಿಹಾರಗಳ ತೆರೆಯಲು ನಿರ್ಧರಿಸಿದೆ.
ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಇದುವರೆಗೆ ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರ ಮಕ್ಕಳಿಗೆ ಕುಡಿಯುವ ನೀರು ಮತ್ತು ಆಶ್ರಯದಂತಹ ಸೌಕರ್ಯಗಳನ್ನು ಒದಗಿಸಲಾಗಿದೆ. ಇನ್ನು ಮುಂದೆ ಅಂತಹ ಸ್ಥಳಗಳಲ್ಲಿ ಶಿಶುವಿಹಾರಗಳ ತೆರೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕಾರ್ಮಿಕರ ಮಹಿಳೆಯರು ಕೆಲಸ ಮಾಡುವ ವೇಳೆ ಮಹಿಳೆಯೊಬ್ಬರು ಅವರ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ಮಹಿಳೆಗೂ ವೇತನವನ್ನು ನೀಡಲಾಗುತ್ತದೆ. ಶಿಶುವಿಹಾರಗಳಲ್ಲಿ ಮಕ್ಕಳಿಗೆ ಆರೋಗ್ಯಕರ ಆಹಾರವನ್ನು ನೀಡಲಾಗುವುದು. ಮಕ್ಕಳು ಆರು ವರ್ಷದವರಾದ ಬಳಿಕ ಅವರನ್ನು ಶಾಲೆಗೆ ಸೇರಿಸಲು ಶಿಶುವಿಹಾರಗಳು ಸಹಾಯ ಮಾಡುತ್ತವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನರೇಗಾ ಎಂದರೇನು?
ಭಾರತ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಎಲ್ಲ ರಾಜ್ಯಗಳ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬದ ಒಬ್ಬ ವ್ಯಕ್ತಿಗೆ 100 ದಿನಗಳ ಉದ್ಯೋಗ ಖಾತ್ರಿ ನೀಡಲಾಗುವುದು. ಆದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು, ಅದರಲ್ಲೂ ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು. ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ ಅರ್ಜಿದಾರರು ಈ ಯೋಜನೆಯಲ್ಲಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡಲು ಸಿದ್ಧರಿರಬೇಕು.