ಭಾರತ ತಂಡ ಏಷ್ಯಾಕಪ್ಗೆ ಅಂತಿಮ ಹಂತದ ತಯಾರಿಯಲ್ಲಿದೆ. ಭಾರತದ ಆಟಗಾರರು ಪ್ರಸ್ತುತ ಬೆಂಗಳೂರಿನಲ್ಲಿ ಯೋ-ಯೋ ಪರೀಕ್ಷಾ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಯುವ ಆರಂಭಿಕ ಆಟಗಾರ ಸುಬ್ಮನ್ ಗಿಲ್ ಯೋ-ಯೋ ಪರೀಕ್ಷೆಯಲ್ಲಿ 18.7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದು, ಇದುವರೆಗೆ ಯೋ-ಯೋ ಟೆಸ್ಟ್ನಲ್ಲಿ ಭಾಗವಹಿಸಿರುವ ಎಲ್ಲಾ ಕ್ರಿಕೆಟಿಗರು ಕಟ್ ಆಫ್ ಲೆವೆಲ್ 16.5 ದಾಟಿದ್ದಾರೆ. ವಿರಾಟ್ ಕೊಹ್ಲಿ 17.2 ಅಂಕಗಳನ್ನು ಗಳಿಸಿದ್ದಾರೆ.
ಐವರು ಭಾರತೀಯ ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ಇನ್ನೂ ಯೋ-ಯೋ ಪರೀಕ್ಷೆಗೆ ಒಳಗಾಗಿಲ್ಲ. ಶೀಘ್ರದಲ್ಲೇ ಅವರನ್ನು ಯೋ-ಯೋ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಏಷ್ಯಾಕಪ್ಗಾಗಿ ಭಾರತ ತಂಡ ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ ಬೀಡುಬಿಟ್ಟಿತ್ತು. 30ರಿಂದ ಆರಂಭವಾಗಲಿರುವ ಏಷ್ಯಾಕಪ್ ಸರಣಿಗೂ ಮುನ್ನ ಭಾರತ ತಂಡದ ಆಟಗಾರರು ವಾಡಿಕೆಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ಯೋ-ಯೋ ಪರೀಕ್ಷೆಯು ಏರೋಬಿಕ್ ಸಹಿಷ್ಣುತೆಯ ಫಿಟ್ನೆಸ್ ಪರೀಕ್ಷೆಯಾಗಿದೆ. ಆಟಗಾರರು ಕೊನೆಯ ಬಾರಿ ಆಡಿದ ಆಟ ಮತ್ತು ಎಷ್ಟು ಕೆಲಸದ ಹೊರೆ ಅನುಭವಿಸಿದ್ದೀರಿ ಎಂಬುದರ ಆಧಾರದ ಮೇಲೆ ಫಲಿತಾಂಶಗಳು ಬದಲಾಗುತ್ತವೆ. ಗಿಲ್ ಇದರಲ್ಲಿ ಅತ್ಯಧಿಕ ಸ್ಕೋರ್ 18.7 ಅನ್ನು ಹೊಂದಿದ್ದಾರೆ. ಹೆಚ್ಚಿನ ಆಟಗಾರರು 16.5 ಮತ್ತು 18 ರ ನಡುವೆ ಸ್ಕೋರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ನಲ್ಲಿ ತವರಿನಲ್ಲಿ ನಡೆಯಲಿರುವ ವಿಶ್ವಕಪ್ಗೆ ಮೊದಲು ಬಿಸಿಸಿಐ ಫಿಟ್ನೆಸ್ ಮತ್ತು ಕಂಡೀಷನಿಂಗ್ ಶಿಬಿರವನ್ನು ಆಯೋಜಿಸಿದೆ. ಆಟಗಾರರು ಎರಡು ಪಂದ್ಯಗಳ ನಡುವೆ ಅಂತರವನ್ನು ಹೊಂದಿದ್ದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕ್ರೀಡಾ ವಿಜ್ಞಾನ ತಂಡವು ಭಾರತೀಯ ತಂಡದ ಕ್ರೀಡಾ ಸಿಬ್ಬಂದಿಯೊಂದಿಗೆ ಎಲ್ಲಾ ಕಡ್ಡಾಯ ಪರೀಕ್ಷೆಗಳನ್ನು ನಡೆಸುತ್ತವೆ.
ಡೆಕ್ಸಾ ಸ್ಕ್ಯಾನ್
ಬೆಂಗಳೂರು ಸಮೀಪದ ಆಲೂರಿನಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ)ಯ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ಇತ್ತೀಚೆಗಷ್ಟೇ ಟೀಂ ಇಂಡಿಯಾ ಆಟಗಾರರು ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದು, ಇದೀಗ ಮತ್ತೊಂದು ವಿಶೇಷ ಸ್ಕ್ಯಾನ್ಗೆ ಒಳಗಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಡೆಕ್ಸ್ ಸ್ಯ್ಕಾನ್ಗೆ ಒಳಗಾಗಿದ್ದಾರೆ.
ಏನಿದು ಡೆಕ್ಸಾ ಸ್ಕ್ಯಾನ್?
ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುವ ವೈಜ್ಞಾನಿಕ ವಿಧಾನವನ್ನು ಡೆಕ್ಸಾ ಸ್ಕ್ಯಾನ್ ಎಂದು ಕರೆಯಲಾಗುತ್ತದೆ. ಮನುಷ್ಯನ ಅಸ್ಥಿಪಂಜರದ ಮೂಳೆಗಳ ಸಾಂದ್ರತೆಯನ್ನು ಅಳೆಯಲು ತ್ವರಿತ ಮತ್ತು ನೋವು ರಹಿತ ವಿಧಾನವೂ ಇದಾಗಿದೆ. ಈ ಪರೀಕ್ಷೆಯಿಂದ ದುರ್ಬಲವಾದ ಮೂಳೆಗಳನ್ನು ಸುಲಭವಾಗಿ ಗುರುತಿಸಬಹುದು. ದೇಹದಲ್ಲಿನ ಕೊಬ್ಬಿನಾಂಶವೂ ಗೊತ್ತಾಗುತ್ತದೆ.
ಡೆಕ್ಸಾ ಸ್ಕ್ಯಾನ್ ಮಾಡುವುದರ ಪ್ರಯೋಜನಗಳು
ಆಟಗಾರರ ಫಿಟ್ನೆಸ್ ತಪಾಸಣೆ ಮಾಡುವಾಗ ಈ ರೀತಿಯ ಪರೀಕ್ಷೆ ಮಾಡುವುದರಿಂದ ಎಲುಬಿನ ಸಾಂದ್ರತೆ ಪತ್ತೆಹಚ್ಚಲು ಸಹಕಾರಿಯಾಗಿದೆ. ಅಲ್ಲದೆ, ಆಟಗಾರರ ದೇಹದಲ್ಲಿನ ಕೊಬ್ಬಿನಾಂಶ, ಆಟಗಾರರು ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ನಿಖರವಾಗಿ ಅಂದಾಜಿಸಲು ನೆರವಾಗುತ್ತದೆ. ಎಕ್ಸ್ ರೇ ಮೂಲಕ ಈ ಪರೀಕ್ಷೆ ಮಾಡಲಾಗುತ್ತದೆ.
ಇದು ಸಿಟಿ ಸ್ಕ್ಯಾನ್ಗಿಂತ ವಿಭಿನ್ನ
ಡೆಕ್ಸಾ ಸ್ಕ್ಯಾನ್ ಭಿನ್ನವಾಗಿದ್ದು, ಸುರಂಗ ಅಥವಾ ರಿಂಗ್ ಆಕಾರದಲ್ಲಿರುವ ಯಂತ್ರದೊಳಗೆ ವ್ಯಕ್ತಿಯನ್ನು ಕಳುಹಿಸುವುದಿಲ್ಲ. ಹೀಗಾಗಿ ಇದರಲ್ಲಿ ಕ್ಲಾಸ್ಟ್ರೋಫೋಬಿಕ್ ಅನ್ನು ಅನುಭವಿಸುವ ಅಪಾಯವೂ ಇರುವುದಿಲ್ಲ. ಸದ್ಯ ಟೀಂ ಇಂಡಿಯಾದ ಆಟಗಾರರು ಭವಿಷ್ಯದಲ್ಲಿ ಗಾಯಕ್ಕೆ ತುತ್ತಾಗಬಾರದು, ಫಿಟ್ ಆಗಿರಬೇಕು ಎಂಬ ಕಾರಣಕ್ಕೆ ಬಿಸಿಸಿಐ ಈ ಟೆಸ್ಟ್ಗಳನ್ನು ಮಾಡಿಸುತ್ತಿದೆ. ಆಟಗಾರರಿಗೆ ಶೇಕಡಾ 10ಕ್ಕಿಂತ ಕಡಿಮೆ ಕೊಬ್ಬಿನಾಂಶ ಇದ್ದರೆ ಚುರುಕಾಗಿ ಫೀಲ್ಡಿಂಗ್, ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಟೆಸ್ಟ್ ಪ್ರಮುಖವಾಗಿದೆ