ಇಂದಿನ ಮಕ್ಕಳು ಮತ್ತು ಪೋಷಕರು ಆಹಾರದ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡ ಹಾಗೆ ಕಾಣುವುದಿಲ್ಲ. ಕಣ್ಣಿಗೆ ಕಾಣಿಸುವಂತಹ ಅಪೌಷ್ಟಿಕ ಆಹಾರವನ್ನು ತಿಂದು ಬದುಕುತ್ತಿರುತ್ತಾರೆ. ಪೋಷಕರು ಕೆಲಸಕ್ಕೆ ಹೊರಗಡೆ ಹೋಗುವುದರಿಂದ ಅವರಿಗೆ ಸಮಯ ಸಿಗುವುದಿಲ್ಲ ಎನ್ನುವ ಒಂದೇ ಒಂದು ಕಾರಣದಿಂದ ಹೊರಗಡೆಯಿಂದ ಕೆಲವು ಆಹಾರ ಪದಾರ್ಥಗಳನ್ನು ತಂದು ಮಕ್ಕಳಿಗೆ ನೀಡುತ್ತಾರೆ. ಇದರಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತದೆ.
ಆದರೆ ಕೆಲವೊಮ್ಮೆ ಮಾತ್ರ ಪೋಷಕರು ಮಕ್ಕಳ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ ಸೇವಿಸುವಂತೆ ಮಾಡುವುದು ಹೇಗೆ ಎಂದು ಚಿಂತಿಸಲು ಪ್ರಾರಂಭಿಸುತ್ತಾರೆ. ಆದರೆ, ಮಕ್ಕಳಿಗೆ ಬೇಕರಿ, ಫಾಸ್ಟ್ ಫುಡ್ ಗಳ ಸೇವನೆಯನ್ನು ರೂಢಿಸಿದವರೇ ನಾವು ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ, ಮಕ್ಕಳು ಮನೆಯ ಉತ್ತಮ ಆಹಾರವನ್ನೇ ಇಷ್ಟಪಟ್ಟು ತಿನ್ನಲು ಜಾಣತನದಿಂದ ಉತ್ತೇಜನ ನೀಡಬೇಕಾಗುತ್ತದೆ.
ಮಕ್ಕಳು ಪೌಷ್ಟಿಕ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವಂತೆ ಮಾಡುವುದು ಇಂದಿನ ದಿನಗಳಲ್ಲಿ ಅತಿದೊಡ್ಡ ಸವಾಲು. ಪಾಲಕರು ಎಷ್ಟೇ ಕಷ್ಟಪಟ್ಟರೂ ಇಂದಿನ ಮಕ್ಕಳು ಕರಿದ, ಸಂಸ್ಕರಿತ ಮತ್ತು ಸಕ್ಕರೆಭರಿತ ಆಹಾರಗಳನ್ನೇ ಇಷ್ಟಪಡುವಾಗ ಪೌಷ್ಟಿಕ ಆಹಾರಗಳನ್ನು ಅವರಿಗೆ ತಲುಪಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹತಾಶೆ ಉಂಟಾಗಬಹುದು. ಇಂತಹ ಆಹಾರಗಳಿಂದಾಗಿ ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತದೆ.
ಇದರಿಂದಾಗಿ ಹಲವು ಪೋಷಕಾಂಶಗಳ ಕೊರತೆ ಮಕ್ಕಳಲ್ಲಿ ಕಾಡಬಹುದು. ಇನ್ನು, ಬಾಲ್ಯದಲ್ಲಿ ಹೆಚ್ಚಿನ ಪರಿಣಾಮ ಕಂಡುಬರದಿದ್ದರೂ ಬೆಳೆಯುತ್ತ ಮಧುಮೇಹ ಸೇರಿದಂತೆ ಹಲವು ಸಮಸ್ಯೆ ಉಂಟಾಗಬಹುದು. ಇವೆಲ್ಲದರ ಅರಿವಿದ್ದರೂ ಎಷ್ಟೋ ಪಾಲಕರು ಪೌಷ್ಟಿಕ ಆಹಾರವನ್ನಷ್ಟೇ ಮಕ್ಕಳಿಗೆ ನೀಡಲಾಗದೆ ಅಸಹಾಯರಾಗುವ ಪರಿಸ್ಥಿತಿ ಎದುರಾಗಿರುವುದು ಸತ್ಯ.
ಸ್ವತಃ ಪಾಲಕರು ಉತ್ತಮ ಜೀವನಶೈಲಿ ಅನುಸರಿಸುವ ಮೂಲಕ, ಮನೆಯಲ್ಲಿ ಒಳ್ಳೆಯ ಆಹಾರಗಳನ್ನೇ ಸೇವಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು. ಆದರೆ, ಇದಕ್ಕೂ ಸಾಕಷ್ಟು ಜಾಣ್ಮೆ ಮತ್ತು ತಾಳ್ಮೆ ಅತ್ಯಗತ್ಯ.
ಅಂಗಡಿಗೆ ಹೋದಾಗ ತರಕಾರಿ, ಹಣ್ಣುಗಳನ್ನು ಆಯ್ಕೆ ಮಾಡುವಂತೆ ನಾವು ಮಕ್ಕಳಿಗೆ ತಿಳಿಸಬೇಕು. ಅವುಗಳಿಂದ ಸಿದ್ಧಪಡಿಸುವ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಲು ಸೂಚಿಸಬೇಕು. ಇದರಿಂದ ಆರೋಗ್ಯಕರ ಆಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ.
ಫಾಸ್ಟ್ ಫುಡ್ ಮಿತಿಯಲ್ಲಿರುವ ಹಾಗೆ ನೋಡಿ ಕೊಳ್ಳಬೇಕು. ಬಾಹ್ಯ ತಿನಿಸು ಅಥವಾ ಫಾಸ್ಟ್ ಫುಡ್ 15 ದಿನಗಳಿಗೆ ಒಮ್ಮೆಯೋ, ತಿಂಗಳಿಗೆ ಒಮ್ಮೆಯೋ ಸೀಮಿತವಾಗಿರಲಿ. ಇಲ್ಲೂ ಸಹ ಅನೇಕ ರೀತಿಯ ಆರೋಗ್ಯಕ್ಕೆ ಹಾನಿಯಾಗದ ತಿನಿಸುಗಳ ಆಯ್ಕೆ ಮಾಡುವುದನ್ನು ಪಾಲಕರು ಕಲಿತುಕೊಳ್ಳಬೇಕು. ಪಿಜ್ಜಾ, ಬರ್ಗರ್ ಗಳಲ್ಲೂ ಸಾಧ್ಯವಾದಷ್ಟು ಉತ್ತಮ ಆಯ್ಕೆ ಮಾಡುವ ಮೂಲಕ ಮಕ್ಕಳಿಗೂ ಅದನ್ನು ಅಭ್ಯಾಸ ಮಾಡಿಸಬೇಕು. ಮನೆಯಲ್ಲೇ ಕೆಲ ಸ್ನ್ಯಾಕ್ಸ್
ಸಿದ್ಧಪಡಿಸಬಹುದು. ಸಲಾಡ್, ಹಣ್ಣುಗಳ ಸ್ನ್ಯಾಕ್ಸ್ ಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಸ್ನೇಹಿತರು, ನೆಂಟರಿಷ್ಟರು ಬಾಹ್ಯ ತಿನಿಸುಗಳನ್ನು ಮಕ್ಕಳಿಗೆ ನೀಡದಂತೆ ಸೂಚಿಸುವುದು ಕೆಲವೊಮ್ಮೆ ಅನಿವಾರ್ಯ. ಹೀಗೆಲ್ಲಾ ಕ್ರಮ ಕೈಗೊಳ್ಳುವುದರಿಂದ ಪೋಷಕರು ಮಕ್ಕಳ ಆರೋಗ್ಯದ ಮೇಲೆ ಹತೋಟಿ ತಂದುಕೊಳ್ಳಬಹುದು. ಮಕ್ಕಳಿಗೆ ಮೊದಲು ಆರೋಗ್ಯದ ಇತಿಮಿತಿಗಳನ್ನು ತಿಳಿಸಬೇಕು ಅದರಿಂದ ಅವರೇ ತಮ್ಮ ತಿಂಡಿ ತಿನಿಸುಗಳ ಮೇಲೆ ನಿಯಂತ್ರಣ ತಂದುಕೊಳ್ಳುತ್ತಾರೆ.