ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದ ದಿನಾಂಕ ಬದಲಾಗುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿದೆ.
ಇದೀಗ ಪಿಟಿಐ ವರದಿ ಮಾಡಿರುವ ಪ್ರಕಾರ ನಿಗದಿಗೂ ಒಂದು ದಿನ ಮೊದಲು ಭಾರತ- ಪಾಕ್ ಪಂದ್ಯ ನಡೆಯುವ ಸಾಧ್ಯತೆಗಳಿವೆ. ಅಕ್ಟೋಬರ್ 15 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ದಿನವೇ ನವರಾತ್ರಿಯ ಮೊದಲ ದಿನವಾಗಿರುವುದರಿಂದ ಪಂದ್ಯಕ್ಕೆ ತಡೆಯಾಗುತ್ತಿದೆ. ಉತ್ತರ ಭಾರತದಲ್ಲಿ, ಅದರಲ್ಲೂ ಗುಜರಾತ್ನಲ್ಲಿ ನವರಾತ್ರಿಯ ಮೊದಲ ದಿನವನ್ನು ರಾತ್ರಿಯಿಡಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಆ ದಿನವೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯವನ್ನು ನಡೆಸಿದರೆ, ಭಾರಿ ಪ್ರಮಾಣದ ಪ್ರೇಕ್ಷಕರು ಮೈದಾನಕ್ಕೆ ಬರಲಿದ್ದಾರೆ.ಹೀಗಾಗಿ ಪಂದ್ಯದ ವೇಳೆ ಭದ್ರತೆ ಒದಗಿಸುವುದು ಕಷ್ಟಕರವಾಗಬಹುದೆಂಬ ಯೋಚನೆಯಿಂದ ಭದ್ರತಾ ಏಜೆನ್ಸಿಗಳು ಪಂದ್ಯವನ್ನು ಬೇರೆ ದಿನ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿವೆ. ಈ ಬಗ್ಗೆ ಚರ್ಚೆ ನಡೆಸುತ್ತಿರುವ ಬಿಸಿಸಿಐ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರಲಿದೆ ಎಂದು ತಿಳಿಸಿದೆ.
ಪಿಟಿಐ ವರದಿ ಮಾಡಿರುವ ಪ್ರಕಾರ, ಪಂದ್ಯವನ್ನು ಮುಂದೂಡುವ ಬದಲು ಈಗ ನಿಗದಿಯಾಗಿರುವ ದಿನಾಂಕಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ, ಅಕ್ಟೋಬರ್ 15 ರ ಬದಲು ಅಕ್ಟೋಬರ್ 14 ರಂದು ಪಂದ್ಯವನ್ನು ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಅಲ್ಲದೆ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಉಭಯ ತಂಡಗಳ ನಡುವೆ ಪಂದ್ಯ ನಡೆಯುವುದು ಖಚಿತ ಎಂದು ವರದಿಯಾಗಿದೆ.
ಟೀಂ ಇಂಡಿಯಾ ತನ್ನ ಆರಂಭಿಕ ವಿಶ್ವಕಪ್ ಪಂದ್ಯವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದ್ದು, ಪಾಕಿಸ್ತಾನದ ಮೊದಲ ಎರಡು ಪಂದ್ಯಗಳನ್ನು ಹೈದರಾಬಾದ್ನಲ್ಲಿ ಅಕ್ಟೋಬರ್ 6 ಮತ್ತು ಅಕ್ಟೋಬರ್ 12 ರಂದು ಪಂದ್ಯವನ್ನು ಪ್ರಾರಂಭಿಸಲು ನಿಗದಿಯಾಗಿದೆ.