ಇಂದಿನ ಡಿಜಿಟಲ್ ಯುಗದಲ್ಲಿ ಪ್ರಿಂಟ್ ಮೀಡಿಯಾವನ್ನು ಕೇಳುವವರೆ ಇಲ್ಲ. ಪ್ರಿಂಟ್ ಮೀಡಿಯಾ ಕಥೆ ಮುಗಿದೇ ಹೋಯಿತು ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದಕ್ಕೆ ತಕ್ಕ ಉತ್ತರ ನೀಡುವಂತೆ ಕ್ರಿಸಿಲ್ ರೇಟಿಂಗ್ಸ್ ವರದಿಯೊಂದನ್ನು ಪ್ರಕಟಿಸಿದೆ.
ಕೊರೋನಾ ಸಂಕಷ್ಟ ಕಾಲದಲ್ಲಿ ಆದ ಬೆಳವಣಿಗೆಗಳ ನಡುವೆ ಮುದ್ರಣ ಮಾಧ್ಯಮ ಕೊನೆ ಕಾಲ ತಲುಪಿದೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಒಂದೆರಡು ವರ್ಷಗಳಲ್ಲೇ ಮುದ್ರಣ ಮಾಧ್ಯಮ ಮೈಕೊಡವಿಕೊಂಡು ನಿಂತದ್ದು ಮಾತ್ರವಲ್ಲದೆ ಆದಾಯವನ್ನೂ ಹೆಚ್ಚಿಸಿಕೊಂಡಿದೆ. ಭಾರತೀಯ ಮುದ್ರಣ ಮಾಧ್ಯಮದ ಆದಾಯ ಈ ವರ್ಷದಲ್ಲಿ ಒಟ್ಟು ಆದಾಯ 30 ಸಾವಿರ ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಕ್ರಿಸಿಲ್ ರೇಟಿಂಗ್ಸ್ ವರದಿಯಲ್ಲೇನಿದೆ?
ಭಾರತೀಯ ಮುದ್ರಣ ಮಾಧ್ಯಮದ ಆದಾಯವು ಹಣಕಾಸು ವರ್ಷ 2023-24ರಲ್ಲಿ ಶೇ.13-15ರಷ್ಟು ವೃದ್ಧಿಯಾಗಲಿದೆ. ಒಟ್ಟು ಆದಾಯವು 30,000 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಮುಂಬರುವ ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರಗಳು ಜಾಹೀರಾತು ವೆಚ್ಚವನ್ನು ಹೆಚ್ಚಿಸಲಿವೆ. ಇದರೊಟ್ಟಿಗೆ ಕಾರ್ಪೊರೇಟ್ ಕಂಪನಿಗಳೂ ಜಾಹೀರಾತುಗಳಿಗೆ ಸಂಬಂಧಿಸಿದ ವೆಚ್ಚವನ್ನು ಏರಿಸಲು ಮುಂದಾಗಿವೆ. ಹೀಗಾಗಿ, ಭಾರತೀಯ ಮುದ್ರಣ ಮಾಧ್ಯಮ ಕ್ಷೇತ್ರದ ಆದಾಯ ವೃದ್ಧಿಯಾಗಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ವರದಿಯಲ್ಲಿ ಹೇಳಲಾಗಿದೆ.
ನ್ಯೂಸ್ಪ್ರಿಂಟ್ ಬೆಲೆಯಲ್ಲಿಇಳಿಕೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿಮುದ್ರಣ ಮಾಧ್ಯಮ ವಲಯದ ಲಾಭವು ಶೇ.10ರಿಂದ 14.5ರ ತನಕ ಏರಿಕೆಯಾಗಬಹುದು. ಜೊತೆಗೆ ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಹೀಗಾಗಿ ಓದುಗರು ಮತ್ತು ಬ್ರ್ಯಾಂಡ್ಗಳು ಮುದ್ರಣ ಮಾಧ್ಯಮದತ್ತ ವಿಶ್ವಾಸ ಇಟ್ಟಿದ್ದಾರೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.
ತ್ವರಿತ ಮಾರಾಟದ ಗ್ರಾಹಕ ಉತ್ಪನ್ನಗಳು, ಬಟ್ಟೆ ಮತ್ತು ಫ್ಯಾಷನ್ ಆಭರಣಗಳಿಗೆ ದೇಶೀಯ ಬೇಡಿಕೆ ವೃದ್ಧಿಸಿದೆ. ಹೊಸ ವಾಹನಗಳನ್ನು ವಾಹನ ಕಂಪನಿಗಳು ಬಿಡುಗಡೆ ಮಾಡುತ್ತಿವೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ಹೆಚ್ಚುತ್ತಿದೆ. ಆನ್ಲೈನ್ ಶಾಪಿಂಗ್ ಮತ್ತು ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಉದ್ಯಮವು ಮುದ್ರಣ ಮಾಧ್ಯಮದ ಜಾಹೀರಾತಿಗೆ ಮೂರನೇ ಎರಡರಷ್ಟು ಕೊಡುಗೆ ನೀಡುತ್ತಿವೆ. ಮುದ್ರಣ ಮಾಧ್ಯಮದ ಜಾಹೀರಾತು ಆದಾಯದ ಬೆಳವಣಿಗೆಯ ವೇಗ ಮುಂದುವರಿಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುದ್ರಣ ಮಾಧ್ಯಮದಲ್ಲಿ ಸಾಮಾನ್ಯವಾಗಿ ಆದಾಯವು 70:30ರ ಅನುಪಾತದಲ್ಲಿ ವಿಭಜನೆಯಾಗುತ್ತದೆ. ಅಂದರೇ 70 ಪರ್ಸೆಂಟ್ ಜಾಹೀರಾತುಗಳು ಮತ್ತು 30 ಪರ್ಸೆಂಟ್ ಚಂದಾದಾರಿಕೆ ಮೂಲಕ ಆದಾಯ ಕ್ರೋಡೀಕರಣವಾಗುತ್ತದೆ. ಆದರೆ ಕೋವಿಡ್ ಬಿಕ್ಕಟ್ಟಿನಿಂದಾಗಿ 2020-21ರ ಹಣಕಾಸು ವರ್ಷದಲ್ಲಿಆದಾಯವು ಶೇ.40ರಷ್ಟು ಕುಸಿದಿತ್ತು. ಬಳಿಕ ಕಳೆದುಕೊಂಡಿದ್ದ ಬೇಡಿಕೆಯನ್ನು ಮರು ವೃದ್ಧಿಸಿಕೊಂಡ ಮುದ್ರಣ ಮಾಧ್ಯಮದ ಆದಾಯವು 2022ರಲ್ಲಿ ಶೇ.25 ಮತ್ತು 2023ರ ಹಣಕಾಸು ವರ್ಷದಲ್ಲಿ ಶೇ.15ರಷ್ಟು ವೃದ್ಧಿಯಾಯಿತು ಎಂದು ಕ್ರಿಸಿಲ್ ರೇಟಿಂಗ್ಸ್ ವರದಿಯಲ್ಲಿ ತಿಳಿಸಿದೆ.