ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಹೊಸದಾಗಿ ಕಾನ್ಸುಲೇಟ್ ಕಚೇರಿ ಆರಂಭಿಸುವುದಾಗಿ ಅಮೆರಿಕ ಘೋಷಿಸಿದ್ದು, ಇನ್ಮುಂದೆ ಬೆಂಗಳೂರಿನಲ್ಲೇ ಅಮೆರಿಕಾ ವೀಸಾ ಪಡೆಯಬಹುದಾಗಿದೆ.
ಅಮೆರಿಕಕ್ಕೆ ತೆರಳಲು ವೀಸಾ ಪಡೆಯಬೇಕಿದ್ದರೆ ಈಗ ಚೆನ್ನೈಯಲ್ಲಿರುವ ಅಮೆರಿಕ ಕಾನ್ಸುಲೇಟ್ ಅಥವಾ ರಾಯಭಾರ ಕಚೇರಿಗೆ ತೆರಳಿ ಸಂದರ್ಶನ ಹಾಗೂ ಇತರ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಆದರೆ ಇನ್ನು ಮುಂದೆ ಬೆಂಗಳೂರಿನಲ್ಲೇ ವೀಸಾ ಪಡೆಯುವ ಪ್ರಕ್ರಿಯೆಗಳನ್ನು ಪೂರೈಸಬಹುದು.
ಬೆಂಗಳೂರು ಹಾಗೂ ಗುಜರಾತ್ನ ಅಹಮದಾಬಾದ್ನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ತೆರೆಯುವುದಾಗಿ ಅಮೆರಿಕ ಘೋಷಿಸಿರುವುದು ಭಾರತದ ಐಟಿ ಕ್ಯಾಪಿಟಲ್ ಎನಿಸಿರುವ ಬ್ರ್ಯಾಂಡ್ ಬೆಂಗಳೂರಿಗೆ ಬೂಸ್ಟ್ ನೀಡಲಿದೆ. ಪ್ರತಿಯಾಗಿ ಭಾರತವು ಸಿಯಾಟಲ್ನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವ ಘೋಷಣೆಯನ್ನು ಮಾಡಿದೆ.
ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ತೇಜಸ್ವಿ ಸೂರ್ಯ :
ಅಮೆರಿಕ ರಾಯಭಾರ ಕಚೇರಿಯು ಬೆಂಗಳೂರಿನಲ್ಲಿ ಆರಂಭವಾಗಲು ಕಾರಣೀಕರ್ತರಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ. ಬೆಂಗಳೂರಿನಲ್ಲಿ ರಾಯಭಾರಿ ಕಚೇರಿಯ ಸ್ಥಾಪನೆಯ ವಿಚಾರವಾಗಿ ತೇಜಸ್ವಿ ಸೂರ್ಯ ಅವರು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದ್ದರು.
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿಯನ್ನು ಸ್ಥಾಪಿಸುತ್ತಿರುವುದಕ್ಕೆ ಪ್ರಧಾನಿ ಮೋದಿ ಅವರಿಗೆ ಮತ್ತು ಕೇಂದ್ರ ವಿದೇಶಾಂಗ ಸಚಿವರಾದ ಜೈಶಂಕರ್ ಅವರಿಗೆ ಧನ್ಯವಾದಗಳು. ಸಾವಿರಾರು ಅಂತರಾಷ್ಟ್ರೀಯ ಕಂಪನಿಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಮತ್ತು ಐಟಿ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿಗೆ ಇದು ಬೇಕೆಂಬುದು ದೀರ್ಘ ಕಾಲದ ಬೇಡಿಕೆಯಾಗಿತ್ತು. ಇದರಿಂದ ಲಕ್ಷಾಂತರ ಕನ್ನಡಿಗರಿಗೆ ಮತ್ತು ನಮ್ಮ ನಗರಕ್ಕೆ ಸಹಾಯವಾಗಲಿದೆ ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.