ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 12:30 ಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಪಟ್ಟ ಅಲಂಕರಿಸುತ್ತಿದ್ದಾರೆ. ಇವರ ಜೊತೆ ಉಪಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಹಾಗೆಯೇ ಅವರ ಜೊತೆ ಎಂಟು ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಬಿಹಾರದ ಸಿಎಂ ನಿತೀಶ್ ಕುಮಾರ್, ಹಿಮಾಚಲ ಪ್ರದೇಶ ಸಿಎಂ ಸಖ್ಖೀಂದರ್ ಸಿಂಗ್ ಸುಖು. ಪುದುಚೇರಿ ಸಿಎಂ ಎನ್.ರಂಗಸ್ವಾಮಿ, ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಹಾಗೂ ಜಾರ್ಖಂಡ್ ಸಿಎಂ ಹೇಮಂಥ್ ಸೊರೇನ್ ಕಾರ್ಯಕ್ರಮದಲ್ಲಿ ಪಾಲ್ಗೋಳಲಿದ್ದಾರೆ.
ಈ ಬೃಹತ್ ಕಾರ್ಯಕ್ರಮಕ್ಕೆ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಯನ್ನು ಮಾಡಿದ್ದು, ವೇದಿಕೆಯ ಮೇಲೆ 30 ಜನ ಗಣ್ಯರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಶಾಸಕರು ಮತ್ತು ಅವರ ಕುಟುಂಬದವರಿಗೆ, ವಿವಿಐಪಿ ಹಾಗೂ ಪಕ್ಷದ ಹಿರಿಯರಿಗೆ ವೇಧಿಕೆಯ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಸ್ಟೇಡಿಯಂ ಮಧ್ಯಭಾಗದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಬಿಗಿ ಪೋಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಹಾಗೂ ಬರುವ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಊಟ , ತಿಂಡಿ ವ್ಯವಸ್ಥೆಯನ್ನು ಮಾಡಲಾಗಿದೆ.