ಯೋಗ ಸಂದೇಶ ಪ್ರಚಾರ ಮಾಡುವಲ್ಲಿ ಮಾಧ್ಯಮಗಳ ಕೊಡುಗೆ ಗುರುತಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ನ ಎರಡನೇ ಆವೃತ್ತಿಯನ್ನು ಪ್ರಕಟಿಸಿದೆ. ‘ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್ 2023’ ರ ಅಡಿಯಲ್ಲಿ ಮುದ್ರಣ, ದೂರದರ್ಶನ ಮತ್ತು ರೇಡಿಯೋ ವಿಭಾಗಗಳಿಗೆ ತಲಾ 33 ರಂತೆ ಪ್ರಶಸ್ತಿ ನೀಡಲಾಗುತ್ತದೆ.
ಭಾರತ ಮತ್ತು ವಿದೇಶಗಳಲ್ಲಿ ಯೋಗವನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ವಹಿಸುವ ಪ್ರಮುಖ ಪಾತ್ರವನ್ನು ಶ್ಲಾಘಿಸಲಾಗುತ್ತದೆ.ನಾವು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವಾಗ ಈ ಪುರಾತನ ಅಭ್ಯಾಸ ಮತ್ತು ಅದರ ಪ್ರಯೋಜನಗಳನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ಹೊಂದಿರುವ ಜವಾಬ್ದಾರಿಯನ್ನು ಗುರುತಿಸುವುದು ಬಹಳ ಮುಖ್ಯ ಎಂದು ಪ್ರಶಸ್ತಿ ಘೋಷಣೆಯ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಯೋಗವು ಗಡಿ ಮತ್ತು ಸಂಸ್ಕೃತಿಗಳನ್ನು ಮೀರಿದ್ದು, ವಿಶ್ವದಾದ್ಯಂತ ಲಕ್ಷಾಂತರ ಜನರ ಗಮನವನ್ನು ಸೆಳೆದಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಅದರ ಸಮಗ್ರ ವಿಧಾನವು ಗಮನಾರ್ಹ ಆಸಕ್ತಿಯನ್ನು ಗಳಿಸಿದೆ. ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಯೋಗದ ಪರಿವರ್ತನಾ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಮಾಧ್ಯಮಗಳ ಅವಿರತ ಪ್ರಯತ್ನವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗುರುತಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ನ 2 ನೇ ಆವೃತ್ತಿಯನ್ನು ನಡೆಸಲು ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಯಾರಿಗೆಲ್ಲ ಈ ಪ್ರಶಸ್ತಿ ದೊರೆಯಲಿದೆ:
ಮುದ್ರಣ ಮಾಧ್ಯಮದಲ್ಲಿ ಯೋಗದ ಬಗ್ಗೆ ಅತ್ಯುತ್ತಮ ಕೊಡುಗೆ ನೀಡಿದ 22 ಭಾರತೀಯ ಭಾಷಾ ದಿನಪತ್ರಿಕೆಗಳು ಹಾಗೂ 11 ಇಂಗ್ಲಿಷ್ ಪತ್ರಿಕೆಗಳಿಗೆ “ಪತ್ರಿಕೆಯಲ್ಲಿ ಯೋಗದ ಅತ್ಯುತ್ತಮ ಮಾಧ್ಯಮ ಪ್ರಸಾರ” ಪ್ರಶಸ್ತಿ ನೀಡಲಾಗುತ್ತದೆ.
ದೂರದರ್ಶನ ಮಾಧ್ಯಮದಲ್ಲಿ ಯೋಗ ಪ್ರಸಾರದ ಬಗ್ಗೆ ಅತ್ಯುತ್ತಮ ಕೊಡುಗೆ ನೀಡಿದ 22 ಭಾರತೀಯ ಭಾಷಾ ಟಿವಿಗಳಿಗೆ ಹಾಗೂ 11 ಇಂಗ್ಲಿಷ್ ಟಿವಿಗಳಿಗೆ “ವಿದ್ಯುನ್ಮಾನ ಮಾಧ್ಯಮದಲ್ಲಿ ಯೋಗದಲ್ಲಿ ಅತ್ಯುತ್ತಮ ಮಾಧ್ಯಮ ಪ್ರಸಾರ (ಟಿವಿ)” ಎಂಬ ಪ್ರಶಸ್ತಿ ನೀಡಲಾಗುತ್ತದೆ.
ರೇಡಿಯೋ ಮಾಧ್ಯಮದಲ್ಲಿ ಯೋಗ ಪ್ರಸಾರದ ಬಗ್ಗೆ ಅತ್ಯುತ್ತಮ ಕೊಡುಗೆ ನೀಡಿದ 22 ಭಾರತೀಯ ಭಾಷಾ ರೇಡಿಯೋಗಳಿಗೆ ಹಾಗೂ 11 ಇಂಗ್ಲಿಷ್ ರೇಡಿಯೋಗಳಿಗೆ “ವಿದ್ಯುನ್ಮಾನ ಮಾಧ್ಯಮದಲ್ಲಿ ಯೋಗದಲ್ಲಿ ಅತ್ಯುತ್ತಮ ಮಾಧ್ಯಮ ಪ್ರಸಾರ (ರೇಡಿಯೋ)” ಪ್ರಶಸ್ತಿ ನೀಡಲಾಗುತ್ತದೆ.
ಮಾಧ್ಯಮ ಸಮ್ಮಾನ್ ಪ್ರಶಸ್ತಿಗೆ ಮಾರ್ಗಸೂಚಿ:
ಜೂನ್ 10, 2023 ರಿಂದ ಜೂನ್ 25, 2023 ರ ಅವಧಿಯಲ್ಲಿ ರಚಿಸಲಾದ ಮತ್ತು ಪ್ರಕಟಿಸಿದ ಅಥವಾ ಆಡಿಯೋ ಅಥವಾ ದೃಶ್ಯ ವಿಷಯ ಪ್ರಸಾರ ಮಾಡಿದ ಲೇಖನಗಳ ಸಂಬಂಧಿತ ತುಣುಕುಗಳೊಂದಿಗೆ ಮಾಧ್ಯಮ ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ವಿವರಗಳನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 1 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ pib.gov.in/indexd.aspx ಅಥವಾ mib.gov.in/ ಭೇಟಿ ನೀಡಬಹುದು.