ಅಜ್ಮೀರ್: ರಾಜಸ್ಥಾನದ ಅಜ್ಮೀರ್ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾಕ್ಕೆ ಜಿಯಾರತ್ ಸಲ್ಲಿಸಲು ತೆರಳಿದ್ದ ಯಾತ್ರಾರ್ಥಿಯೊಬ್ಬರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೈಹಿಕ ಹಲ್ಲೆ ಪ್ರಕರಣ ನಡೆದಿರುವುದನ್ನು ಸೋಮವಾರ ಮಾಧ್ಯಮಗಳು ವರದಿ ಮಾಡಿವೆ. ದರ್ಗಾದ ಖಾದಿಮ್ ರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಸಂತ್ರಸ್ತ ಸರ್ವರ್ ಹುಸೇನ್ ಆರೋಪಿಸಿದ್ದಾರೆ.
ಸಂತ್ರಸ್ತನ ಪ್ರಕಾರ, ದರ್ಗಾದಲ್ಲಿದ್ದ ಖಾದಿಮ್ ರು ಝಿಯಾರತ್ಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅವರ ತಲೆ ಬೋಳಿಸಿ ಅರ್ಧ ಮೀಸೆ ಕತ್ತರಿಸಿ ತಮ್ಮ ಹಣವನ್ನೆಲ್ಲ ಲೂಟಿ ಮಾಡಿದ್ದಾರೆ ಎಂದು ಸಂತ್ರಸ್ತ ಸರ್ವರ್ ಹುಸೇನ್ ತಿಳಿಸಿದ್ದಾರೆ. ಘಟನೆಯ ನಂತರ ಪೊಲೀಸರು ಈ ಪ್ರಕರಣದಲ್ಲಿ 3 ಖಾದಿಮ್ ರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈ ಘಟನೆ ಶನಿವಾರ (23 ಸೆಪ್ಟೆಂಬರ್ 2023) ನಡೆದಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಬುರ್ಹಾನ್ಪುರದ ನಿವಾಸಿ ಸರ್ವರ್ ಹುಸೇನ್ ಘಟನೆಯ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಸೆಪ್ಟೆಂಬರ್ 23 ರಂದು ತನ್ನ ಸ್ನೇಹಿತರಾದ ಮನೀಶ್ ಮತ್ತು ಆಸಿಫ್ ಅವರೊಂದಿಗೆ ಅಜ್ಮೀರ್ ಷರೀಫ್ ದರ್ಗಾಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅವರು ಅಲ್ಲಿಗೆ ತಲುಪಿದಾಗ, ಸೈಯದ್ ರಹಮತ್ ಅಲಿ ಎಂಬ ದರ್ಗಾದ ಖಾದಿಮ್ ಅವರೆಲ್ಲರಿಂದ ಝಿಯಾರತ್ ಗೆ ಹಣವನ್ನು ಕೇಳಿದ್ದಾನೆ. ಆದರೆ ಸರ್ವಾರ್ ಹುಸೇನ್ ಹಣ ನೀಡಲು ನಿರಾಕರಿಸಿದಾಗ, ಖಾದಿಮ್ ಮತ್ತು ಅವರ ಬೆಂಬಲಿಗರು ಅವರನ್ನು ಥಳಿಸಲು ಪ್ರಾರಂಭಿಸಿದರು. ಸರ್ವರನ್ನು ಥಳಿಸಿದ ಬಳಿಕ ಆರೋಪಿಗಳು ಬಲವಂತವಾಗಿ ದರ್ಗಾದ ಇನ್ನೊಂದು ಭಾಗಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆರೋಪಿಗಳು ಬಲವಂತವಾಗಿ ನನ್ನ ತಲೆಯನ್ನು ಬೋಳಿಸಿದ್ದು ಮೀಸೆಯ ಒಂದು ಭಾಗವನ್ನು ಟ್ರಿಮ್ ಮಾಡಿದರು ಎಂದು ಸರ್ವರ್ ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ಆತನ ಜೇಬಿನಲ್ಲಿಟ್ಟಿದ್ದ ಹಣವನ್ನೆಲ್ಲಾ ದೋಚಿದ್ದಾರೆ. ಖಾದಿಮ್ ನ ಸಹಚರರನ್ನು ಖಾಸಿಮ್ ಮತ್ತು ಮೊಹಮ್ಮದ್ ಫೈಜ್ ಸಲ್ಮಾನಿ ಎಂದು ಗುರುತಿಸಲಾಗಿದೆ.
ಸ್ಥಳೀಯ ಪೊಲೀಸರಿಗೆ ನೀಡಿದ ದೂರಿನಲ್ಲಿ, ಸರ್ವರ್ ಹುಸೇನ್ ತನ್ನನ್ನು ಥಳಿಸಿ ನಿಂದಿಸಿದವರಲ್ಲಿ ಮೂವರು ಮಹಿಳೆಯರೂ ಇದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಆರೋಪಿಗಳು ಸರ್ವರ್ ಅವರನ್ನೇ , ಜೇಬುಗಳ್ಳ ಎಂದು ಆರೋಪಿಸಿದ್ದಾರೆ. ಸರ್ವರ್ ದೂರಿನ ಮೇರೆಗೆ ಖಾದಿಮ್ ಸೈಯದ್ ರೆಹಮತ್ ಅಲಿ ಹಾಗೂ ಆತನ ಸಹಚರರಾದ ಖಾಸಿಂ ಶೇಖ್ ಮತ್ತು ಫೈಜ್ ಸಲ್ಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಠಾಣೆ ಪ್ರಭಾರಿ ಜಗದೀಶ್ ಮೀನಾ, ಕೃತ್ಯವನ್ನು ಖಚಿತಪಡಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.