ಕಾವೇರಿ ಸಮಸ್ಯೆ ಇಂದು ನಿನ್ನೆಯದೇನಲ್ಲ. ಆದರೆ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಏಕೆ ಕರ್ನಾಟಕಕ್ಕೆ ಸಾಧ್ಯವಾಗುತ್ತಿಲ್ಲ? ಕರ್ನಾಟಕಕ್ಕೆ ಏಕೆ ಮತ್ತೆ ಮತ್ತೆ ಅನ್ಯಾಯವಾಗುತ್ತಿದೆ? ಈವರೆಗೆ ಅಧಿಕಾರ ನಡೆಸಿದ ನಾಯಕರೇ ಇದಕ್ಕೆ ಉತ್ತರಿಸಬೇಕಾಗುತ್ತದೆ. ನಮ್ಮ ರಾಜಕೀಯ ಪಕ್ಷಗಳ ಅಸಾಮರ್ಥ್ಯದ ಪರಿಣಾಮವಾಗಿ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತಿದೆ ಎನ್ನುವುದರಲ್ಕಿ ಸಂದೇಹವಿಲ್ಲ. ಅನೇಕ ದಶಕಗಳಿಂದ ತಮಿಳ್ನಾಡು ಈ ವಿಷಯವಾಗಿ ಕರ್ನಾಟಕವನ್ನು ಕಾಡುತ್ತಲೇ ಬಂದಿದೆ.
ಅದಕ್ಕೆ ತಕ್ಕಂತೆ ಕಾವೇರಿ ನೀರು ಹಂಚಿಕೆ ನಿರ್ಧರಿಸುವ ಸಮಿತಿ ಮತ್ತು ಪ್ರಾಧಿಕಾರಗಳ ಸದಸ್ಯರಲ್ಲೂ ಸಾಮಾನ್ಯ ಜ್ಞಾನದ ಕೊರತೆ ಇದೆಯೆನಿಸುತ್ತದೆ. ಏಕೆಂದರೆ ಕಾವೇರಿ ನದಿಯ ನೀರು ಇರುವುದು ಕೇವಲ ತಮಿಳ್ನಾಡಿಗೆ ಬಿಡುವುದಕ್ಕಲ್ಲ. ಕರ್ನಾಟಕದ ಜನರಿಗೆ ಮೊದಲು ಕುಡಿಯಲು ಮತ್ತು ನೀರಾವರಿಗೆ ಅಗತ್ಯ ಪ್ರಮಾಣದ ನೀರು ಒದಗಿಸಿದ ನಂತರ ಉಳಿದರೆ ತಮಿಳ್ನಾಡಿಗೆ ನೀಡುವುದು ಸಾಧ್ಯ. ಮಳೆಯೇ ಸರಿಯಾಗಿ ಆಗದೆ ಕಾವೇರಿ ಜಲಾಶಯಗಳಲ್ಲಿ ನೀರೇ ಇಲ್ಲದಂತಾಗಿರುವಾಗಲೂ ತಮಿಳ್ನಾಡಿಗೆ ನೀರು ಬಿಡಿ ಎನ್ನುವುದು ತಿಳಿಗೇಡಿತನದ ಲಕ್ಷಣ.
ಸರ್ವೋಚ್ಚ ನ್ಯಾಯಾಲಯ ಈ ಅಂಶವನ್ನು ಗಮನಿಸುತ್ತಿಲ್ಲವೇಕೆ ಎಂಬುದು ಅಚ್ಚರಿಯ ವಿಷಯ. ದಿಲ್ಲಿಯಲ್ಲಿ ಕುಳಿತು ನೀರಿನ ಪ್ರಮಾಣ ನಿರ್ಧರಿಸುವುದಲ್ಲ. ಕಾವೇರಿ ತೀರಕ್ಕೆ ಖುದ್ದಾಗಿ ಬಂದು ಇಲ್ಲಿಯ ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ನಿರ್ಧಾರ ಕೈಕೊಳ್ಳಬೇಕು. ಮನಸ್ಸಿಗೆ ಬಂದ ಹಾಗೆ ನೀರು ಬಿಡಿ ಎಂದರೆ ಕಾವೇರಿಯಲ್ಲಿ ಅಷ್ಟು ನೀರು ಇರಬೇಡವೇ? ಯಾಕೆ ಈ ಸಾಮಾನ್ಯ ಅಂಶವೂ ಅವರಿಗೆ ಅರ್ಥವಾಗುತ್ತಿಲ್ಲ? ಅಥವಾ ಅರ್ಥವಾಗಿದ್ದರೂ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ? ಯಾಕೆ ಸುಪ್ರೀಂ ಕೋರ್ಟಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡಲು ನಮ್ಮ ಪರ ವಾದ ಮಂಡಿಸುವ ನ್ಯಾಯವಾದಿಗಳಿಗೆ ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರಿಗಂತೂ ಇದು ಅರ್ಥವಾಗುತ್ತಿಲ್ಲ. ಈ ವರ್ಷ ಮಳೆಯ ತೀವ್ರ ಕೊರತೆ ಇದೆ. ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕಂಗಾಲಾಗಿದ್ದಾರೆ. ಕಾವೇರಿ ಬರಿದಾಗಿದೆ. ಆದರೂ ನೀರು ಬಿಡಿ ಎಂದರೆ ಎಲ್ಲಿಂದ ನೀರು ತರಬೇಕು? ಮೂರ್ಖತನದ ಪರಮಾವಧಿ ಇದು.
ತಪ್ಪು ನಿರ್ಧಾರಗಳಿಂದಾಗಿ ರಾಜ್ಯ ತೊಂದರೆಗೆ ಸಿಲುಕಿದೆ
ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯದಲ್ಲಿ ಈವರೆಗೆ ಆಳಿದ ಸರಕಾರಗಳ ಅಸಮರ್ಪಕ ನಿರ್ವಹಣೆಯ ಪರಿಣಾಮವಾಗಿ ಬಹಳ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಿಬಂದಿದೆ. ಈ ವಿಷಯದಲ್ಲಿ ಎಲ್ಲರೂ ಎಡವಿದ್ದಾರೆ. ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಗೆ ಸಿಲುಕಿದ್ದೇವೆ. ಈವರೆಗೂ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲವೆನ್ನುವುದು ಅಧಿಕಾರಕ್ಕೆ ಬಂದ ಹಿಂದಿನ ಎಲ್ಲ ಸರಕಾರಗಳ ನಿರ್ಲಕ್ಷ್ಯದ ಫಲ ಎನ್ನಬಹುದು. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಸರ್ವೋಚ್ಚ ನ್ಯಾಯಾಲಯದಿಂದಲೂ ನ್ಯಾಯ ಸಿಗದಂತಾಗಿದೆ. ಇದಕ್ಕೆ ಹೊಣೆ ಯಾರು ಹೊರಬೇಕು? ಈ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ? ಕರ್ನಾಟಕದ ವಾದ ದುರ್ಬಲವಾಗಿದೆಯೇ? ವಸ್ತುಸ್ಥಿತಿಯ ಸಮರ್ಪಕವಾದ ವಿವರಣೆ ನೀಡುವಲ್ಲಿ ನಮ್ಮ ಸರಕಾರದ ಪರ ವಾದ ಮಂಡಿಸುವವರು ವಿಫಲರಾಗಿದ್ದಾರೆಯೇ? ಅಥವಾ ನಮ್ಮ ವಾದವನ್ನು ನ್ಯಾಯಪೀಠವೇ ಗಂಭೀರವಾಗಿ ಪರಿಗಣಿಸುತ್ತಿಲ್ಲವೇ? ಕರ್ನಾಟಕದ ಜನರ ತೊಂದರೆಗಳನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳುತ್ತಿಲ್ಲವೇ? ಮೈಸೂರಿಗೆ ಬಂದು ವಾಸ್ತವಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುತ್ತಿಲ್ಲವೇ? ಕಾವೇರಿ ಪ್ರಾಧಿಕಾರ ದಿಲ್ಲಿಯಲ್ಲಿ ಕುಳಿತು ತನಗೆ ಸರಿಕಂಡ ನಿರ್ಣಯ ತೆಗೆದುಕೊಳ್ಳುವುದು ಸರಿಯೇ? ಇತ್ಯಾದಿ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ಸಿಗುತ್ತಿಲ್ಲ.
ಸಮಸ್ಯೆ ಬಹಳ ಗಂಭೀರವಾಗಿದೆ. ಇದರ ಪರಿಣಾಮವನ್ನು ಸರಕಾರ ಮತ್ತು ಜನತೆ ಇಬ್ಬರೂ ಅನುಭವಿಸಬೇಕಾಗುತ್ತದೆ. ಮಳೆಯಿಲ್ಲದೆ ಬರಗಾಲ ಕಾಲಿಟ್ಟಿದೆ. ಕುಡಿಯುವ ನೀರು, ರೈತರ ಬೆಳೆಗೆ ನೀರು ಎರಡನ್ನೂ ಎಲ್ಲಿಂದ ಒದಗಿಸಬೇಕೆನ್ನುವ ಪ್ರಶ್ನೆಯಿದೆ. ಈ ಬಗೆಯ ಕುರುಡು ನ್ಯಾಯವನ್ನು ಸುಪ್ರೀಂ ಕೋರ್ಟನಿಂದ ಯಾರೂ ನಿರೀಕ್ಷಿಸಿರಲಿಲ್ಲ. ಹರ ಕೊಲ್ಲಲ್ ನರ ಕಾಯ್ವನೇ ಎಂಬಂತೆ ಸುಪ್ರೀಂ ಕೋರ್ಟಿನಿಂದಲೂ ನ್ಯಾಯ ಸಿಗದೇ ಇದ್ದಾಗ ನಾವು ನ್ಯಾಯಕ್ಕಾಗಿ ಇನ್ನೆಲ್ಲಿಗೆ ಹೋಗಬೇಕು? ಅರ್ಥವಾಗದ ವಿಷಯ