ನಮ್ಮ ದೇಹದ ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿರುತ್ತದೆ. ಅದು ಮಾಡಿಲ್ಲ ಅಂದ್ರೆ ಅದಕ್ಕೆ ಏನೋ ಸಮಸ್ಯೆಯಾಗಿದೆ ಎಂದೇ ಅರ್ಥ. ಸರಿ ಹೋಗಬಹುದು ಬಿಡು ಅಂತಾ ನಿರ್ಲಕ್ಷ್ಯ ಮಾಡೋ ಬದಲು ಅದರ ಸಮಸ್ಯೆ ಏನೆಂದು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಒಳ್ಳೆಯ ಪರಿಮಳವೇ ಇರಲಿ ಅಥವಾ ಕೆಟ್ಟ ವಾಸನೆಯಿರಲಿ ಅದು ನಮಗೆ ತಿಳಿಸೋದು ನಮ್ಮ ಮೂಗು. ಮೂಗಿನ ಗ್ರಹಿಕೆಯ ಸಾಮರ್ಥ್ಯದಿಂದಲೇ ಎಷ್ಟೋ ಮಂದಿ ಇದು ಇಂತಹುದೇ ವಸ್ತು ಎಂದು ಕಂಡುಹಿಡಿಯುತ್ತಾರೆ. ಮನುಷ್ಯರ ಹೊರತಾಗಿ ಪ್ರಾಣಿ, ಪಕ್ಷಿ, ಸಣ್ಣ ಕೀಟಗಳಿಗೂ ಕೂಡ ವಾಸನೆಯನ್ನು ಗ್ರಹಿಸುವ ಶಕ್ತಿ ಚೆನ್ನಾಗಿರುತ್ತದೆ. ಚಿಕ್ಕ ಇರುವೆಗಳು ಸಿಹಿಯ ವಾಸನೆಯನ್ನು ಹಾಗೂ ಬೇಟೆಯಾಡುವ ಪ್ರಾಣಿಗಳು ತನ್ನ ಬೇಟೆಯನ್ನು ವಾಸನೆಯ ಮೂಲಕವೇ ಕಂಡುಹಿಡಿಯುತ್ತವೆ.
ನಾಯಿಗಳಿಗಂತೂ ವಾಸನೆಯನ್ನು ಗ್ರಹಿಸುವ ಶಕ್ತಿ ಹೇರಳವಾಗಿರುವುದು ನಮಗೆ ತಿಳಿದಿದೆ. ನಮಗೆ ಶೀತವಾದಾಗ ಅಥವಾ ಜ್ವರ ಬಂದಾಗ ಕೆಲಮೊಮ್ಮೆ ಮೂಗು ತನ್ನ ಗ್ರಹಿಕೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಯಾವುದೇ ರೀತಿಯ ವಾಸನೆ ಬರೋದಿಲ್ಲ. ಇದರ ಹೊರತಾಗಿ ಬೇರೆ ಸಂದರ್ಭದಲ್ಲಿ ನಿಮ್ಮ ಮೂಗು ವಾಸನೆಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡಿದೆ ಎಂದಾದರೆ ನಿಮ್ಮ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂದರ್ಥ.
ಮೂಗು ವಾಸನೆ ಗ್ರಹಿಸುತ್ತಿಲ್ಲ ಎಂದಾದರೆ ಅದನ್ನು ನಿರ್ಲಕ್ಷಿಸಬೇಡಿ:
ಮೂಗು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಯಾವಾಗ ಕಳೆದುಕೊಳ್ಳುತ್ತದೆ ಎನ್ನುವುದರ ಬಗ್ಗೆ ಸಂಶೋಧನೆ ನಡೆಸಲಾಯ್ತು. ಇದನ್ನು ಅಮೆರಿಕದ ಜಾನ್ ಹಾಪ್ ಕಿಂಮ್ಸ್ ಮೆಡಿಸಿನ್ ನ ವಿಜ್ಞಾನಿಗಳು ನಡೆಸಿದ್ದರು. ಈ ಸಂಶೋಧನೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಅಧ್ಯಯನದ ಪ್ರಕಾರ, ವ್ಯಕ್ತಿಯ ವಾಸನೆ ಗ್ರಹಿಸುವ ಶಕ್ತಿ ಕೆಡುವುದು ಆತನ ಆರೋಗ್ಯ ಹದಗೆಟ್ಟಿರುವುದರ ಮುನ್ಸೂಚನೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಿಮಗೆ ವಾಸನೆ ಬರುತ್ತಿಲ್ಲ ಎಂದಾದರೆ ನಿಮ್ಮ ಮೆಂಟಲ್ ಹೆಲ್ತ್ ಹಾಳಾಗುತ್ತಿದೆ ಅಥವಾ ನೀವು ಡಿಪ್ರೆಶನ್ ಗೆ ಹೋಗಲಿದ್ದೀರಿ ಎನ್ನುವುದರ ಸಂಕೇತ ಇದಾಗಿದೆ.
ವಾಸನೆ ಗ್ರಹಿಕೆಗೆ ಸಂಬಂಧಿಸಿದಂತೆ ಯಾವ ತೊಂದರೆಯಿದ್ದರೂ ಮೊದಲು ವೈದ್ಯರನ್ನು ಪರೀಕ್ಷಿಸಬೇಕು. ನೀವು ಎಷ್ಟು ಮುಂಚಿತವಾಗಿ ವೈದ್ಯರನ್ನು ಕಾಣುತ್ತೀರೋ ಅಷ್ಟು ಬೇಗ ಗುಣಮುಖರಾಗುತ್ತೀರಾ ಎನ್ನುವುದು ಮರಿಬಾರದು. ನಿಮ್ಮ ಶರೀರದಲ್ಲಿ ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿಗೆ ಹೋಗಲು ವಿಳಂಬ ಮಾಡಬಾರದು. ಏಕೆಂದರೆ ನಿಮ್ಮ ನಿರ್ಲಕ್ಷವೇ ನಿಮ್ಮ ಜೀವಕ್ಕೆ ಅಪಾಯ ಉಂಟುಮಾಡಬಹುದು. ಅದಕ್ಕಾಗಿ ನಮ್ಮ ದೇಹದಲ್ಲಿ ಏನೇ ಏರುಪೇರು ಉಂಟಾದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.