ದಕ್ಷಿಣ ಅಮೆರಿಕಾದ ಸುರಿನಾಮ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ’ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ಯೆಲ್ಲೋ ಸ್ಟಾರ’ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರದಾನ ಮಾಡಿ ಗೌರವಿಸಿದೆ. ದ್ರೌಪದಿ ಮುರ್ಮ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪರ್ಸಾದ್ ಸಂತೋಖಿ ಅವರಿಂದ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಮುರ್ಮು, ಈ ಗೌರವ ತನಗೆ ಮಾತ್ರವಲ್ಲ, ಭಾರತೀಯ ಜನರಿಗೂ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
“ಸುರಿನಾಮ್ ಅವರ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ಸ್ವೀಕರಿಸಲು ನನಗೆ ತುಂಬಾ ಗೌರವವಿದೆ. ಈ ಮನ್ನಣೆ ನನಗೆ ಮಾತ್ರವಲ್ಲ, ನಾನು ಪ್ರತಿನಿಧಿಸುವ ಭಾರತದ 1.4 ಶತಕೋಟಿ ಜನರಿಗೂ ಬಹಳ ಮಹತ್ವದ್ದಾಗಿದೆ” ಎಂದು ಮುರ್ಮು ಟ್ವೀಟ್ ಮಾಡಿದ್ದಾರೆ.
ಎರಡು ದೇಶಗಳ ನಡುವಿನ ಭಾತೃತ್ವ ಸಂಬಂಧವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಭಾರತೀಯ ಮತ್ತು ಸುರಿನಾಮ್ ಸಮುದಾಯದಗಳಿಗೆ ನಾನು ಗೌರವನ್ನು ಸಲ್ಲಿಸುತ್ತೇನೆ ಎಂದು ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳಿಗೆ ಶುಭ ಹಾರೈಸಿದ್ದು, “ಸುರಿನಾಮ್ ಅತ್ಯುನ್ನತ ನಾಗರಿಕ ಪ್ರಶಸ್ತಿ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಪ್ರಶಸ್ತಿ ಪಡೆದ ರಾಷ್ಟ್ರಪತಿ ಅವರಿಗೆ ಅಭಿನಂದನೆಗಳು. ಸುರಿನಾಮ್ ಸರ್ಕಾರ ಮತ್ತು ಜನರ ಈ ವಿಶೇಷ ಗೌರವ ನಮ್ಮ ದೇಶಗಳ ನಡುವಿನ ಶಾಶ್ವತ ಸ್ನೇಹದ ಸಂಕೇತವಾಗಿದೆ” ಎಂದು ಹೇಳಿದ್ದಾರೆ.
ವಿದೇಶಿ ಪ್ರವಾಸದಲ್ಲಿರುವ ಮುರ್ಮು ಜೂನ್ 4 ರಂದು ಸುರಿನಾಮ್ನ ಪರಮಾರಿಬೊಗೆ ಭೇಟಿ ನೀಡಿದ್ದಾರೆ. ಭಾರತ ಮತ್ತು ಸುರಿನಾಮ್ ಸೋಮವಾರ ಆರೋಗ್ಯ, ಕೃಷಿ ಮತ್ತು ಸಾಮರ್ಥ್ಯ ನಿರ್ಮಾಣ ಕ್ಷೇತ್ರಗಳಲ್ಲಿ ನಾಲ್ಕು ಪ್ರಮುಖ ತಿಳುವಳಿಕೆ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಿವೆ.