ಯುಟ್ಯೂಬ್ ನಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಸಬ್ ಸ್ಕ್ರೈಬರ್ ಹೊಂದಿರುವ ಕನ್ನಡದ ವ್ಲಾಗರ್ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಇದೀಗ ಸಿನಿಮಾದಲ್ಲೂ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.
ಗಗನ್ ಶ್ರೀನಿವಾಸ್ ವಯಸ್ಸು 23, ಇಷ್ಟು ಚಿಕ್ಕ ವಯಸ್ಸಿನಲ್ಲಿ ಹತ್ತಾರು ದೇಶಗಳನ್ನು ಸುತ್ತುತ್ತಾ ಕರುನಾಡಿಗರಿಗೆಲ್ಲ ಕುಳಿತಲ್ಲೇ ಪ್ರಪಂಚ ತೋರಿಸುತ್ತಾ ಮನರಂಜನೆ ನೀಡುತ್ತಿದ್ದಾರೆ.
ಫೇಸ್ ಬು ಕ್ ಮತ್ತು ಯೂಟ್ಯೂಬ್ ನಲ್ಲಿ ಸರಣಿ ವಿಡಿಯೋಗಳನ್ನು ಶೇರ್ ಮಾಡುತ್ತ, ವಿದೇಶದ ಆಹಾರ ಪದ್ಧತಿ, ಪ್ರಸಿದ್ಧ ಸ್ಥಳಗಳನ್ನು ಹಾಗೂ ಅಲ್ಲಿನ ಆಚರಣೆಗಳು ವೀಕ್ಷಕರ ಕಣ್ಮುಂದೆ ಉಣಬಡಿಸುತ್ತಿರುವ ಅಸಾಮಾನ್ಯ ವ್ಯಕ್ತಿ ಈ ಗಗನ್.
ಆಫ್ರಿಕಾ, ಆಫ್ಘಾನಿಸ್ತಾನ, ಇಂಡೋನೇಷ್ಯಾ, ಯೂರೋಪ, ಪಾಕಿಸ್ತಾನ ಹೀಗೆ ಹತ್ತಾರು ದೇಶಗಳಿಗೆ ಸುತ್ತಾಡಿ ಅಲ್ಲಿನ ಮಾಹಿತಿಯನ್ನು ಅಂಗೈಯಲ್ಲಿ ಒದಗಿಸುವ ಹುಡುಗನನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನೋಡಬೇಕೆಂಬುದು ಸಾಕಷ್ಟು ಮಂದಿಯ ಆಶಯವಾಗಿದೆ.
ಇದೀಗ ಡಾ.ಬ್ರೋ ಸಿನಿಮಾ ಕ್ಷೇತ್ರಕ್ಕೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದ್ದಾರೆ. ಡೇರ್ ಡೇವಿಲ್ ಮುಸ್ತಾಫ ಎಂಬ ಸಿನಿಮಾದಲ್ಲಿ ಗಗನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರು ಕಾಣಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ ಬಿಡುಗಡೆ ಆಗಿದ್ದ ಟ್ರೈಲರ್ ನಲ್ಲಿ ಡಾ.ಬ್ರೋ ದು ಧ್ವನಿ ಇರುವುದು ಸತ್ಯ. ಮೇ 19ರಂದು ಈ ಸಿನಿಮಾ ರಿಲೀಸ್ ಆಗಲಿದ್ದು ಅದರಲ್ಲಿ ಡಾ. ಬ್ರೋ ಯಾವ ಪಾತ್ರದಲ್ಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.