ಬೆಂಗಳೂರು : ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ಸುಲಭವಾಗಿ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ಒದಗಿಸುವ ಸಲುವಾಗಿ ದೇಶಾದ್ಯಂತ 250 ಹೊಸ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಮತ್ತು ಥಂಡರ್ಪ್ಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಸಹಭಾಗಿತ್ವ ಮಾಡಿಕೊಳ್ಳುತ್ತಿರುವುದಾಗಿ ಇಂದು ಘೋಷಿಸಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ ಮತ್ತು ಕೊಚ್ಚಿ ಸೇರಿದಂತೆ 50ಕ್ಕೂ ಹೆಚ್ಚು ನಗರಗಳಲ್ಲಿ ಆರಂಭಗೊಳ್ಳಲಿರುವ ಈ ಹೊಸ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಟಾಟಾ ಸಂಸ್ಥೆಯ 540 ವಾಣಿಜ್ಯ ವಾಹನ ಚಾರ್ಜಿಂಗ್ ಪಾಯಿಂಟ್ಗಳ ನೆಟ್ವರ್ಕ್ ಗೆ ಹೊಸ ಸೇರ್ಪಡೆಯಾಗಿವೆ.
ಇ-ಕಾಮರ್ಸ್ ಕಂಪನಿಗಳು, ಪಾರ್ಸಲ್ ಮತ್ತು ಕೊರಿಯರ್ ಸೇವೆ ಒದಗಿಸುವವರು ಮತ್ತು ಇತರ ಹಲವಾರು ಉದ್ಯಮಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸಲುವಾಗಿ ಲಾಸ್ಟ್ ಮೈಲ್ ಡೆಲಿವರಿ ಅಂದ್ರೆ ಕೊನೆಯ ಹಂತದ ಉತ್ಪನ್ನ ವಿತರಣೆ ಕಾರ್ಯಕ್ಕೆ ವಾಣಿಜ್ಯ ಇವಿಗಳ ಅಳವಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ತಾನು ಹೊಂದಿರುವ ವಾಣಿಜ್ಯ ಇವಿಗಳ ಚಲನೆಯ ತಿಳುವಳಿಕೆಯ ಆಧಾರದಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಚಾರ್ಜ್ ಸ್ಟೇಷನ್ ಸ್ಥಾಪಿಸಲು ಸ್ಥಳ ಸೂಚಿಸಲಿದೆ ಮತ್ತು ಹತ್ತಿರದ ಡೀಲರ್ ಶಿಪ್ ಗಳಿಗೆ ಈ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಶಿಫಾರಸು ಮಾಡುತ್ತದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅದಕ್ಕೆ ಬೇಕಾದ ಅಗತ್ಯ ಹಾರ್ಡ್ವೇರ್ ಅನ್ನು ಪೂರೈಸುತ್ತದೆ. ಥಂಡರ್ಪ್ಲಸ್ ಸೊಲ್ಯೂಷನ್ಸ್ ಸಂಸ್ಥೆಯು ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುತ್ತದೆ ಮತ್ತು ನಿರ್ವಹಣೆ ಮಾಡುತ್ತದೆ.
ಈ ಸಹಯೋಗದ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ವಿಭಾಗದ ಎಸ್ಸಿವಿ ಆಂಡ್ ಪಿಯು ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ. ವಿನಯ್ ಪಾಠಕ್ ಅವರು, “ಎಮಿಷನ್ ಮುಕ್ತ ಸರಕು ಸಾಗಾಣಿಕಾ ವಾಹನ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಹೆಚ್ಚಿನ ಜನರು ಬಳಸುವ ರಸ್ತೆಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯ ವ್ಯಲಸ್ಥೆಗಳನ್ನು ಹೆಚ್ಚಿಸುವ ಮೂಲಕ ಮತ್ತಷ್ಟು ಗ್ರಾಹಕರು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಲಿದ್ದೇವೆ. ಜೊತೆಗೆ ವಾಹನವು ಸಮಯ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಹೆಚ್ಚಿನ ಆದಾಯ ದೊರಕಿಸುವಂತೆ ಮಾಡಲಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಲಾಭದಾಯಕತೆಯ ಜೊತೆಗೆ ಶುದ್ಧ, ಹಸಿರು ಪರಿಸರಕ್ಕೆ ಮಹತ್ವದ ಕೊಡುಗೆ ನೀಡಲಿದ್ದೇವೆ. ನಮ್ಮ ಡೀಲರ್ಶಿಪ್ಗಳಲ್ಲಿ ವೇಗದ ಚಾರ್ಜರ್ಗಳನ್ನು ಸ್ಥಾಪಿಸುವುದರಿಂದ ಗ್ರಾಹಕರು ವಿಶ್ವಾಸಾರ್ಹ ಸ್ಥಳದಲ್ಲಿ ಚಾರ್ಜಿಂಗ್ ವ್ಯವಸ್ಥೆ ಲಭ್ಯವಾಗುವ ಅನುಕೂಲತೆ ದೊರೆಯಲಿದೆ” ಎಂದು ಹೇಳಿದರು.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ನಿರಂಜನ್ನಾಯಕ್ ಅವರು, “ಉತ್ತಮ ಭವಿಷ್ಯಕ್ಕಾಗಿ ನವೀನ ರೀತಿಯ, ಶುದ್ಧ ಮತ್ತು ಇಂಧನ- ದಕ್ಷ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ಡೆಲ್ಟಾ ಸಂಸ್ಥೆಯು ಹೊಂದಿದೆ. ಟಾಟಾ ಮೋಟಾರ್ಸ್ ಮತ್ತು ಥಂಡರ್ಪ್ಲಸ್ ಜೊತೆಗಿನ ಈ ಸಹಯೋಗವು ಭಾರತದ ಎಲೆಕ್ಟ್ರಿಕ್ ಸರಕು ಸಾಗಾಣಿಕಾ ವ್ಯವಸ್ಥೆಗೆ ಗಮನಾರ್ಹ ಕೊಡುಗೆ ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ನಮ್ಮ ಅತ್ಯಾಧುನಿಕ ಚಾರ್ಜಿಂಗ್ ತಂತ್ರಜ್ಞಾನವು ದೇಶಾದ್ಯಂತ ಇರುವ ಬಳಕೆದಾರರಿಗೆ ವಿದ್ಯುತ್ ವಾಣಿಜ್ಯ ವಾಹನದ ಅನುಭವವನ್ನು ಉತ್ತಮಗೊಳಿಸುವಲ್ಲಿ, ತೀವ್ರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ” ಎಂದು ಹೇಳಿದರು.
ಥಂಡರ್ ಪ್ಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಓ ಶ್ರೀ ರಾಜೀವ್ ವೈಎಸ್ಆರ್ ಅವರು, “ಈ ವಿಶೇಷ ಯೋಜನೆಯ ಮೂಲಕ ಟಾಟಾ ಮೋಟಾರ್ಸ್ ಮತ್ತು ಡೆಲ್ಟಾ ಜೊತೆ ಪಾಲುದಾರಿಕೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾಲೀಕರಿಗೆ ಅತ್ಯುತ್ತಮ ಗುಣಮಟ್ಟದ ಚಾರ್ಜಿಂಗ್ ಸೌಲಭ್ಯವನ್ನು ಅನುಕೂಲಕರವಾಗಿ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಒದಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಭಾರತದಾದ್ಯಂತ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಉಂಟು ಮಾಡುವ ನಮ್ಮ ಧ್ಯೇಯದ ಜೊತೆಗೆ ಈ ಸಹಯೋಗವು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಚಾರ್ಜ್ ಮಾಡುವ ಕುರಿತ ಆತಂಕವನ್ನು ತೊಡೆಯಲು, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆ ಎಲ್ಲಾ ಕಡೆ ದೊರೆಯಲು ಪ್ರತೀ ಮನೆಗೆ ಕೈಗೆಟುಕುವ ದರದಲ್ಲಿ ಚಾರ್ಜ್ ಪಾಯಿಂಟ್ ಅನ್ನು ಒದಗಿಸುವ ನಮ್ಮ # ಹರ್_ಘರ್_ಥಂಡರ್ ಅಭಿಯಾನದ ಜೊತೆ ಈ ಯೋಜನೆಯು ಸೂಕ್ತವಾಗಿ ಹೊಂದಿಕೊಳ್ಳುತ್ತದೆ” ಎಂದು ಹೇಳಿದರು.
ಲಾಸ್ಟ್ ಮೈಲ್ ಡೆಲಿವರಿ ಅಂದ್ರೆ ಕೊನೆಯ ಹಂತದ ವಸ್ತು ವಿತರಣೆಗಾಗಿಯೇ ವಿನ್ಯಾಸಗೊಂಡಿರುವ ಅತ್ಯಾಧುನಿಕ ನಾಲ್ಕು ಚಕ್ರದ ಇ-ಕಾರ್ಗೋ ಉತ್ಪನ್ನವಾದ ಏಸ್ ಇವಿಯನ್ನು ಟಾಟಾ ಮೋಟಾರ್ಸ್ ಒದಗಿಸುತ್ತದೆ. ಈ ವಾಹನವು ದೇಶಾದ್ಯಂತ 150ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸರ್ವೀಸ್ ಸೆಂಟರ್ ಗಳನ್ನು ಹೊಂದಿದೆ ಮತ್ತು ಅತ್ಯಾಧುನಿಕ ಬ್ಯಾಟರಿ ನಿರ್ವಹಣಾ ವ್ಯವಸ್ಥೆ, ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಮ್ ಮತ್ತು ಅತಿ ಹೆಚ್ಚು ಸಮಯ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಟಾಟಾ ಯುನಿಇವರ್ಸ್ ನ ಅಗಾಧ ಸಾಮರ್ಥ್ಯಗಳನ್ನು ತನ್ನೊಳಗೆ ಧರಿಸಿಕೊಂಡಿರುವ ಏಸ್ ಇವಿಯು ಸಂಬಂಧಿತ ಟಾಟಾ ಗ್ರೂಪ್ ಕಂಪನಿಗಳಿಂದ ನೆರವು ಪಡೆಯುತ್ತದೆ ಮತ್ತು ಗ್ರಾಹಕರು ಈ ಸಮಗ್ರ ಇ-ಕಾರ್ಗೋ ಸಾರಿಗೆ ಉತ್ಪನ್ನವನ್ನು ಪಡೆಯಲು ದೇಶದ ಪ್ರಮುಖ ಫೈನಾನ್ಸ್ ಸಂಸ್ಥೆಗಳಲ್ಲಿ ನೆರವು ಪಡೆಯಬಹುದಾಗಿದೆ. ಏಸ್ ಇವಿ ಅನ್ನು ದೇಶಾದ್ಯಂತ ಎಲ್ಲಾ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಡೀಲರ್ಶಿಪ್ಗಳಲ್ಲಿ ಖರೀದಿಸಬಹುದಾಗಿದೆ.