ಮಂಗಳೂರು : “ಮಾಂಡ್ ಸೊಭಾಣ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತದೆ. ವೇದಿಕೆ ನೀಡುತ್ತದೆ. ನಾನು ಕೂಡಾ ಗಾಯನ ಕ್ಞೇತ್ರದಲ್ಲಿ ಏನಾದರೂ ಹೆಸರು ಮಾಡಿದ್ದರೆ ಅದರಲ್ಲಿ ಈ ಸಂಸ್ಥೆಯ ತರಬೇತಿಯ ಕೊಡುಗೆ ಬಹಳಷ್ಟಿದೆ. ನಾವು ದಿನಂಪ್ರತಿ ಕಲಿಯಬೇಕು. ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಲ್ಲಿಂದ ಚೆನ್ನಾಗಿ ಕಲಿತು ಹೋದರೆ, ಗೆದ್ದು ಬಂದರೆ ಇಡೀ ಪ್ರಪಂಚ ನಿಮ್ಮನ್ನು ಗಮನಿಸುತ್ತದೆ.
ಸುರ್ ಸೊಭಾಣ್ (ಸ್ವರ ಸೌಂದರ್ಯ) ಕಲಿಕೆಯ ನಂತರ ಸಿಡಿ, ಸಿನೆಮಾ, ವೇದಿಕೆಗಳಲ್ಲಿ ಅವಕಾಶ ದೊರೆಯುವಾಗ ಈ ಅಭ್ಯಾಸದ ಮಹತ್ವ ನಿಮ್ಮರಿವಿಗೆ ಬರುತ್ತದೆ ‘’ ಎಂದು ಸೋದ್ 4 ಗಾಯನ ಸ್ಪರ್ಧೆಯ ವಿಜೇತೆ ಜ್ಯಾಕ್ಲಿನ್ ಫೆರ್ನಾಂಡಿಸ್, ಯು. ಎಸ್. ಎ. ಹೇಳಿದರು. ಅವರು 18.08.24 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆದ ಸುರ್ ಸೊಭಾಣ್ ಮಕ್ಕಳ ಗಾಯನ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದ್ಘಾಟನೆ ಅರ್ಥಪೂರ್ಣವಾಗಿ ನೆರವೇರಿತು. ವಿದ್ಯಾರ್ಥಿಗಳಾದ ಎಲ್ಡನ್ ಪಿರೇರಾ, ಲೆನ್ವಿನ್ ಪಿರೇರಾ, ಪ್ರೇರಣ್ ಕ್ರಾಸ್ತಾ, ಸಿಮೊನಾ ಸಲ್ಡಾನ್ಹಾ, ಸಂಜನಾ ಮತಾಯಸ್, ಆನ್ವಿಯಾ ಲೋಬೊ, ಆಲ್ವಿನಾ ಮೊಂತೇರೊ ಈ ಏಳು ಮಕ್ಕಳಿಗೆ ಸಪ್ತ ಸ್ವರಗಳನ್ನು ಪ್ರತಿನಿಧಿಸುವ ಕುರುಹುಗಳನ್ನು ಶೃಂಗರಿಸಿದ ಬೇಝ್ ಡ್ರಮ್ ನಿಂದ ಹೊರ ತೆಗೆದು ನೀಡಲಾಯಿತು. ನಂತರ 60 ಗಂಟೆಗಳ ಕಲಿಕಾ ಪುಸ್ತಕವನ್ನು ತೆಗೆದು ಲೊಕಾರ್ಪಣೆಗೊಳಿಸಿ, ಮುಖ್ಯ ತರಬೇತುದಾರರಾದ ಶಿಲ್ಪಾ ಕುಟಿನ್ಹಾ ಇವರಿಗೆ ಹಸ್ತಾಂತರಿಸಿದರು.
ಶುಭ ಹಾರೈಸಿ ಮಾತನಾಡಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ನೀವು ಬರುವುದು, ಹಾಡುವುದು, ಹೋಗುವುದು ಈ ರೀತಿ ಆಗಬಾರದು. ಈ ವಿಭಾಗದಲ್ಲಿ ಅತ್ತ್ಯುತ್ತಮರಾಗಬೇಕು. ಕಲಿಕೆಯನ್ನು ಚೆನ್ನಾಗಿ ಮನನ ಮಾಡಿ ಸದಾ ರಿಯಾಝ್ ನಡೆಸಬೇಕು. ಕೇವಲ ಸ್ಪರ್ಧೆಗಳಿಗಾಗಿ ಮಾತ್ರ ಕಲಿಯಬೇಡಿ, ಗಾಯನ ಶ್ರೇಷ್ಟರಾಗಿ, ನಮ್ಮ ಭಾಷೆಯ ಗೌರವ ಹೆಚ್ಚಿಸಿ ಎಂದು ಹೇಳಿದರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ, ಸಹ ತರಬೇತುದಾರ ಡಿಯಲ್ ಡಿಸೋಜ ಹಾಜರಿದ್ದರು. ಸುಮೇಳ್ ಸಂಯೋಜಕಿ ರೈನಾ ಸಿಕ್ವೇರಾ ಸ್ವಾಗತಿಸಿದರು. ಸುಮೇಳ್ ಸದಸ್ಯೆ ಪ್ರೀಮಾ ಫೆರಾವೊ ನಿರೂಪಿಸಿ ವಂದಿಸಿದರು. ನಂತರ ತರಬೇತಿ ಬಗ್ಗೆ ವಿಕ್ಟರ್ ಮತಾಯಸ್ ಮಾಹಿತಿ ನೀಡಿದರು. ಅರುಣ್ ರಾಜ್ ರೊಡ್ರಿಗಸ್ ಕೆಲ ಆಟಗಳನ್ನು ಆಡಿಸಿದರು. ನಂತರ ಮೊದಲ ದಿನ ತರಬೇತಿ ನಡೆಯಿತು.