ಮಂಗಳೂರು: 25ರ ಸಾಧನೆ ಎಂದರೆ ಐತಿಹಾಸಿಕ ದಿನ. ಸಂಸ್ಥೆ ಎಂದರೆ ಕಟ್ಟಡವಲ್ಲ, ಬದಲಾಗಿ ಅಲ್ಲಿರುವ ಜನರು. ಆಸ್ಪತ್ರೆಯಲ್ಲಿ ವಿಜ್ಞಾನ, ಸಹಾನುಭೂತಿಯ ಸೇವೆ ಎರಡೂ ಸಮರ್ಪಕವಾಗಿ ಇರಬೇಕು. ಆಗ ಆಸ್ಪತ್ರೆ, ಅಲ್ಲಿಯ ವೈದ್ಯರು, ಇತರ ಸಿಬ್ಬಂದಿಯನ್ನು ಜನ ಮರೆಯೋದಿಲ್ಲ. ಇಲ್ಲಿ ವಿಜ್ಞಾನಕ್ಕೆ ದೈವಿಕ ಶಕ್ತಿ ಇದೆ. ಇದು ಸಾಧ್ಯವಾಗಿರುವುದರಿಂದ ಮಂಗಳೂರು ಇಂದಿರಾ ಆಸ್ಪತ್ರೆಯು ಸಾರ್ಥಕತೆಯ ಒಂದು ಮೈಲಿಗಲ್ಲು ಸ್ಥಾಪಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಹೇಳಿದರು.
ನಗರದ ಫಾದರ್ ಮುಲ್ಲರ್ ಕನ್ನೆನ್ನನ್ ಸೆಂಟರ್ನಲ್ಲಿ ಗುರುವಾರ ಜರುಗಿದ ಇಂದಿರಾ ಆಸ್ಪತ್ರೆಯ 25ನೇ ವರ್ಷಾಚರಣೆ ಯ ಸಂಭ್ರಮಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಒದಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಇದೆ. ಆದರೆ ಜನರ ಆವಶ್ಯಕತೆಗಳನ್ನು ಪೂರೈಸಲು ಜತೆಯಾಗಿ ಖಾಸಗಿ ಆಸ್ಪತ್ರೆಗಳ ಕೊಡುಗೆಯೂ ಮುಖ್ಯವಾಗಿದೆ. ಇಂದಿರಾ ಆಸ್ಪತ್ರೆಯ ಆಡಳಿತ ವರ್ಗ, ಸಿಬ್ಬಂದಿ ಬದ್ಧತೆಯಿಂದ ಈ ಸಂಸ್ಥೆಯನ್ನು ರೂಪಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಣಮಟ್ಟದ ಸೇವೆ: ಯು.ಟಿ.ಖಾದರ್ – ಮುಖ್ಯ ಅತಿಥಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು, ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಬದ್ಧತೆಯ ಮೂಲಕ ಜನರ ವಿಶ್ವಾಸ ಗಳಿಸಿರುವ ಇಂದಿರಾ ಆಸ್ಪತ್ರೆಯು ತನ್ನ ಸೇವಾ ಪರಂಪರೆಯನ್ನು ಮುಂದುವರಿಸುವ ಮೂಲಕ ಹೆಚ್ಚಿನ ಯಶಸ್ಸು ಪಡೆಯಲಿ ಎಂದು ಹಾರೈಸಿದರು.
ಆದರ್ಶ ಪರಂಪರೆ: ಬ್ರಿಜೇಶ್ ಚೌಟ – ಇನ್ನೋರ್ವ ಮುಖ್ಯ ಅತಿಥಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಮಾತನಾಡಿ, ವೈದ್ಯೋ ನಾರಾಯಣ ಹರಿ ಎಂದು ನಂಬಿದವರು ನಾವು ಭಾರತೀಯರು. ಆಸ್ಪತ್ರೆಯ 25 ವರ್ಷಾಚರಣೆಯ ಸಂದರ್ಭದಲ್ಲಿ ಬದ್ಧತೆಯಿಂದ ದುಡಿದ ವೈದ್ಯರು ಹಾಗೂ ಇತರ ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಗುರುತಿಸಿ ಗೌರವಸಿದ ಕ್ರಮ ಒಂದು ಆದರ್ಶ ಪರಂಪರೆ ಎಂದು ಶ್ಲಾಘಿಸಿದರು.
ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ತಂಗಂ ವರ್ಗೀಸ್ ಜೋಶ್ವ, ಡಾ.ಮಹಮ್ಮದ್ ಇಸ್ಮಾಯಿಲ್, ಡಾ.ಮುನೀರ್ ಅಹಮದ್, ಡಾ.ಜಮೀಲಾ, ಡಾ.ವಿಜಯಗೋಪಾಲ್, ಡಾ.ಕೃಷ್ಣ ಪ್ರಸಾದ್ ಹಾಗೂ ಇತರ ವಿಭಾಗಗಳಲ್ಲಿ ದೀರ್ಗ ಕಾಲದಿಂದ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ, , ಯೆನೆಪೋಯಾ ವಿಶ್ವವಿದ್ಯಾಲಯದ ಕುಲಪತಿ ಡಾ. ಅಬ್ದುಲ್ಲಾ ಕುಂಞ, ನ್ಯಾಯವಾದಿ ಸಯ್ಯದ್ ಜೊಹ್ರಾವುದ್ದೀನ್ ಅತಿಥಿಗಳಾಗಿದ್ದರು. ಇಂದಿರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸೈಯದ್ ನಿಜಾಮುದ್ದೀನ್ ಪ್ರಸ್ಥಾವನೆಗೈದರು. ಹೆರಾ ಪಿಂಟೊ, ಸಾಹಿಲ್ ಜಹೀರ್ ನಿರೂಪಿಸಿದರು.
1999 ರಲ್ಲಿ ಆಸ್ಪತ್ರೆ ಸ್ಥಾಪನೆಯಾದಾಗಿನಿಂದ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಸಮುದಾಯಕ್ಕೆ ಉನ್ನತ ಯೋಗಕ್ಷೇಮವನ್ನು ನೀಡುವಲ್ಲಿ ನಿರತವಾಗಿದೆ. ಕಳೆದ ಕಾಲು ಶತಮಾನದ ಈ ಸುದೀರ್ಘ ಪಯಣದಲ್ಲಿ ಆಸ್ಪತ್ರೆಯ ವೈದ್ಯರು, ಎಲ್ಲ ವಿಭಾಗದ ಸಿಬ್ಬಂದಿ, ಹಿತೈಶಿಗಳ ಬದ್ಧತೆಯ ಸೇವೆ, ದೊಡ್ಡ ಕೊಡುಗೆ ಇದೆ. ಆದ್ದರಿಂದ ಜನರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗಿದೆ ಎಂದು ಡಾ ಸೈಯದ್ ನಿಜಾಮುದ್ದೀನ್ ತಿಳಿಸಿದರು