ಬೆಂಗಳೂರು : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬೆಂಗಳೂರು (ಮಾಹೆ, ಬೆಂಗಳೂರು) ಸಂಸ್ಥೆಯ ಹೊಸ ಅಕಾಡೆಮಿಕ್ ಬ್ಲಾಕ್ 2 ಸಭಾಂಗಣವನ್ನು ಯಲಹಂಕ ಕ್ಷೇತ್ರದ ಶಾಸಕರಾದ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.
ಸಂಸ್ಥೆಯ ಡಾ ರಾಮದಾಸ್ ಎಂ ಪೈ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಹೆ ಬೆಂಗಳೂರಿನ ಪ್ರೊ ವೈಸ್ ಚಾನ್ಸಲರ್ ಪ್ರೊ.(ಡಾ.) ಮಧು ವೀರರಾಘವನ್, ಮಾಹೆ ಬೆಂಗಳೂರಿನ ಡೆಪ್ಯುಟಿ ರಿಜಿಸ್ಟ್ರಾರ್ ಡಾ ರಾಘವೇಂದ್ರ ಪ್ರಭು ಪಿ ಇತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಣ ತಜ್ಞರು, ಅತಿಥಿಗಳು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರು, “ಇದು ಮಾಹೆ ಬೆಂಗಳೂರಿಗೆ ಮಹತ್ವದ ಕ್ಷಣವಾಗಿದೆ. ಶಿಕ್ಷಣ, ಹೊಸತನ, ಸಮುದಾಯದ ತೊಡಗಿಸಿಕೊಳ್ಳುವಿಕೆ ಎಲ್ಲವನ್ನೂ ಒಳಗೊಂಡ ಪರಿಸರವನ್ನು ಬೆಳೆಸುವ ಸಂಸ್ಥೆಯ ಬದ್ಧತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಈ ಕಟ್ಟಡ ಒಂದು ಸ್ಥಳ ಮಾತ್ರವೇ ಅಲ್ಲ, ಬದಲಾಗಿ ಇದು ಬೌದ್ಧಿಕ ಮತ್ತು ಸಾಂಸ್ಕೃತಿಕ ವಿಚಾರ ವಿನಿಯಮಕ್ಕೆ ಅವಕಾಶ ಒದಗಿಸುವ ಮಹತ್ವದ ವೇದಿಕೆಯಾಗಿದೆ” ಎಂದು ಹೇಳಿದರು.
ನಂತರ ಮಾತನಾಡಿದ ಪ್ರೊ. (ಡಾ.) ಮಧು ವೀರರಾಘವನ್, “ಈ ಹೊಸ ಬ್ಲಾಕ್ ಶ್ರೇಷ್ಠತೆ ಮತ್ತು ಹೊಸತನ ಒದಗಿಸುವ ನಮ್ಮ ಬದ್ಧತೆಗೆ ಮತ್ತೊಂದು ಪುರಾವೆ. ನಮ್ಮ ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ವಿನ್ಯಾಸಗೊಳಿಸಲಾಗಿದೆ. ಭವಿಷ್ಯವನ್ನು ರೂಪಿಸುವ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಸಂದರ್ಭಗಳಿಗೆ ಈ ವೇದಿಕೆ ಸಾಕ್ಷಿಯಾಗಲಿದೆ. ಈ ಬ್ಲಾಕ್ ಶ್ರೇಷ್ಠ ಶಿಕ್ಷಣ ಒದಗಿಸುವ ಕೇಂದ್ರವಾಗಿ ಮತ್ತು ಅರ್ಥಪೂರ್ಣ ಸಂವಾದ ಹಾಗೂ ಸಹಯೋಗದ ಕಾರ್ಯಕ್ರಗಳಿಗೆ ವೇದಿಕೆಯಾಗಲಿರುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
ಡಾ ರಾಘವೇಂದ್ರ ಪ್ರಭು ಮಾತನಾಡಿ, “ಅಕಾಡೆಮಿಕ್ ಬ್ಲಾಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ದೃಢಗೊಳಿಸುವ ಸಲುವಾಗಿ ಮೂಡಿ ಬಂದಿದೆ. ನಮ್ಮ ವಿದ್ಯಾರ್ಥಿ ಸಮೂಹವನ್ನು ಸ್ಫೂರ್ತಿ ನೀಡುವ ಮತ್ತು ಸಶಕ್ತಗೊಳಿಸುವ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುವ ನಮ್ಮ ಉದ್ದೇಶವನ್ನು ಈ ವೇದಿಕೆ ಪ್ರತಿಬಿಂಬಿಸುತ್ತದೆ. ಹೊಸತನ, ಸಹಯೋಗ ಮತ್ತು ಕಲಿಕೆಗಾಗಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಈ ಸಭಾಂಗಣವು ನಮ್ಮ ಸಂಸ್ಥೆ ಮತ್ತು ಬೆಂಗಳೂರು ನಗರದ ಬೆಳವಣಿಗೆಗೆ ಕೊಡುಗೆ ನೀಡುವುದನ್ನು ನೋಡಲು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಮಾಹೆ ಬೆಂಗಳೂರು ಅಕಾಡೆಮಿಕ್ ಬ್ಲಾಕ್ 2 ಸಭಾಂಗಣವು ಹೈ ಡೆಫಿನಿಷನ್ ಆಡಿಯೋ ವಿಡಿಯೋ ವ್ಯವಸ್ಥೆ, ವಿಶಾಲವಾದ ಆಸನ ವ್ಯವಸ್ಥೆ, ಸುಸ್ಥಿರತೆಗೆ ಆದ್ಯತೆ ನೀಡುವ ಪರಿಸರ ಸ್ನೇಹಿ ವಿನ್ಯಾಸ ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಹೊಂದಿದೆ. ಈ ವಿಶಿಷ್ಟ ವಿನ್ಯಾಸ ಮತ್ತು ಸೌಲಭ್ಯಗಳಿಂದಾಗಿ ಈ ಸಭಾಂಗಣವು ಬೆಂಗಳೂರಿನ ಶೈಕ್ಷಣಿಕ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಭಾಂಗಣದ ಅದ್ಭುತವಾದ ಒಳಾಂಗಣ, ವಿಶಿಷ್ಟ ಸೌಲಭ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ವೀಕ್ಷಿಸುವ ಅವಕಾಶ ಪಡೆದುಕೊಂಡರು. ಕಾರ್ಯಕ್ರಮದ ಕೊನೆಗೆ ಅತಿಥಿಗಳ ಜೊತೆ ಭವಿಷ್ಯದ ಸಹಯೋಗ ಸಾಧ್ಯತೆಗಳು ಮತ್ತು ನೆಟ್ ವರ್ಕಿಂಗ್ ಮಾತುಕತೆ ನಡೆದುವು.