ಬೆಂಗಳೂರು : ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಇಂದು ತನ್ನ 15ನೇ ಬ್ಯಾಚ್ ನ ವಿದ್ಯಾರ್ಥಿಗಳ ಘಟಕೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಈ ಘಟಕೋತ್ಸವದಲ್ಲಿ ಕರ್ನಾಟಕದ ಗ್ರಾಮೀಣ ಹಿನ್ನೆಲೆಯ 58 ಟಿಟಿಟಿಐ ವಿದ್ಯಾರ್ಥಿಗಳು ಮತ್ತು 156 ಟೊಯೋಟಾ ಕೌಶಲ್ಯ ಕೋರ್ಸ್ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆದುಕೊಂಡರು. ವಿದ್ಯಾರ್ಥಿಗಳು ಕೋರ್ಸು ಪೂರ್ಣಗೊಳಿಸಿಕೊಳ್ಳುವುದರ ಮೂಲಕ ಜ್ಞಾನ, ಕೌಶಲ್ಯ, ದೇಹ ಭಾಷೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಜಾಗತಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಸಮಗ್ರ ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಸಮಾರಂಭದಲ್ಲಿ ಟಿಕೆಎಂ ಆಡಳಿತ ಮಂಡಳಿ, ಟೊಯೋಟಾ ಸಮೂಹ ಕಂಪನಿಗಳ ಪ್ರತಿನಿಧಿಗಳು, ಪೂರೈಕೆದಾರರು, ಆಟೋಮೋಟಿವ್ ಸ್ಕಿಲ್ಸ್ ಡೆವಲಪ್ಮೆಂಟ್ ಕೌನ್ಸಿಲ್ (ಎಎಸ್ಡಿಸಿ) ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ (ಎನ್ಎಸ್ಡಿಸಿ) ಪ್ರತಿನಿಧಿಗಳು, ಟೊಯೋಟಾ ಟೆಕ್ನಿಕಲ್ ಸ್ಕಿಲ್ ಅಕಾಡೆಮಿ- ಜಪಾನ್, ಟೊಯೋಟಾ ಇಂಡೋನೇಷ್ಯಾ ಅಕಾಡೆಮಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
2007ರಲ್ಲಿ ಟಿಟಿಟಿಐ ಪ್ರಾರಂಭವಾಗಿತ್ತು. ಅಂದಿನಿಂದಲೂ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಜ್ಞಾನವನ್ನು ಒದಗಿಸಲು ಮತ್ತು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳನ್ನು ತಯಾರುಗೊಳಿಸಲು ಗ್ರಾಮೀಣ ಭಾಗದ ಯುವಕರಿಗೆ ಕೌಶಲ್ಯ ಒದಗಿಸಿ ಅಭಿವೃದ್ಧಿಗೊಳಿಸುವ ಕಡೆಗೆ ಗಮನ ಹರಿಸಿದೆ. ಈ ಕಾರ್ಯಕ್ರಮದ ವಿಶೇಷತೆ ಎಂದರೆ ವಿದ್ಯಾರ್ಥಿಗಳಿಗೆ ಶೇ.100 ಉದ್ಯೋಗ ಖಾತ್ರಿ. ಇಲ್ಲಿ ಕಲಿತ ವಿದ್ಯಾರ್ಥಿಗಳು ಕರ್ನಾಟಕ, ಭಾರತ ವಿದೇಶ ಸೇರಿದಂತೆ ಎಲ್ಲಾ ಕಡೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ.
ಟೊಯೋಟಾ ಕಂಪನಿ ಇತ್ತೀಚೆಗೆ ಆರಂಭಿಸಿರುವ ‘ಟೊಯೋಟಾ ಕೌಶಲ್ಯ’ ಕಾರ್ಯಕ್ರಮಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಕಾರ್ಯಕ್ರಮವು ‘ಕಲಿಯಿರಿ ಮತ್ತು ಗಳಿಸಿರಿ’ ಎಂಬ ವಿಧಾನದ ಮೂಲಕ ಯುವಜನತೆಗೆ ಉತ್ಪಾದನಾ ಕ್ಷೇತ್ರದ ಉದ್ಯಮ ಕೌಶಲ್ಯಗಳನ್ನು ಕಲಿಯುವ ಅವಕಾಶ ಒದಗಿಸುತ್ತದೆ. ಆನ್-ದಿ-ಜಾಬ್ ಟ್ರೈನಿಂಗ್ (ಓಜೆಟಿ) ಮೂಲಕ ವೇತನ ಪಡೆಯುತ್ತಲೇ ಪ್ರಾಯೋಗಿಕ ಕಲಿಕೆಯ ಜ್ಞಾನ ಹೊಂದಲು ಅನುವು ಮಾಡಿಕೊಡುತ್ತದೆ. ಜೊತೆಗೆ ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜೆಐಎಂ)ನ ಭಾಗವಾಗಿರುವುದರಿಂದ ಟಿಟಿಟಿಐ ಜಪಾನೀ ಶೈಲಿಯ ಉತ್ಪಾದನಾ ಕೌಶಲ್ಯಗಳನ್ನು ಕಲಿಸುತ್ತದೆ ಮತ್ತು ಜಪಾನ್ ನ ಉದ್ಯೋಗ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಆ ಮೂಲಕ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ’ ಯೋಜನೆಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಟಿಟಿಟಿಐ ಕರ್ನಾಟಕದ ಗ್ರಾಮೀಣ ಪ್ರದೇಶದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳುವಿಕೆಯ ಸಮಾಜ ಕಟ್ಟುವ ಪ್ರಯತ್ನ ಮಾಡುತ್ತದೆ. ಹಲವು ವರ್ಷಗಳಲ್ಲಿ ನೀಡಿರುವ ಸಮಗ್ರ ತರಬೇತಿಯಿಂದಾಗಿ ವಿದ್ಯಾರ್ಥಿಗಳು ವಿಶ್ವ ಕೌಶಲ ಸ್ಪರ್ಧೆ, ಭಾರತೀಯ ಕೌಶಲ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡುವುದು ಸಾಧ್ಯವಾಗಿದೆ. ಸಂಸ್ಥೆಯ ಮಹತ್ವದ ಕಾರ್ಯಕ್ರಮವಾದ ವಸತಿ ತರಬೇತಿ ಕಾರ್ಯಕ್ರಮವು ಜ್ಞಾನ, ಕೌಶಲ್ಯ ಮತ್ತು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಗಳಲ್ಲಿ ಅಭಿವೃದ್ಧಿ ಉಂಟು ಮಾಡಿದ್ದು, ಟಿಟಿಟಿಐ ಅನ್ನು ಪ್ರಮುಖ ಕಲಿಕಾ ಸಂಸ್ಥೆಯನ್ನಾಗಿ ಗುರುತಿಸುವಂತೆ ಮಾಡಿದೆ. ಟಿಟಿಟಿಐನ ನಿಯಮಿತ ಕೋರ್ಸ್ ಮೂರು ವರ್ಷಗಳ ವಸತಿ ಕೋರ್ಸ್ ಆಗಿದೆ. ಅಲ್ಲಿಯೇ ಇದ್ದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಟೊಯೋಟಾ ಕೌಶಲ್ಯ ಕಾರ್ಯಕ್ರಮ ಎರಡು ವರ್ಷಗಳ ವಸತಿ ಕೋರ್ಸ್ ಆಗಿದೆ. ಈ ಎರಡೂ ಕೋರ್ಸುಗಳು ದೈಹಿಕ, ಮಾನಸಿಕ, ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಉದ್ದೇಶದಿಂದ ರೂಪುಗೊಂಡಿದೆ. ಟಿಟಿಟಿಐನಲ್ಲಿ ಇದುವರೆಗೆ 1,020 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಪ್ರಸ್ತುತ 810ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದ ಜೊತೆ, ವೆಹಿಕಲ್ ಅಸೆಂಬ್ಲಿ, ವೆಲ್ಡಿಂಗ್, ಪೇಂಟಿಂಗ್ ಮತ್ತು ಮೆಕಾಟ್ರಾನಿಕ್ಸ್ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಆಶೀರ್ವಚನ ನುಡಿಗಳನ್ನಾಡಿದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರು, “ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ಘಟಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಪ್ರತಿಭಾವಂತ ಯುವ ಪ್ರತಿಭೆಗಳ ಸಾಧನೆಗೆ ಸಾಕ್ಷಿಯಾಗಿರುವುದು ಉಲ್ಲಾಸದಾಯಕವಾಗಿದೆ. ಟಿಟಿಟಿಐ ಸಂಸ್ಥೆಯುವ ಕರ್ನಾಟಕದ ಗ್ರಾಮೀಣ ಭಾಗದ ಯುವ ಜನತೆಗೆ ಉತ್ತಮ ತರಬೇತಿ ಮತ್ತು ಶಿಕ್ಷಣ ನೀಡಿ ಅವರನ್ನು ಸಬಲರನ್ನಾಗಿ ಮಾಡುತ್ತಿರುವುದು ಖುಷಿಯ ವಿಚಾರ. ಇಂತಹ ಯೋಜನೆಗಳು ಸಮಾಜದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಾಹಿಸುತ್ತವೆ ಮತ್ತು ಸಾಮೂಹಿಕ ಅಭಿವೃದ್ಧಿ ಉಂಟು ಮಾಡುವ ಮೂಲಕ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ವಾಹನೋದ್ಯಮಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಕೆಲಸ ಮಾಡಲು ಸೂಕ್ತವಾಗಿ ಸಿದ್ಧರಾಗಿರುವ ನುರಿತ ವೃತ್ತಿಪರರನ್ನು ಬೆಳೆಸುವ ಸಂಸ್ಥೆಯ ಬದ್ಧತೆಗೆ ಈ ಯುವ ಪದವೀಧರರು ಪುರಾವೆಯಾಗಿ ನಿಂತಿದ್ದಾರೆ. ಅವರು ವೃತ್ತಿ ಆರಂಭಿಸುತ್ತಿದ್ದಂತೆ ತಮ್ಮಲ್ಲಿ ಮೈಗೂಡಿಸಿಕೊಂಡಿರುವ ಕೌಶಲ್ಯ ಮತ್ತು ಮೌಲ್ಯಗಳ ಮೂಲಕ ಸಮಾಜ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡಲಿದ್ದಾರೆ ಎಂಬ ನಂಬಿಕೆ ನಮಗಿದೆ. ಎಲ್ಲಾ ಪದವೀಧರರಿಗೂ ಶುಭವನ್ನು ಹಾರೈಸುತ್ತಿದ್ದೇವೆ ಮತ್ತು ನುರಿತ ಸಮರ್ಥ ಉದ್ಯೋಗಿಗಳನ್ನು ಬೆಳೆಸುವ ಟಿಟಿಟಿಐನ ಬದ್ಧತೆಯನ್ನು ಶ್ಲಾಘಿಸುತ್ತಿದ್ದೇವೆ” ಎಂದು ಹೇಳಿದರು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಜಿ.ಶಂಕರ ಅವರು ಮಾತನಾಡಿ, “ಟೊಯೋಟಾದಲ್ಲಿ ನಾವು ಗ್ರಾಮೀಣ ಭಾಗದ ಯುವಜನತೆಯನ್ನು ಸಮಗ್ರ 360-ಡಿಗ್ರಿ ತರಬೇತಿಯ ಮೂಲಕ ವಿಶ್ವದರ್ಜೆಯ ತಂತ್ರಜ್ಞರನ್ನಾಗಿ ಬದಲಾಯಿಸಲು ಬದ್ಧರಾಗಿದ್ದಾರೆ. ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ 1,000ಕ್ಕೂ ಹೆಚ್ಚು ಗ್ರಾಮೀಣ ಯುವಕರ ಸಾಲಿಗೆ ಇವತ್ತು 214 ಪದವೀಧರರು ಸೇರಿದ್ದಾರೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಕರ್ನಾಟಕದ ವಿವಿಧ ಜಿಲ್ಲೆಗಳ ಈ ಪದವೀಧರರು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯಲ್ಲಿ ಮತ್ತು ಕತಾರ್, ಜೋರ್ಡಾನ್ ಮತ್ತು ಸ್ಲೋವಾಕಿಯಾದಂತಹ ಅಂತರಾಷ್ಟ್ರೀಯ ಮಟ್ಟದ ವಿಭಾಗಗಳಲ್ಲಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದು ಮತ್ತು ಅವರ ಶುಭ ನುಡಿಗಳನ್ನು ಕೇಳಿ ನಾವು ಕೃತಾರ್ಥರಾಗಿದ್ದೇವೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಜೊತೆಗೆ ನಾವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ 65 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) ಮತ್ತು ಗವರ್ನ್ ಮೆಂಟ್ ಟೂಲ್ ರೂಮ್ ಆಂಡ್ ಟ್ರೈನಿಂಗ್ ಸೆಂಟರ್ ಗಳನ್ನು (ಜಿಟಿಟಿಸಿಗಳು) ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಪ್ರಾಂಶುಪಾಲರು ಮತ್ತು ಅಧ್ಯಾಪಕರಿಗೆ ತರಬೇತಿ, ಮೂಲಸೌಕರ್ಯ ನೆರವು ಮತ್ತು ಸಂಸ್ಕೃತಿ ನಿರ್ಮಾಣ ವಿಚಾರದಲ್ಲಿ ತರಬೇತಿ ಕಾರ್ಯಕ್ರಮಗಳ ಮೇಲೆ ಗಮನ ಹರಿಸುತ್ತಿದ್ದೇವೆ. ಇಲ್ಲಿಯವರೆಗೆ ಟೊಯೋಟಾ ಭಾರತದಲ್ಲಿ 110,000 ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದ್ದು, ನಿರಂತರವಾಗಿ ಉದ್ಯೋಗಾವಕಾಶ ಒದಗಿಸಿ ಬೆಳೆಸುತ್ತಿದೆ. ಆ ಮೂಲಕ ಸಮಾಜಕ್ಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಮಹತ್ವದ ಕೊಡುಗೆ ನೀಡಿದೆ” ಎಂದು ಹೇಳಿದರು.
ಘಟಕೋತ್ಸವ ಕಾರ್ಯಕ್ರಮದಲ್ಲಿ ಪದವೀಧರರು ಎನ್ಎಸಿ (ನ್ಯಾಷನಲ್ ಅಪ್ರೆಂಟಿಸ್ಶಿಪ್ ಸರ್ಟಿಫಿಕೇಟ್), ಎಎಸ್ಡಿಸಿ ಸರ್ಟಿಫಿಕೇಟ್ ಮತ್ತು ಜೆಐಎಂ ಹಾಗೂ ಟೊಯೋಟಾ ಸರ್ಟಿಫಿಕೇಟ್ ಸೇರಿದಂತೆ ಹಲವು ಸರ್ಟಿಫಿಕೇಷನ್ ಗಳನ್ನು ಸ್ವೀಕರಿಸಿದರು. ಇಲ್ಲಿಯವರೆಗೂ ಈ ಕಾರ್ಯಕ್ರಮದಲ್ಲಿ 1,020 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಮತ್ತು 452 ಮಂದಿ ಟಿಕೆಎಂ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ. ಉಳಿದ 568 ಮಂದಿ ಸಮೂಹ ಕಂಪನಿಗಳು, ಪೂರೈಕೆದಾರ ಕಂಪನಿಗಳು ಮತ್ತು ಸಾಗರೋತ್ತರ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಪದವೀಧರರು ಉದ್ಯಮದಲ್ಲಿನ ವಿವಿಧ ಕಂಪನಿಗಳಿಗೆ ಸೇರುವ ಅವಕಾಶ ಮತ್ತು ಅರ್ಹತೆ ಗಳಿಸಿದ್ದಾರೆ.
ಟಿಟಿಟಿಐಯ ವಿದ್ಯಾರ್ಥಿಗಳು ಈಗಾಗಲೇ ವಿಶ್ವ ಕೌಶಲ್ಯ ಸ್ಪರ್ಧೆಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. 2015ರಲ್ಲಿ ಬ್ರೆಜಿಲ್ನಲ್ಲಿ ನಡೆದ ಸ್ಪರ್ಧೆಯಲ್ಲಿ 1 ಮೆಡಲ್, 2017ರಲ್ಲಿ ಅಬುಧಾಬಿಯಲ್ಲಿ 1 ಕಂಚು ಮತ್ತು 1 ಮೆಡಲ್, 2019ರಲ್ಲಿ ರಷ್ಯಾದಲ್ಲಿ 1 ಮೆಡಲ್ ಮತ್ತು 2022 ರಲ್ಲಿ ಜರ್ಮನಿಯಲ್ಲಿ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ವರ್ಷದ ಸೆಪ್ಟಂಬರ್ನಲ್ಲಿ ಫ್ರಾನ್ಸ್ ನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಮೆಕಾಟ್ರಾನಿಕ್ಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್ (ಎಂಟಿಸಿ) ವಿಭಾಗದಲ್ಲಿ ಕೌಶಲ್ಯ ಪ್ರದರ್ಶನ ನೀಡಲಿದ್ದಾರೆ.
ಘಟಕೋತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ಟಿಟಿಟಿಐ ಸಂಸ್ಥೆಯು ಭಾರತದ ನುರಿತ ಕೌಶಲ್ಯಪೂರ್ಣ ಯುವಜನೆಯನ್ನು ಪ್ರತಿನಿಧಿಸಲಿರುವ ತಮ್ಮ ಪದವೀಧರರ ಗೆಲುವನ್ನು ಸಂಭ್ರಮಿಸಿದೆ. ಅವರು ಸಾಧನೆಯು ಪ್ರತಿಭಾವಂತ ಮತ್ತು ನುರಿತ ಉದ್ಯೋಗಿಗಳನ್ನು ಬೆಳೆಸುವ, ಆ ಮೂಲಕ ರಾಷ್ಟ್ರದ ಪ್ರಗತಿ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡುವ ಕಂಪನಿಯ ಬದ್ಧತೆಗೆ ಪುರಾವೆಯಾಗಿದೆ.