ಪೋಷಕರಾಗುವುದು ಒಂದು ಸಂತೋಷಕರ ಸಂಗತಿ. ಆದರೆ ಪೋಷಕರಾಗುವ ಪ್ರಯಾಣದಲ್ಲಿ ಸಂತೋಷದ ಜೊತೆ ಸವಾಲುಗಳಿರುತ್ತವೆ. ಜೊತೆಗೆ ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶಗಳೂ ಸಿಗುತ್ತವೆ. ಆದರೆ ಆತಂಕ ಮತ್ತು ನೋವು ಉಂಟಾಗುವ ಸಂದರ್ಭ ಎಂದರೆ ಅದು ನಿಮ್ಮ ಮಗುವಿಗೆ ಟೈಪ್ 1 ಡಯಾಬಿಟಿಸ್ ಇರುವುದು ಪತ್ತೆಯಾದಾಗ. ಒಂದು ವೇಳೆ ಮಗುವಿಗೆ ಟೈಪ್ 1 ಮಧುಮೇಹ ಇರುವುದು ಪತ್ತೆಯಾದರೆ ದಾರಿಯೇ ಬದಲಾಗುತ್ತದೆ. ಮೇದೋಜ್ಜೀರಕ ಗ್ರಂಥಿಯ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ರೋಗನಿರೋಧಕ ವ್ಯವಸ್ಥೆ ಉಂಟು ಮಾಡುವ ಪರಿಣಾಮದಿಂದ ಟೈಪ್ 1 ಮಧುಮೇಹ ಉಂಟಾಗುತ್ತದೆ. ಅದಾದ ಮೇಲೆ ನೀವು ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ. ನೀವು ಗಮನಿಸಬೇಕಾದ ವಿಚಾರ ಎಂದರೆ, ಟೈಪ್ 1 ಮಧುಮೇಹದ ಜೊತೆಗೆ ನಿಮ್ಮ ಮಗು ಆರೋಗ್ಯಕರ ಜೀವನವನ್ನು ನಡೆಸಬಹುದು ಎನ್ನುವುದು. ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ಮಧುಮೇಹವನ್ನು ನಿರ್ವಹಿಸಬಹುದಾಗಿದೆ. ಆ ಮೂಲಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬಹುದಾಗಿದೆ.
ಈ ಕುರಿತು ಮಾಹಿತಿ ನೀಡುವ ಬೆಂಗಳೂರಿನ ಆಸ್ಟರ್ ಸಿಎಂಐ ಹಾಸ್ಪಿಟಲ್ಸ್ ನ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿಯ ಲೀಡ್ ಕನ್ಸಲ್ಟೆಂಟ್ ಆಗಿರುವ ಡಾ. ಕವಿತಾ ಭಟ್, “ಟೈಪ್ 1 ಮಧುಮೇಹ ಹೊಂದಿರುವ ಮಗುವಿನ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆ ಅಥವಾ ವ್ಯಾಮಾಮವನ್ನು ಸೇರಿಸುವುದು ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಬಹಳ ಮುಖ್ಯ. ಪೋಷಕರು ಮಗುವಿಗೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡಿಸುವುದರಿಂದ ಮಗುವಿನ ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ವಿಚಾರದಲ್ಲಿ ಧನಾತ್ಮಕ ಪರಿಣಾಮ ಉಂಟು ಮಾಡಬಹುದು. ಅದರ ಜೊತೆಗೆ ಮಗುವಿನ ಇನ್ಸುಲಿನ್ ಸಂವೇದನಾಶೀಲತೆಯನ್ನು ಹೆಚ್ಚು ಮಾಡಬಹುದು. ಈ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಹೊಂದಬಹುದು. ಮಧುಮೇಹ ನಿರ್ವಹಣೆಯಲ್ಲಿ ಆಗಿರುವ ಪ್ರಗತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಗುವಿನ ಮಧುಮೇಹವನ್ನು ಸೂಕ್ತವಾಗಿ, ತೊಂದರೆ ಇಲ್ಲದೆ ನಿರ್ವಹಣೆ ಮಾಡಬಹುದು. ಉದಾಹರಣೆಗೆ ಹೇಳುವುದಾದರೆ ಪೋಷಕರು ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಸಾಧನಗಳನ್ನು ಬಳಸಿಕೊಳ್ಳುವ ಮೂಲಕ ಹಗಲು ರಾತ್ರಿ ಮಗುವಿನ ಗ್ಲೂಕೋಸ್ ಮಟ್ಟವನ್ನು ಅಳೆಯಬಹುದು. ಊಟ, ದೈಹಿಕ ಚಟುವಟಿಕೆ ಮತ್ತು ಇನ್ಸುಲಿನ್ ಡೋಸ್ ಗಳು ಹೀಗೆ ವಿವಿಧ ಅಂಶಗಳಿಗೆ ಸಕ್ಕರೆ ಅಂಶದ ಮಟ್ಟಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸಿಜಿಎಂ ಒದಗಿಸುವ ಮಾಹಿತಿಗಳ ಮೂಲಕ ತಿಳಿದುಕೊಳ್ಳಬಹುದು” ಎಂದು ಹೇಳಿದರು.
ಈ ಕುರಿತು ಮಾತನಾಡುವ ಅಬಾಟ್ ಡಯಾಬಿಟಿಕ್ ಕೇರ್ ನ ಎಮರ್ಜಿಂಗ್ ಏಷ್ಯಾ ಆಂಡ್ ಇಂಡಿಯಾದ ಮೆಡಿಕಲ್ ಅಫೇರ್ಸ್ ಹೆಡ್ ಡಾ. ಪ್ರಶಾಂತ್ ಸುಬ್ರಮಣಿಯನ್, “ಮಧುಮೇಹವನ್ನು ನಿರ್ವಹಣೆ ಮಾಡುವುದು ಯಾರಿಗೇ ಆದರೂ ಸವಾಲಿನ ವಿಚಾರವೇ ಸರಿ. ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಪೋಷಕರು ತಮ್ಮ ಮಗುವಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಿಗೆ ಮಧುಮೇಹ ನಿರ್ವಹಣೆಯ ಪ್ರಕ್ರಿಯೆಯನ್ನು ಸರಳಗೊಳಿಸಲು, ಅವರಿಗೆ ನೆರವಾಗಲು ಮತ್ತು ಶಕ್ತಿ ತುಂಬಲು ಸಿಜಿಎಂ ಸಾಧನದಂತಹ ತಾಂತ್ರಿಕ ಪ್ರಗತಿಗಳು ಬಹಳ ಉಪಯುಕ್ತ ವಾಗುತ್ತವೆ. ಅದನ್ನು ಬಳಸುವ ಮೂಲಕ ನೋವು ರಹಿತವಾಗಿ, ತೊಂದರೆ ಇಲ್ಲದೆ ಮಗುವಿನ ಗ್ಲೂಕೋಸ್ ಮಟ್ಟವನ್ನು ತಿಳಿಯಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ಸಾಧನವನ್ನು ಸ್ಮಾರ್ಟ್ಫೋನ್ಗಳ ಜೊತೆ ಜೋಡಿಸುವ ಮೂಲಕ ಡಿಜಿಟಲ್ ಸಂಪರ್ಕವನ್ನು ಸಾಧಿಸಬಹುದು ಮತ್ತು ಮೊಬೈಲ್ ಮೂಲಕವೇ ಪೋಷಕರು ಆಯಾ ಕ್ಷಣಗಳ ಮಾಹಿತಿ ಮತ್ತು ದೃಶ್ಯಗಳ ಗ್ರಾಫ್ ನೋಡಿಕೊಂಡು ರಕ್ತದ ಸಕ್ಕರೆ ಅಂಶಗಳ ಏರುಪೇರು ಗಮನಿಸುತ್ತಾ ಗ್ಲೂಕೋಸ್ ಮಟ್ಟದ ಮೇಲೆ ಸುಲಭವಾಗಿ ನಿಗಾ ವಹಿಸಬಹುದು. ಸಿಜಿಎಂ ಒಂದು ಉಪಯುಕ್ತ ಸಾಧನವಾಗಿದ್ದು, ಗ್ಲೂಕೋಸ್ ಮಟ್ಟ ಹೆಚ್ಚಿದಾಗ ನೀಡಬೇಕಾದ ಇನ್ಸುಲಿನ್ ಡೋಸ್ ಅಥವಾ ಪ್ರಮಾಣವನ್ನು ನಿಖರವಾಗಿ ಲೆಕ್ಕ ಹಾಕಲು ಪೋಷಕರಿಗೆ ನೆರವಾಗುತ್ತದೆ. ಆ ಮೂಲಕ ಆತಂಕ ಕಡಿಮೆ ಮಾಡುತ್ತದೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತದೆ” ಎಂದು ಹೇಳಿದರು.
ಇಂದು ಒತ್ತಡದ, ಅವಸರದ ಜಗತ್ತಿನಲ್ಲಿ ಮಕ್ಕಳ ದಿನಚರಿಯಲ್ಲಿ ದೈಹಿಕ ಚಟುವಟಿಕೆಗಳನ್ನು ಸೇರಿಸಿಕೊಳ್ಳುವುದು ಬಹಳ ಸವಾಲಿನ ವಿಚಾರವೇ ಹೌದು. ಆದರೆ ಅದೃಷ್ಟವಶಾತ್ ಈ ನಾಲ್ಕು ಸರಳ ಹೆಜ್ಜೆಗಳನ್ನು ಅನುಸರಿಸುವ ಮೂಲಕ ನಿಮ್ಮ ಮಗು ಆರೋಗ್ಯಕರವಾಗಿದೆ ಎಂಬುದನ್ನು ಸುಲಭವಾಗಿ ಖಾತ್ರಿ ಪಡಿಸಿಕೊಳ್ಳಬಹುದು.
1. ಕ್ರಿಯಾಶೀಲರಾಗಿರಲು ಮೋಜಿನ ಚಟುವಟಿಕೆಗಳನ್ನು ಮಾಡಿಸಿ
ಮಕ್ಕಳನ್ನು ಕ್ರಿಯಾಶೀಲರಾಗಿ ಇರಿಸಲು ಅವರಿಗೆ ಆಸಕ್ತಿ ಹುಟ್ಟಿಸುವ, ಖುಷಿ ಕೊಡುವ ವ್ಯಾಯಾಮಗಳನ್ನು ಮಾಡಿಸಬೇಕು. ಅದರಲ್ಲೂ ತಂಡದ ಜೊತೆ ಆಟವಾಡಲು ಪ್ರೋತ್ಸಾಹ ನೀಡುವುದರಿಂದ ಈ ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು. ಸೈಕ್ಲಿಂಗ್ ಮಾಡುವುದು. ಡ್ಯಾನ್ಸಿಂಗ್, ಕ್ರಿಕೆಟ್ ಆಟ, ಖೋಖೋ ಅಥವಾ ಕಬಡ್ಡಿಯಂತಹ ಆಟಗಳನ್ನು ಪ್ರತಿ ದಿನ ಆಡಲು ಉತ್ತೇಜನ ನೀಡುವುದರಿಂದ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಹಾಗೆ ಮಾಡಬಹುದು.
ಮಕ್ಕಳು ಏಕಾಂಗಿ ಭಾವವನ್ನು ಹೊಂದುವುದನ್ನು ತಪ್ಪಿಸಲು ಮತ್ತು ಅನಾರೋಗ್ಯದಿಂದಾಗಿ ಅವರು ವ್ಯಾಯಾಮ ಮಾಡಬೇಕು ಎಂಬ ಭಾವನೆ ಉಂಟಾಗದಂತೆ ಮಾಡಲು ಕುಟುಂಬ ವರ್ಗವೆಲ್ಲಾ ಸೇರಿಕೊಂಡು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಎಲ್ಲರಿಗೂ ಪಾಲ್ಗೊಳ್ಳುವುದರಿಂದ ಸಂತೋಷ ಆಗುತ್ತದೆ ಮತ್ತು ಎಲ್ಲರೂ ವ್ಯಾಯಾಮ ಮಾಡಿದಂತೆ ಆಗುತ್ತದೆ. ವಿಶೇಷವಾಗಿ ಈ ಚಟುವಟಿಕೆ ಜೊತೆಗೆ ಸಾಕಷ್ಟು ಸಮಯ ನಿದ್ರೆ ಮಾಡುತ್ತಿದ್ದಾರೆ ಎಂಬುದನ್ನು ಕೂಡ ನೋಡಿಕೊಳ್ಳಬೇಕು. ಯಾಕೆಂದರೆ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ.
2. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಮಿತವಾಗಿ ಚೆಕ್ ಮಾಡಿ
ಯಾವುದೇ ಚಟುವಟಿಕೆಗೆ ಮುಂದಾಗುವ ಮೊದಲು ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸುವುದು ಬಹಳ ಮುಖ್ಯ. ಗ್ಲೂಕೋಸ್ ಮಟ್ಟದ ಮೇಲೆ ನಿಗಾ ಇಡುವುದರಿಂದ ಮುಂದೆ ತೆಗೆದುಕೊಳ್ಳಬೇಕಾದ ಇನ್ಸುಲಿನ್ ಡೋಸೇಜ್ ಅನ್ನು ನಿರ್ಧಾರ ಮಾಡಲು ಸಹಾಯ ಆಗುತ್ತದೆ.
ಸಲು ಮಾನಿಟರಿಂಗ್ ಸಹಾಯ ಮಾಡುತ್ತದೆ. FreeStyle Libre ಯಂತಹ ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ ಸಾಧನಗಳನ್ನು ಬಳಸುವ ಮೂಲಕ ನೀವು ಸುಲಭವಾಗಿ ಗ್ಲೂಕೋಸ್ ಮಟ್ಟದ ಮೇಲೆ ನಿಗಾ ಇಡಬಹುದು. ಆ ಸಾಧನಗಳನ್ನು ಮೊಬೈಲ್ ಆಪ್ ಗೆ ಲಿಂಕ್ ಮಾಡಬಹುದಾಗಿದ್ದು, ಸುಲಭವಾಗಿ ಎಲ್ಲಾ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದು. ಅದರಿಂದ ನಿಮ್ಮ ಮಗುವಿನ ಆರೋಗ್ಯದ ಮೇಲೆ ಒತ್ತಡ ಅಥವಾ ಇನ್ನಿತರ ವರ್ತನೆಗಳಿಂದ ಉಂಟಾಗುವ ಯಾವುದೇ ಪರಿಣಾಮವನ್ನು ತಿಳಿದುಕೊಳ್ಳಬಹುದು. ಅದರಿಂದ ಸೂಕ್ತವಾದ ರೇಂಜ್ ನಲ್ಲಿ (70-180 mg/dL) ಗ್ಲೂಕೋಸ್ ಮಟ್ಟ ಇದೆ ಎಂಬುದನ್ನು ತಿಳಿದುಕೊಳ್ಳಬಹುದು ಮತ್ತು ಅದಕ್ಕೆ ಸಂಬಂಧಿಸಿದಂತೆ ವಿವೇಕಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
3. ಯಾವಾಗಲೂ ತಿಂಡಿಗಳನ್ನು ಕೈಗೆ ಸಿಗುವಂತೆ ಇಡಿ
ವ್ಯಾಯಮಕ್ಕೂ ಮೊದಲು ಅದರಲ್ಲೂ ವಿಶೇಷವಾಗಿ ನಿಮ್ಮ ಮಕ್ಕಳು 30 ನಿಮಿಷಕ್ಕಿಂತ ಹೆಚ್ಚು ಸಮಯ ಆಟದಲ್ಲಿ ತೊಡಗಿಕೊಳ್ಳುತ್ತಾರೆ ಎಂದಾದರೆ ಅವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು 100 mg/dl ಗಿಂತ ಕಡಿಮೆಯಿದ್ದರೆ ಮಕ್ಕಳು ಸುಮಾರು 15 ಗ್ರಾಂನಷ್ಟು ಕಾರ್ಬೋಹೈಡ್ರೇಟ್ಸ್ (ಉದಾಹರಣೆಗೆ ನೆಲಕಡಲೆ, ಚಿಕ್ಕಿ, ಬಾಳೆಹಣ್ಣುಗಳ ರೂಪದಲ್ಲಿ) ಸೇವಿಸಲು ಶಿಫಾರಸು ಮಾಡಲಾಗುತ್ತದೆ.
ಕೆಲವೊಮ್ಮೆ ವ್ಯಾಯಾಮಕ್ಕೆ ಮುನ್ನ ತಿಂಡಿ ಸೇವಿಸಿದರೂ ಶುಗರ್ ಲೆವೆಲ್ ಅನ್ನು ಇಳಿಮುಖವಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳು ವ್ಯಾಯಾಮ ಮಾಡುವಾಗ ಅಥವಾ ವ್ಯಾಯಾಮ ಮಾಡದೇ ಇದ್ದರೂ ಅವರ ಕೈಯಲ್ಲಿ ತಿಂಡಿಯ ಬಾಕ್ಸ್ ಇಡುವುದು ಉತ್ತಮ. ಯಾಕೆಂದರೆ ಮಕ್ಕಳು ಯಾವಾಗ ಆಟಕ್ಕೆ ಇಳಿಯುತ್ತಾರೆ ಎಂದು ಹೇಳಲು ಸಾಧ್ಯವಿರುವುದಿಲ್ಲ.
4. ಒಂದು ಪುಟ್ಟ ಮಧುಮೇಹ ಟಿಪ್ಪಣಿ ಪುಸ್ತಕ ಇಟ್ಟುಕೊಳ್ಳಿ
ನೀವು ಪ್ರತಿ ಸಲವೂ ಸರಿಯಾಗಿಯೇ ಇರಬೇಕು ಅಂತೇನೂ ಇಲ್ಲ. ಪ್ರತೀ ಅನುಭದಿಂದ ಹೊಸತೇನೋ ಕಲಿಯಬಹುದು. ಕೆಲವು ಚಟುವಟಿಕೆಗಳಿಗೆ ಅಥವಾ ಆಹಾರಗಳಿಗೆ ನಿಮ್ಮ ಮಗುವಿನ ಶುಗರ್ ಲೆವೆಲ್ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಮೊದಲೇ ತಿಳಿದಿರುವುದಿಲ್ಲ. ಅನುಭವ ಅದನ್ನು ತಿಳಿಸುತ್ತದೆ ಮತ್ತು ಕಲಿಸುತ್ತದೆ. ಹಾಗಾಗಿ ನಿಮ್ಮ ಮಗು ಯಾವುದಾದರೂ ಹೊಸ ವ್ಯಾಯಾಮವನ್ನು ಮಾಡಲು ಶುರು ಮಾಡುತ್ತಿದೆ ಎಂದಾದರೆ ನೀವು ನಿರಂತರವಾಗಿ ಮಗುವನ್ನು ಪರೀಕ್ಷಿಸುತ್ತಿರಬೇಕಾಗುತ್ತದೆ. ಯಾವ ಆಹಾರ ಸೇವಿಸಿದಾಗ ಅಥವಾ ಯಾವ ವ್ಯಾಯಾಮ ಮಾಡುವಾಗ ಅವರ ಶುಗರ್ ಲೆವೆಲ್ ಎಷ್ಟಿರುತ್ತದೆ ಎಂಬುದನ್ನು ಬರೆದಿಟ್ಟುಕೊಳ್ಳಬೇಕು. ಸಮಯವನ್ನು ಕೂಡ ಬರೆದಿಟ್ಟುಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಯಾವುದು ಕೆಲಸ ಮಾಡುತ್ತದೆ, ಯಾವುದು ಮಾಡುವುದಿಲ್ಲ ಎಂಬುದು ಗೊತ್ತಾಗುತ್ತದೆ. ಅದರ ಪ್ರಕಾರ ನೀವು ಮುಂದಿನ ಪ್ಲಾನ್ ಮಾಡಬಹುದಾಗಿದೆ. ತಿಂಡಿ ಸಮಯ ಬದಲಿಸಬೇಕೋ, ಅಥವಾ ಸಂಜೆಯ ವಾಕಿಂಗ್, ಬೆಳಗ್ಗಿನ ಜಾಗಿಂಗ್ ಅನ್ನು ಬದಲಿಸಬೇಕೋ ಎಂದು ಯೋಜಿಸಬಹುದು. ಆದರೆ ಒಂದು ವಿಚಾರ ನೆನಪಿಟ್ಟುಕೊಳ್ಳಿ, ನಿಮಗೆ ಸಂದೇಹಗಳಿದ್ದರೆ, ಗೊಂದಲಗಳಿದ್ದರೆ ಮಗುವಿನ ದಿನಚರಿಯಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಮಧುಮೇಹ ಹೊಂದಿರುವ ಮಕ್ಕಳು ಕಟ್ಟುಪಾಡುಗಳನ್ನು ಹೊಂದಿರುತ್ತಾರೆ ಎಂದು ಯಾವತ್ತೂ ಆಲೋಚಿಸಬೇಡಿ. ಈ ಕೆಲವು ನಿಯಮಗಳನ್ನು ಪಾಲಿಸುವ ಮೂಲಕ, ರಕ್ತದ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಡುವ ಮೂಲಕ, ಕುಟುಂಬದವರೆಲ್ಲಾ ಸೇರಿಕೊಳ್ಳುವ ಮೂಲಕ ಅವರು ಕ್ರಿಯಾಶೀಲರಾಗಿ ಇರುವಂತೆ ನೋಡಿಕೊಳ್ಳಬಹುದು.