ಮಂಗಳೂರು : ಬ್ಯಾಂಕ್ ಆಫ್ ಬರೋಡಾ 117 ನೇ ಸ್ಥಾಪನಾ ದಿನಾಚರಣೆಯ ಸಂಭ್ರಮದಲ್ಲಿದ್ದು, ಬ್ಯಾಂಕಿನ ಮಂಗಳೂರು ವಲಯವು ತನ್ನ ಸಿ.ಎಸ್.ಅರ್. ನಿಧಿಯಿಂದ ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯ ಮಕ್ಕಳ ವಸತಿಯುತ ಶಾಲೆಗೆ ಸೌಂಡ್ ಸಿಸ್ಟಂ ಕೊಡುಗೆಯಾಗಿ ನೀಡಿದೆ.
ಸಾನಿಧ್ಯ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಹಾಗೂ ಮಂಗಳೂರು ವಲಯದ ಮುಖ್ಯಸ್ಥ ರಾಜೇಶ್ ಖನ್ನಾ, ಡಿಜಿಎಂ ಗಳಾದ ರಮೇಶ್ ಕಾನಡೆ ಮತ್ತು ರಾಜಶೇಖರ್, ಪ್ರಾದೇಶಿಕ ಮುಖ್ಯಸ್ಥ ಸನಿಲ್ ಕುಮಾರ್ ಅವರು ಈ ಕೊಡುಗೆಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ಖನ್ನಾ ಅವರು ಮಾತನಾಡಿ, ಬ್ಯಾಂಕಿನ ಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರತೀ ವರ್ಷ ಸಿ.ಎಸ್. ಅರ್.ನಿಧಿಯಿಂದ ವಿವಿಧ ಸಂಸ್ಥೆಗಳಿಗೆ ಕೊಡುಗೆ ನೀಡಲಾಗುತ್ತಿದೆ. ಈ ವರ್ಷ ಸಾನಿಧ್ಯ ಶಾಲೆಯನ್ನು ಆಯ್ಕೆಮಾಡಲಾಗಿದೆ. ಸಾನಿಧ್ಯ ಶಾಲೆ ಭಿನ್ನ ಸಾಮರ್ಥ್ಯದ ಮಕ್ಕಳ ಆರೈಕೆ ಮಾಡುವ ಮೂಲಕ ಸಮಾಜಕ್ಕೆ ಮಹತ್ವದ ಕಾಣಿಕೆ ನೀಡುತ್ತಿದೆ ಎಂದು ಹೇಳಿದರು.
ರಮೇಶ್ ಕಾನಡೆ ಅವರು ಮಾತನಾಡಿ ಭಿನ್ನ ಸಾಮರ್ಥ್ಯದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ಬಹಳ ತ್ರಾಸದಾಯಕ ಕೆಲಸ. ಸಾನಿಧ್ಯ ಶಾಲೆ ಅತ್ಯುತ್ತಮ ಸಾಮಾಜಿಕ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಇನ್ನೋರ್ವ ಡಿಜಿಎಂ ರಾಜಶೇಖರ್ ಅವರು ಭಿನ್ನ ಸಾಮರ್ಥ್ಯ ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಸಾನಿಧ್ಯ ಸಂಸ್ಥೆಗೆ ವೈಯಕ್ತಿಕ ನೆಲೆಯಲ್ಲಿ 10 ಸಾವಿರ ರೂಪಾಯಿ ನೆರವು ಹಸ್ತಾಂತರಿಸಿದರು. ಸಾನಿಧ್ಯ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶ್ರೀ ಗಣೇಶ ಸೇವಾ ಟ್ರಸ್ಟಿನ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಉಪಾಧ್ಯಕ್ಷ ದೇವದತ್ತ ರಾವ್, ಮೊಹಮ್ಮದ್ ಬಶೀರ್ ಉಪಸ್ಥಿತರಿದ್ದರು.