ಬೆಂಗಳೂರು : ಬೆಂಗಳೂರಿನಲ್ಲಿ 1,800 ಕೋಟಿ ರೂ.ಗಳ ವೆಚ್ಚದಲ್ಲಿ 157 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಪ್ರಕಟಿಸಿದರು.
ಆಗಾಗ್ಗೆ ಗುಂಡಿಗಳು ಉಂಟಾಗುವ ಬೆಂಗಳೂರಿನ ರಸ್ತೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಇರಬಾರದು ಎಂಬ ಉದ್ದೇಶದಿಂದ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಈ ರಸ್ತೆಗಳು ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರುತ್ತವೆ.
ಪ್ರತಿ ದಿನ 3-4 ವಾರ್ಡ್ ಗಳಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು, 200 ಕಿ.ಮೀ ಹೊಸ ರಸ್ತೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಮತ್ತು ವೈಟ್ ಟಾಪಿಂಗ್ ಕೆಲಸದಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ ಎಂದು ಶಿವಕುಮಾರ್ ಹೇಳಿದರು.