ಮಂಗಳೂರು: ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ, ಅವರಿಗೆ ತಾಕತ್ತಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಹಾಕಿ ನೋಡಲಿ. ಆಮೇಲೆ ನೋಡೋಣ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಭರತ್ ಶೆಟ್ಟಿಯವರು ರಾಹುಲ್ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಸರಕಾರ ಸುಮೊಟೋ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸಂಸತ್ತಿನ ವಿಪಕ್ಷ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾದ ರಾಹುಲ್ ದೇಶಕ್ಕೆ ಪ್ರಾಣ ಕೊಟ್ಟ ನೆಹರೂ, ಇಂದಿರಾಗಾಂಧಿಯವರ ಕುಡಿ. ರಾಹುಲ್ ಹೇಳಿಕೆಯನ್ನು ಕೆಟ್ಟದಾಗಿ ಪ್ರತಿಬಿಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಭರತ್ ಶಾಸಕನಾಗಲು ನಾಲಾಯಕ್. ಯೋಗ್ಯತೆ ಇಲ್ಲದ ಮನುಷ್ಯ. ಬಿಜೆಪಿ ವಚನ ಭ್ರಷ್ಟ ಎಂದು ಕುಮಾರ ಸ್ವಾಮಿ ಅಂದು ಹೇಳಿದಾಗ ಭರತ್ ಶೆಟ್ಟಿ ಜನತಾದಳ ಪಕ್ಷದಲ್ಲಿದ್ದ. ಅಮರನಾಥ್ ಶೆಟ್ಟಿಯವರ ಕೃಪಾ ಕಟಾಕ್ಷದಿಂದ ರಾಜಕೀಯದಲ್ಲಿ ಮೇಲೆ ಬಂದು ಅವರಿಗೆ ಕೈ ಕೊಟ್ಟಿದ್ದಾನೆ. ರಾಹುಲ್ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಹುಲ್ ಅವರನ್ನು ಭರತ್ ಶೆಟ್ಟಿ ಹುಚ್ಚ ಎಂದು ಹೇಳಿದ್ದು, ಆ ಹುಚ್ಚ ಯಾರು ಎಂದು ಅವರ ನಾಯಕರ ಕಟೌಟ್ ನಲ್ಲಿ ಅವರ ವೇಷ ಭೂಷಣ ನೋಡಿದಾಗ ತಿಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.
46 ನೇ ಶಂಕರಾಚಾರ್ಯ ಪೀಠದ ಸ್ವಾಮೀಜಿಯವರೇ ʼರಾಹುಲ್ ಗಾಂಧಿ ಹೇಳಿಕೆಯನ್ನು ತಾನು ಪೂರ್ತಿ ಗಮನಿಸಿದ್ದು, ಅದರಲ್ಲಿ ಹಿಂದೂ ಸಮಾಜದಲ್ಲಿ ಹಿಂಸೆಗೆ ಅವಕಾಶವಿಲ್ಲ ಅಂದಿದ್ದಾರೆ ವಿನಹ, ಹಿಂದೂ ಸಮಾಜದ ವಿರೋಧ ಮಾತನಾಡಿಲ್ಲ. ರಾಹುಲ್ ಮಾತನ್ನು ಅಪಪ್ರಚಾರ ಮಾಡುವವರ ಮೇಲೆ ಶಿಕ್ಷೆ ಆಗಬೇಕುʼ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯ ಕಪಾಲಕ್ಕೆ ಹೊಡೆಯುವುದು ಎಂಬ ಹೇಳಿಕೆ, ಬಿಜೆಪಿಯು ಹಿಂಸೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ. ಬಿಜೆಪಿಯ ಈ ಹಿಂಸಾತ್ಮಕ ಪ್ರವೃತ್ತಿಯನ್ನೇ ರಾಹುಲ್ ಗಾಂಧಿ ಅವರು ವಿರೋಧಿಸಿ ಹೇಳಿಕೆ ನೀಡಿದ್ದು ಎಂದು ರಮಾನಾಥ ರೈ ಹೇಳಿದರು.
ಬಿಜೆಪಿ ಅಧಿಕಾರ ಕಳೆದುಕೊಂಡ ನೀರಿನಿಂದ ತೆಗೆದ ಮೀನಿನಂತೆ ಆಗಿದ್ದಾರೆ. ನಾವು ಹಿಂದೂವಿಗೆ ಹುಟ್ಟಿದವರು ಅಲ್ಲ ಅಂತ ನಮ್ಮ ತಾಯಿ ಮೇಲೆ ಆರೋಪ ಮಾಡಿ ನಮ್ಮ ಹುಟ್ಟನ್ನು ಪ್ರಶ್ನೆ ಮಾಡುತ್ತಾರೆ.ಹಿಂಸೆಗೆ ಪ್ರಚೋದನೆ ನೀಡುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಸಮುದಾಯದ ಮಧ್ಯೆ ವಿಭಜನೆಯನ್ನುಂಟುಮಾಡಿ ಮತ ಗಳಿಸುವ ಕೀಳು ಮಟ್ಟದ ರಾಜಕೀಯ. ಬಿಜೆಪಿ ಇಂತಹ ನಡವಳಿಕೆ ಬಿಡಬೇಕು ಎಂದು ಅವರು ಹೇಳಿದರು.
ಡೆಂಗಿ ಹರಡುತ್ತಿದ್ದು, ಸರಕಾರ ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಕೊರೋನ ಸಂಧರ್ಭ ಎಷ್ಟು ಕೋಟಿ ಲೂಟಿ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ದಿನ ಬಳಕೆ ವಸ್ತುಗಳ ಬೆಲೆ ಜಾಸ್ತಿ ಮಾಡಿದ್ದು ಈಗ ಗೊತಾಗಿದ್ದ ಬಿಜೆಪಿ ಯವರಿಗಾ ಎಂದು ರಮಾನಾಥ ರೈ ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಶುಭೋದಯ ಆಳ್ವ, ನವೀನ್ ಡಿಸೋಜ, ಎಂ.ಜಿ. ಹೆಗಡೆ, ಅಶ್ರಫ್, ಪ್ರಕಾಶ್ ಸಾಲಿಯಾನ್, ರಮಾನಂದ ಪೂಜಾರಿ, ನೀರಜ್ ಪಾಲ್, ಚಿತ್ತರಂಜನ್ ಶೆಟ್ಟಿ, ಸಲೀಂ, ಸುರೇಂದ್ರ ಕಾಂಬ್ಳಿ, ಇಮ್ರಾನ್, ಸವಾದ್ ಉಪಸ್ಥಿತರಿದ್ದರು.