ಮಂಗಳೂರು : ಮಂಗಳೂರಿನಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ರಾಜಕಾರಣ ಮಾಡಿದ್ದ ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ನಗರದ ಸರ್ಕ್ಯೂಟ್ ಹೌಸ್ ಬಳಿಯಿಂದ ಬಿಜೈ ಸರ್ಕಲ್ ವರೆಗಿನ ರಸ್ತೆಗೆ ಇಡಲಾಗಿದೆ. ಈ ರಸ್ತೆಯನ್ನು ಮಹಾನಗರ ಪಾಲಿಕೆ ವತಿಯಿಂದ ಅಧಿಕೃತವಾಗಿ “ಜಾರ್ಜ್ ಫರ್ನಾಂಡಿಸ್ ರಸ್ತೆ” ಎಂದು ನಾಮಕರಣ ಮಾಡಲಾಗಿದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವಾನ್ ಡಿಸೋಜ, ಭರತ್ ಶೆಟ್ಟಿ ಮತ್ತಿತರರ ಉಪಸ್ಥಿತಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ರಸ್ತೆ ನಾಮಕರಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿನಲ್ಲಿ ಜನಿಸಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದವರು ಜಾರ್ಜ್ ಫೆರ್ನಾಂಡಿಸ್. ಚಿಕ್ಕಂದಿನಲ್ಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ಅವರು ಕ್ರಿಶ್ಚಿಯನ್ ಪಾದ್ರಿಯಾಗಬೇಕೆಂದು ಬಯಸಿದ್ದರು. ಆದರೆ ಅವರು ದೇಶದ ಅಮೂಲ್ಯ ಆಸ್ತಿಯಾದರು. ಉದ್ಯೋಗವನ್ನು ಅರಸಿ ಮುಂಬೈಗೆ ಹೋದ ಅವರು ಅಲ್ಲಿ ಕಾರ್ಮಿಕ ನಾಯಕನಾಗಿ ಕೊನೆಗೆ ದೇಶವೇ ಮೆಚ್ಚುವಂತರಾಜಕಾರಣಿಯಾದರು ಎಂದು ಸ್ಮರಿಸಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ವೇಳೆ ಜಾರ್ಜ್ ಅವರು ಭೂಗತರಾಗಿಯೇ ಹೋರಾಟ ಸಂಘಟಿಸಿದ್ದರು. ಜೈಲು ಸೇರಿದರೂ ಅಲ್ಲಿಂದಲೇ ಸ್ಪರ್ಧಿಸಿ ದಾಖಲೆಯ ಮಟ್ಟದಲ್ಲಿ ಗೆದ್ದು ಕೇಂದ್ರ ಮಂತ್ರಿಯೂ ಆದರು. ವಾಜಪೇಯಿ ಅವರ ಜೊತೆ ಎನ್ಡಿಎ ಸೇರಿ ರೈಲ್ವೇ ಸಚಿವರಾಗಿ ಅಭೂತಪೂರ್ವ ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಮೂಲೆಗುಂಪಾಗಿದ್ದ ಕೊಂಕಣ ರೈಲ್ವೇ ಯೋಜನೆಯನ್ನು ಕೈಗೆತ್ತಿಕೊಂಡು ಅದಕ್ಕೆ ಜೀವ ಕೊಟ್ಟು ಯೋಜನೆಯನ್ನು ಸಾಕಾರಗೊಳಿಸಿದ ಕೀರ್ತಿ ಜಾರ್ಜ್ ಅವರದ್ದು ಎಂದು ವೇದವ್ಯಾಸ್ ಹೇಳಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಜಾರ್ಜ್ ಫರ್ನಾಂಡಿಸ್ ಅವರ ಜೀವನಗಾಥೆ ಮುಂದಿನ ಹಲವು ತಲೆಮಾರುಗಳಿಗೆ ಆದರ್ಶ ಮತ್ತು ಸ್ಪೂರ್ತಿಯಾಗಿದೆ. ಇಂತಹ ಶ್ರೇಷ್ಠ ವ್ಯಕ್ತಿತ್ವದ ಹೆಸರನ್ನು ಮಂಗಳೂರಿನ ಈ ರಸ್ತೆಗೆ ಇಡುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ. ಜಾರ್ಜ್ ಅವರು ರಕ್ಷಣಾ ಸಚಿವರಾಗಿದ್ದಾಗ ದೆಹಲಿ ಪೆರೇಡ್ ನಲ್ಲಿ ನಾನು ಅವರನ್ನು ಹತ್ತಿರದಿಂದ ನೋಡಿದ್ದೆ ನನಗೆ ದೊಡ್ಡ ಸ್ಫೂರ್ತಿ ಜಾರ್ಜ್. ಅವರು ಹುಟ್ಟಿದ್ದು ಬಿಜೈ ಆದರೂ ಕರ್ಮಭೂಮಿ ಬಿಹಾರವಾಗಿತ್ತು. ಅಂಥ ಮೇರು ವ್ಯಕ್ತಿತ್ವದ ಬಗ್ಗೆ ಪಠ್ಯದಲ್ಲಿ ಬರಬೇಕು. ಬಿಜೈ ಸರ್ಕಲ್ ನಲ್ಲಿ ಅವರ ಪ್ರತಿಮೆ ಸ್ಥಾಪನೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೈ ಚರ್ಚ್ ಧರ್ಮಗುರು ಜೆ.ಬಿ. ಸಲ್ದಾನ, ವಿಶೇಷ ಅತಿಥಿಗಳಾಗಿ ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕಲ್ ಫೆರ್ನಾಂಡಿಸ್, ಪಾಲಿಕೆ ಸದಸ್ಯರಾದ ಪ್ರವೀಣಚಂದ್ರ ಆಳ್ವ ಲ್ಯಾನ್ಸ್ ಲಾಟ್ ಪಿಂಟೋ ಮತ್ತಿತರರಿದ್ದರು.