ಮಂಗಳೂರು : ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ನೇತ್ರಾವತಿ ರಿವರ್ ಫ್ರೆಂಚ್ (ಜಲಾಭಿಮುಖ ಯೋಜನೆ ನಡಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿತದ ಬಗ್ಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ಮೇಯರ್ ರನ್ನು ತರಾಟೆಗೈದ ಪ್ರಸಂಗ ಶುಕ್ರವಾರ ನಡೆಯಿತು.
ರಿವರ್ ಫ್ರೆಂಚ್ ಯೋಜನೆಯಲ್ಲಿ ಸಿಆರ್ ಝಡ್ ಕಾನೂನು ಉಲ್ಲಂಘನೆಯಾಗಿರುವುದು ಮಾತ್ರವಲ್ಲದೆ, ಮೊದಲ ಮಳೆಗೆ ತಡೆಗೋಡೆ ಕುಸಿತವಾಗಿದೆ. ಜನರ ತೆರಿಗೆ ದುಡ್ಡಿನ ಕೋಟ್ಯಂತರ ರೂ.ಗಳನ್ನು ಪೋಲು ಮಾಡಲಾಗುತ್ತಿದೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು ಈ ಯೋಜನೆ ಯಾಕೆ ನಿಲ್ಲಿಸಬಾರದು ಎಂದು ಜಯಪ್ರಕಾಶ್ ಎಂಬವರು ಮೇಯರ್ ಅವರನ್ನು ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ದೊರಕಿರುವುದೇ ಈ ನೇತ್ರಾವತಿ ಜಲಾಭಿಮುಖ ಯೋಜನೆಯಿಂದ. ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಬೋಳಾರದವರೆಗಿನ 2.1 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಡಿಪಿಆರ್ ಅನುಮೋದನೆ ದೊರಕಿ ಕಾಮಗಾರಿ ಡೆದಿದೆ. ಇತ್ತೀಚೆಗೆ ತಡೆಗೋಡೆ ಕುಸಿತವಾಗಿ ಕಳಪೆ ಕಾಮಗಾರಿ ಕುರಿತಂತೆ ಸ್ಮಾರ್ಟ್ ಸಿಟಿಯ ಬೋರ್ಡ್ ಸಭೆಯಲ್ಲಿ ಮನಕ್ಕೆ ತರಲಾಗಿದೆ. ಎನ್ ಜಿಟಿ ತಂಡ ಈಗಾಗಲೇ ಅಲ್ಲಿ ಭೇಟಿ ನೀಡಿ ಪರಿಸರಕ್ಕೆ ಧಕ್ಕೆ ತರುವ ವಿಚಾರ ಸಂಗ್ರಹಿಸುವಂತೆ ತಿಳಿಸಿದೆ. ಸದ್ಯ ಎನ್ ಜಿಟಿ ಕಾಮಗಾರಿಗೆ ತಡೆ ನೀಡಿದೆ. ಕುಸಿತಗೊಂಡ ತಡೆಗೋಡೆಯನ್ನು ಗುತ್ತಿಗೆದಾರರು ಮರು ನಿರ್ಮಾಣ ಮಾಡಲಿದ್ದಾರೆ. ಅವರಿಗೆ ಹಣ ನೀಡದಂತೆ ಸೂಚಿಸಲಾಗಿದೆ ಎಂದು ಮೇಯರ್ ಉತ್ತರಿಸಿದರು.
ಗೋವಿಂದದಾಸ್ ಕಾಲೇಜು ಹಿಂಬದಿಯ ರಸ್ತೆ ಹದಗೆಟ್ಟಿದೆ. ಒಂದೇ ಮಳೆಗೆ ರಸ್ತೆಯ ತೇಪೆ ಕಾರ್ಯ ಅರ್ದಂಬರ್ಧ ಕಿತ್ತು ಹೋಗಿದೆ. ಸ್ಥಳೀಯ ಮನಪಾ ಸದಸ್ಯರ ಗಮನಕ್ಕೆ ತರಲಾಗಿದ್ದರೂ ಸ್ಪಂದನ ದೊರಕಿಲ್ಲ ನಾನೂ ಬಿಜೆಪಿ ಕಾರ್ಯಕರ್ತ ಆಗಿರುವುದರಿಂದ ನಿಮ್ಮಲ್ಲಿ ಹೇಳುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾವು ಬರಬೇಕಲ್ಲ ಎಂದು ಮೇಯರ್ ಗೆ ಸ್ಥಳೀಯರೊಬ್ಬರು ಅಹವಾಲು ಸಲ್ಲಿಸಿದ ಪ್ರಸಂಗವೂ ಫೋನ್ ಇನ್ ಮೂಲಕ ನಡೆಯಿತು.
ಕುಲಶೇಖರ, ನಿಡ್ಕಲ್ ಬಳಿ ರಸ್ತೆಯ ಬದಿಯನ್ನೇ ಅಲ್ಲಿ ರೈಲ್ವೇ ಕಾಮಗಾರಿ ನಡೆಸುವ ಕಾರ್ಮಿಕರು ಬಯಲು ಶೌಚಾಲಯವಾಗಿಸಿದ್ದಾರೆ. ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಕ್ರಮವಿಲ್ಲ ಎಂದು ಇನ್ನೇಶಿಯಸ್ ಡಿಸೋಜ ಎಂಬವರು ಬೇಸರ ವ್ಯಕ್ತಪಡಿಸಿದರು. ಕೆಪಿಟಿಯಿಂದ ಯೆಯ್ಯಾಡಿವರೆಗಿನ ರಸ್ತೆಯಲ್ಲಿ ಅಕ್ರಮ ಅಂಗಡಿಗಳಿಂದ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಂತಿ ಎಂಬವರು ದೂರಿದರು.
ಮೇರಿಹಿಲ್ ನ ವಿನ್ಸೆಂಟ್ ಎಂಬವರು ಕರೆ ಮಾಡಿ, ಕಳೆದ ನಾಲ್ಕು ತಿಂಗಳಿಂದ ನೀರಿನ ಬಿಲ್ ಬಂದಿಲ್ಲ ನೀರು ಕೂಡಾ ಕೆಂಪು ಬಣ್ಣದಿಂದ ಕೂಡಿರುತ್ತದೆ ಎಂದು ಮೇಯರ್ ಗಮನಕ್ಕೆ ತಂದರು.
ಕುಳಾಯಿಯ ಹೊನ್ನಕಟ್ಟೆಯಲ್ಲಿ ಬಸ್ಸು ನಿಲ್ದಾಣವಿಲ್ಲದೆ, ಪ್ರಯಾಣಿಕರು ಬಿಸಿಲು ಮಳೆಗೆ ರಸ್ತೆಯಲ್ಲಿಯೇ ನಿಲ್ಲಬೇಕಾಗಿದೆ ಎಂದು ರಮೇಶ್ ಕುಳಾಯಿ ಎಂಬವರು ಹೇಳಿದರು.
ಫೋನ್ ಇನ್ ವೇಳೆ ರಸ್ತೆ ಬದಿಗಳಲ್ಲಿನ ಅನಧಿಕೃತ ಗೂಡಂಗಡಿಗಳ ಬಗ್ಗೆ ಹಲವು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ನಗರದ ಎಲ್ಲಾ ಫುಟ್ ಪಾತ್ ಗಳಲ್ಲಿ ಜನರಿಗೆ, ಪಾದಚಾರಿಗಳಿಗೆ ನಡೆದಾಡಲು ಅನಾನುಕೂಲ ಆಗುವ ಬಿದಿಬದಿ ವ್ಯಾಪಾರವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡುವುದಾಗಿ ಹೇಳಿದರು.
ನಗರದ ಹಲವೆಡೆ ಫಾಸ್ಟ್ ಪುಡ್ಗಳಲ್ಲಿ ಬಳಸುವ ಖಾದ್ಯ ತೈಲ, ನೀರು ಸರಿ ಇಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಅಧಿಕಾರಿಗಳ ಮೂಲಕ ದಾಳಿ ನಡೆಸಿ ತೆರವಿಗೆ ಕ್ರಮ ವಹಿಸಲಾಗುವುದು. ಪ್ರತಿ ವಾರ್ಡ್ನಲ್ಲಿರುವ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ವಾರ್ಡ್ ಗಳಲ್ಲಿ ಲಭ್ಯ ಇರುವ ಸರಕಾರಿ ಜಾಗದಲ್ಲಿ ವೆಂಡಿಂಗ್ ಝನ್ (ವ್ಯಾಪಾರ ವಲಯ)ಗಳನು ಗುರುತಿಸಿ ಅಲ್ಲಿಗೆ ವ್ಯಾಪಾರ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು. ಸ್ಥಳಾಂತರ ಆಗದವರಿಗೆ ಕಾನೂನು ಕ್ರಮ ವಹಿಸುವುದಾಗಿ ಮೇಯರ್ ಹೇಳಿದರು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.