ಉಳ್ಳಾಲ: ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ಮನೆಯೊಳಗೆ ವಾಸ್ತವ್ಯ ವಿದ್ದ ರಿಹಾನ ಮಂಝಿಲ್ ಮನೆಯ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಮೃತರು. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ, ಕುಸಿದು ದುರಂತ ಸಂಭವಿಸಿದೆ.
ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ಕಾರ್ಯನಿರ್ವಹಿಸುತ್ತಿದ್ದರು.ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಬೆಳಗ್ಗಿನ ಜಾವ ಇಲ್ಲವಾಗಿದ್ದಾರೆ. ರಾತ್ರಿಯಿಡೀ ಮಳೆಯಾದ ಪರಿಣಾಮ ಕಂಪೌಂಡ್ ವಾಲ್ ಹಾಗೂ ಎರಡು ಅಡಿಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲೆ ಹಾಗೂ ಕಾಲೇಜಿಗೆ ತೆರಳುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಲೀಸ್ ಗೆ ನೀಡಿ ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಂಪೌಂಡ್ ಕುಸಿದಿದ್ದು, ಯಾವುದೇ ಪ್ರಾಣಾಪಾಯವಾಗಿರಲಿಲ್ಲ.
ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ ,ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಕೊನೆಯ ಮೃತದೇಹವನ್ನು ಹೊರತೆಗೆದಿದ್ದಾರೆ.
ದೊಡ್ಡಮಗಳು ರಶೀನಾ ಕೇರಳ ಕಡೆಗೆ ವಿವಾಹ ಮಾಡಿಕೊಡಲಾಗಿದ್ದು, ಬಕ್ರೀದ್ ಗೆಂದು ಬಂದವರು ನಿನ್ನೆಯಷ್ಟೇ ಗಂಡನ ಮನೆಗೆ ವಾಪಸ್ಸಾಗಿದ್ದರು.
ಅತ್ಯಂತ ನೋವಿನ ಸಂಗತಿ ಸರಕಾರದಿಂದ ಕುಟುಂಬಕ್ಕೆ ಗರಿಷ್ಠ ಪರಿಹಾರ : ಯು.ಟಿ.ಖಾದರ್
ಸ್ಪೀಕರ್ ಯು.ಟಿ. ಖಾದರ್ ಕುತ್ತಾರ್ ಮದನಿ ನಗರದಲ್ಲಿ ಮನೆಯ ಮೇಲೆ ಕಂಪೌಂಡ್ ಕುಸಿದು ನಾಲ್ವರು ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ‘ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಕೃತಿ ನಮ್ಮ ಕೈಯ್ಯಲಿಲ್ಲ ದೇವರ ಕೈಯಲ್ಲಿದ್ದು, ಯಾಸೀರ್ ಕುಟುಂಬಸ್ಥರ ನೋವಿನ ಜೊತೆಗೆ ಎಲ್ಲರೂ ಇದ್ದೇವೆ, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಜಿಲ್ಲಾಧಿಕಾರಿ, ಸಿಇಒ ಜೊತೆಗೆ ಚರ್ಚಿಸಿ ತಾತ್ಕಾಲಿಕ ಪರಿಹಾರ ತಕ್ಷಣ ಕ್ರಮಕೈಗೊಳ್ಳಲಾಗುವುದು. ಪರಿಹಾರ ಸಂಬಂಧಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸಂಪರ್ಕಿಸಿ ಸರಕಾರದಿಂದ ಸಾಧ್ಯವಾದಷ್ಟು ಸಹಕಾರ ನೀಡುವ ಕುರಿತು ಚರ್ಚಿಸಲಾಗಿದೆ.
ಮದನಿನಗರದ ಎಲ್ಲಾ ಯುವಕರು, ಗ್ರಾ.ಪಂ ಸದಸ್ಯರ ಕಾರ್ಯಾಚರಣೆ ಶ್ಲಾಘಿಸುತ್ತೇನೆ. ಸರಕಾರದ ಅಧಿಕಾರಿಗಳ ಜೊತೆಗೆ ಸಹಕರಿಸಿ ಎಲ್ಲಾ ರೀತಿಯಲ್ಲೂ ಕುಟುಂಬಸ್ಥರಿಗೆ ಸಹಕರಿಸುತ್ತೇವೆ, ಮಗಳು ಬಂದ ತಕ್ಷಣ ಗೌರವಪೂರ್ವಕವಾಗಿ ಎಲ್ಲರೂ ಸೇರಿಕೊಂಡು ಅಂತ್ಯಸಂಸ್ಕಾರ ನಡೆಸಲಾಗುವುದು. ಸರಕಾರ, ಶಿಕ್ಷಣ ಇಲಾಖೆಯ ಪರಿಹಾರದ ಕುರಿತು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ.ಸರಿಯಿರುವ ಪ್ರದೇಶದಲ್ಲೂ ಪ್ರಕೃತಿ ವಿಕೋಪಗಳು ನಡೆದಿದೆ. ಸರಕಾರ, ಮನೆ ಕಟ್ಟುವವರಿಗೆ ಎಲ್ಲರೀಗೂ ಇದು ಎಚ್ಚರಿಕೆಯ ಸಂದೇಶ. ಮೇಲೆ ಮನೆಕಟ್ಟುವವರು ಕೆಳಗಿನ ಮನೆಯವರ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ಸಂಕಷ್ಟದಿಂದ ಕೆಲವರು ಅನಿವಾರ್ಯ ರೀತಿಯಲ್ಲಿ ಮನೆಯನ್ನು ಕಟ್ಟುತ್ತಿದ್ದಾರೆ. ಕರಾವಳಿಯ ವಾತಾವರಣ ಅಪಾಯಕಾರಿಯಾಗಿದೆ.ಮೇಲಿನ ಮನೆಯು ಆತಂಕದಲ್ಲಿದ್ದು, ಮಣ್ಣು ತೆಗೆದಲ್ಲಿ ಅದು ಬೀಳುವ ಸಾಧ್ಯತೆಯಿದೆ. ಸ್ಯಾಂಡ್ ಬ್ಯಾಗ್ ತಾತ್ಕಾಲಿಕ ಪರಿಹಾರ ಮಳೆಗಾಲ ಮುಗಿಯುವವರೆಗೂ ನಡೆಸಲಾಗುವುದು. ಸರಕಾರದ ನಿಯಮ ಮೀರಿ ಮನೆ ನಿರ್ಮಿಸದಂತೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಭೇಟಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾತನಾಡಿ, ಪ್ರಕೃತಿ ವಿಕೋಪ ದಿಂದ ಸಂಭವಿಸಿದ ಘಟನೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ಕುಟುಂಬಸ್ಥರಿಗೆ ನೀಡಲಾಗುವುದು. ಎಲ್ಲಾ ಮೃತದೇಹಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕೇರಳದಲ್ಲಿರುವ ಪುತ್ರಿ ವಾಪಸ್ಸಾದ ತಕ್ಷಣ ಅಂತಿಮ ಸಂಸ್ಕಾರ ಗೌರವಪೂರ್ಣವಾಗಿ ಕೈಗೊಳ್ಳಲಾಗುವುದು. ಪರಿಹಾರ ಕ್ರಮದ ಕುರಿತು ಎಲ್ಲಾ ರೀತಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮಗಳನ್ನು ತಕ್ಷಣ ಒದಗಿಸಲಾಗುವುದು ಎಂದರು.
ಸರಕಾರ ಮುಂಜಾಗ್ರತಾ ಕ್ರಮ ವಹಿಸಬೇಕು: ಮಾಜಿ ಸಂಸದ ನಳಿನ್ ಕಟೀಲ್
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ” ಜಿಲ್ಲೆಯ ಮದನಿನಗರದಲ್ಲಿ ಮೃತಪಟ್ಟವರ ಆತ್ಮಕ್ಕೆ ಸದ್ಗತಿ ಬಯಸುತ್ತೇನೆ. ಕುಟುಂಬಸ್ಥರಿಗೆ ದು:ಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ವಸತಿ ಪ್ರದೇಶವಾಗಿದ್ದು, ಮುಂಜಾಗ್ರತಾ ಕ್ರಮವನ್ನು ಸರಕಾರ ವಹಿಸಬೇಕಿದೆ. ಮನೆಗಳಿಗೆ ತಕ್ಷಣ ಪರಿಹಾರವನ್ನು ಸರಕಾರ ನೀಡಬೇಕು. ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಂದರ್ಭ ಅವಘಢಗಳು ನಿರಂತರವಾಗಿ ಸಂಭವಿಸುತ್ತಲೇ ಇದೆ. ನಾಲ್ಕು ಜೀವಗಳು ಬಲಿಯಾದ ಪ್ರದೇಶದಲ್ಲಿ ಇನ್ನಷ್ಟು ಮನೆಗಳಿದ್ದು, ತಕ್ಷಣದಿಂದ ಸರಕಾರ ಮುಂಜಾಗ್ರತಾ ಕ್ರಮ ಅನುಸರಿಸಬೇಕಿದೆ ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ,ಮಂಗಳೂರು ಕ್ಷೇತ್ರ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಮುಖಂಡ ಸಂತೋಷ್ ರೈ ಬೋಳಿಯಾರ್ ಉಪಸ್ಥಿತರಿದ್ದರು.