ಮಂಗಳೂರು : ಬೋಳಿಯಾರ್ ಅನ್ನೋದು ಸಹೋದರತೆ ಇರೋ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ. ಆದರೆ ಅದನ್ನ ಅಲ್ಲಿನ ಊರಿನವರೇ ಸರಿ ಪಡಿಸುವ ಕೆಲಸ ಮಾಡ್ತಿದಾರೆ. ಆದರೆ ದಯವಿಟ್ಟು ಹೊರಗಿನವರು ಯಾರೂ ಶಾಂತಿ ಕೆಡಿಸಬೇಡಿ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, ಬೋಳಿಯಾರ್ನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ನಡೆದ ಚೂರಿ ಇರಿತ ಪ್ರಕರಣದಲ್ಲಿ ಕ್ಷೇತ್ರದ ಹೊರಗಿನ ವ್ಯಕ್ತಿಗಳು ರಾಜಕೀಯ ಮಾಡ್ತಿರೋದಕ್ಕೆ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊರಗಿನವರು ಬಾಯಿ ಮುಚ್ಚು ಕೂರುವುದೇ ದೇಶ ಪ್ರೇಮ. ಹೊರಗಿನ ಎಲ್ಲರೂ ಅಲ್ಲಿ ಮೂಗು ತೂರಿಸೋ ಕೆಲಸ ಬಿಟ್ಟು ಬಿಡಿ. ಭಾರತ್ ಮಾತ ಕೀ ಜೈ ಅಂತ ಎಲ್ಲಾ ದೇಶಭಕ್ತರು ಎಲ್ಲೂ ಹೇಳಬಹುದು. ಆದರೆ ಅಲ್ಲಿ ಬೇರೆ ಏನು ಅವಾಚ್ಯ ಶಬ್ದ ಬೈದಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಹೆಚ್ಚಾಗಲ್ಲ.
ಯಾವುದೇ ಪಕ್ಷಕ್ಕೂ ಅಲ್ಲಿ ಓಟ್ ಹೆಚ್ಚಾಗಲ್ಲ. ನನ್ನ ಚುನಾವಣೆಯಲ್ಲಿ ಎರಡು ಪಕ್ಷ ಸೇರಿ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟರು. ಅವರು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನೀಗ ಸ್ಪೀಕರ್, ಹಾಗಾಗಿ ಯಾವುದೇ ಪಕ್ಷದ ಹೆಸರು ಹೇಳಲ್ಲ. ಈ ವಿಚಾರ ಸುಮ್ಮನೆ ದೊಡ್ಡದು ಮಾಡೋರೇ ದೇಶದ್ರೋಹಿಗಳು. ಪೊಲೀಸರಿಗೆ ಕೆಲಸ ಮಾಡಲು ಬಿಡಿ, ಅವರು ಎಲ್ಲವನ್ನೂ ಸರಿ ಮಾಡ್ತಾರೆ ಎಂದರು.
ಇನ್ನು ಬೋಳಿಯಾರ್ ಘಟನೆಯಲ್ಲಿ ಮೆರವಣಿಗೆ ಎಲ್ಲವೂ ಆಗಿದೆ. ಆದರೆ ಮತ್ತೆ ಮೂರು ಜನ ಬೈಕ್ ನಲ್ಲಿ ಬಂದು ಸಮಸ್ಯೆ ಮಾಡಿದ್ದಾರೆ. ಆ ಬಳಿಕ ಅವರು ಬೈಕ್ ನಲ್ಲಿ ಬಂದು ಮತ್ತೆ ಹಲ್ಲೆ ಮಾಡಿರೋದು ದೊಡ್ಡ ತಪ್ಪು. ಭಾರತ್ ಮಾತಕೀ ಜೈ ಎಲ್ಲೂ ಕೂಡ ಹೇಳಬಹುದು. ರಸ್ತೆ, ಮಸೀದಿ, ಎಲ್ಲೂ ನಾವು ಭಾರತ್ ಮಾತ ಕೀ ಜೈ ಹೇಳಬಹುದು. ಅವರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ಸ್ಥಳೀಯರು ಪೊಲೀಸ್ ದೂರು ನೀಡಿದ್ದಾರೆ. ಇದರ ಬಗ್ಗೆ ಹೊರಗಿನವರು ಬಂದು ಮಾತನಾಡೋ ಅಗತ್ಯ ಇಲ್ಲ.
ಎರಡೂ ಕಡೆಯ ತಪ್ಪಿನ ಬಗ್ಗೆ ಪೊಲೀಸರು ಸಿಸಿಟಿವಿ ನೋಡಿ ಕ್ರಮ ತೆಗೋತಾರೆ. ನಾನು ಶಾಸಕನಾಗಿ 99% ಸತ್ಪ್ರಜೆಗಳನ್ನ ನೋಡಿಕೊಳ್ಳೋದು ಜವಾಬ್ದಾರಿ. ಉಳಿದ 1% ಕೆಟ್ಟ ಜನರನ್ನು ಪೊಲೀಸರು ನೋಡಿಕೊಳ್ತಾರೆ. ವಾಟ್ಸಪ್ ಮೆಸೇಜ್, ವಾಯಿಸ್ ಮೆಸೇಜ್ ನೋಡಿಕೊಂಡಿದ್ರೆ ಸಮಾಜ ಎಲ್ಲಿಗೆ ಮುಟ್ಟಬಹುದು. ಪೊಲೀಸರು ತನಿಖೆಗೆ ಕಳೆದುಕೊಂಡು ಹೋಗಬಾರದು ಅಂದ್ರೆ ಹೇಗೆ? ಆರೋಪಿಯ ಹೆಂಡತಿಯನ್ನು ಠಾಣೆಗೆ ಕರೆದು ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಆದರೆ ಇದರ ವಿರುದ್ದ ಫೇಕ್ ವಾಯ್ಸ್ ಆಗಿ ಜನರಲ್ಲಿ ಗೊಂದಲ ಮಾಡಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ಸಮಸ್ಯೆ ಇಲ್ಲ, ಹೊರಗಿನವರಿಗೆ ಸಮಸ್ಯೆ. ನಾವು ಅಲ್ಲಿನ ಸಮಸ್ಯೆ ಬಗೆ ಹರಿಸಲು ಕೆಲಸ ಮಾಡಬೇಕು. ಅದು ಬಿಟ್ಟು ಅಲ್ಲಿನ ಸಮಸ್ಯೆ ಮತ್ತಷ್ಟು ಹೆಚ್ಚಿಸಲು ನಾವು ಹೋಗಬಾರದು ಎಂದು ತಿಳಸಿದ್ದಾರೆ.
ನಾನು ಆಸ್ಪತ್ರೆಗೆ ಹೋಗಿಲ್ಲ, ಇಂಥದ್ದಕ್ಕೆ ನಾವು ಪ್ರೋತ್ಸಾಹ ಕೊಡಬಾರದು. ಆಸ್ಪತ್ರೆಯಲ್ಲಿ ಬಡವರಿದ್ದಾರೆ, ಅವರನ್ನು ನಾವು ನೋಡಬೇಕು. ಅದು ಬಿಟ್ಟು ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿ ಆಸ್ಪತ್ರೆಗೆ ಸೇರಿದವ್ರನ್ನ ನೋಡೋದಲ್ಲ. ಅವರನ್ನು ಅವರಷ್ಟಕ್ಕೆ ಬಿಡಿ, ಅವರು ಅಲ್ಲಿಗೆ ಸರಿಯಾಗ್ತಾರೆ. ನಾವು ರಾಜಕಾರಣಿಗಳು ಇಂಥದ್ದಕ್ಕೆ ತಲೆ ಹಾಕಲೇಬಾರದು.
ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಸಪೋರ್ಟ್ ಮಾಡಲ್ಲ. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡೋದು ಎಲ್ಲಾ ಮಾಡಿದರೆ ಮತ್ತೆ ಗೊಂದಲ ಆಗುತ್ತೆ. ಯಾಕೆ ಒಬ್ಬೊಬ್ಬರು ರಾಜಕೀಯದವರು ಅವರ ಹತ್ತಿರ ಹೋಗಬೇಕು. ನನ್ನನ್ನೂ ಸೇರಿಸಿ ರಾಜಕೀಯದವರು ಅಲ್ಲಿಗೆ ಹೋಗಲೇ ಬಾರದು ಎಂದರು.
ಸ್ಪೀಕರ್ ಸ್ಥಾನದಿಂದ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಖಾದರ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಹಣೆ ಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತೆ ಗೊತ್ತಿಲ್ಲ. ನಾನು ಹಿಂದೆ ಎಣಿಸಿದ್ದೆ ನಮ್ಮ ಶ್ರಮ ನಮ್ಮನ್ನ ತೆಗೆದುಕೊಂಡು ಹೋಗುತ್ತೆ ಅಂತ. ಈಗ ನನಗೆ ಅಶೀರ್ವಾದ ಕೂಡ ಹೆಚ್ಚಾಗಿ ಬೇಕು ಅಂತ ಗೊತ್ತಾಗಿದೆ.
ಶಾಸಕ, ಮಂತ್ರಿ, ಸ್ಪೀಕರ್ ಎಲ್ಲದರಲ್ಲೂ ನಾನು ಖುಷಿಯಾಗಿದ್ದೇನೆ. ನನಗೆ ಸ್ಥಾನ ಮುಖ್ಯವಲ್ಲ, ನಾವು ಕೆಲಸ ಮಾಡೋದು ಮುಖ್ಯ. ನಾನು ಮಾಜಿಯಾದ್ರೂ ಬಹಳ ಸಂತೋಷವಾಗಿ ಕೆಲಸ ಮಾಡ್ತೇನೆ. ನಾನು ಎಲ್ಲರ ಆಶೀರ್ವಾದದಿಂದ ಸ್ಪೀಕರ್ ಆಗಿ ಖುಷಿಯಾಗಿದ್ದೇನೆ. ಮೇಲೆ ಹೋದರೂ ಕೆಳಗೆ ಇಳಿದರೂ ನಾನು ಖುಷಿಯಲ್ಲಿ ಇದ್ದೇನೆ. ನನ್ನ ಅಧಿಕಾರ ಶಾಶ್ವತ ಅಲ್ಲ ಅಂತ ನನಗೆ ಪ್ರತೀ ನಿತ್ಯ ಗೊತ್ತಿದೆ. ಮಾಜಿ ಶಾಸಕ ಆದರೂ ನಾನು ಬಹಳ ಖುಷಿಯಲ್ಲಿ ಇರ್ತೇನೆ ಎಂದರು.
ಚುನಾವಣೆ ಸಂಧರ್ಭ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೆ.ಕ್ಷೇತ್ರದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಬಗ್ಗೆ ಹೇಳಿದ್ದೆ.ಇದರ ಮೊದಲ ಹಂತದ ಕೆಲಸ ಈಗ ಪೂರ್ಣಗೊಂಡಿದೆ.
ಇಡೀ ಉಳ್ಳಾಲ ನಗರಕ್ಕೆ 70 ಲಕ್ಷ ಲೀಟರ್ ನೀರಿನ ಸಿಂಗಲ್ ಟ್ಯಾಂಕ್ ಆಗಿದೆ.ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ಕೆಲಸ ಆಗಿದೆ.ಇನ್ನು ಮನೆ ಮನೆಗಳಿಗೆ ನೀರು ಪೂರೈಕೆ ಕೆಲಸ ಆಗಬೇಕಿದೆ.ಇದಕ್ಕಾಗಿ 386 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ.
ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಚಾಲನೆಗೆ ಸಿಎಂ ಬರ್ತಾರೆ. ಶೀಘ್ರದಲ್ಲೇ ಸಿಎಂ ಇದರ ಉದ್ಘಾಟನೆ ಮಾಡಲಿದ್ದಾರೆ. ರಸ್ತೆ, ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ.ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಕೆಲಸ ಅಗಲಿದೆ.
ಕಡಲ್ಕೊರೆತ ಸಂಬಂಧ ಎನ್ಐಟಿಕೆ ಅಧ್ಯಯನದ ವರದಿ ಆಧರಿಸಿ ಕ್ರಮ. ಅದರ ಮೇಲೆ ಸರ್ಕಾರದ ಜೊತೆ ಮಾತನಾಡಿ ಕಾರ್ಯ.ಟೆಕ್ನಿಕಲ್ ಎಕ್ಸ್ ಪರ್ಟ್ ಜೊತೆ ಚರ್ಚಿಸಿ ಕಡಲ್ಕೊರೆತ ತಡೆ ಕಾರ್ಯ.ಸಮುದ್ರ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ.
ಕೆಲಸ ಆದ ಬಳಿಕ ಸರ್ಕಾರ ಅದರ ನಿರ್ವಹಣೆಗೂ ಹಣ ಕೊಡಬೇಕು.ಸಮುದ್ರದಲ್ಲಿ ಮಾಡಿದ ಕಾರ್ಯಕ್ಕೆ ನಿರ್ವಹಣೆ ಅಗತ್ಯ ಇದೆ.ನಾವು ತಾತ್ಕಾಲಿಕ ಕೆಲಸ ಮಾಡಿ ಮನೆಗಳು ನಾಶ ಆಗದಂತೆ ನೋಡಿದ್ದೇವೆ.ಈ ಬಾರಿ ಹೆಚ್ಚು ಅಪಾಯ ಇರೋ ಜಾಗಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ.
ಉಚ್ಚಿಲದ ಬಟ್ಟಪಾಡಿ ಕಡಲ ತೀರ ರಕ್ಷಣೆಯ ಕೆಲಸ ಆಗಬೇಕಿದೆ.ಇದಕ್ಕಾಗಿ ಎನ್ ಐಟಿಕೆ ಅಧ್ಯಯನ ಮಾಡಲು ಸೂಚಿಸಲಾಗಿದೆ.ಬಾಂಬೆ ಟು ಕೊಚ್ಚಿ ಹೋಗುವ ಕ್ರೂಸ್ ಗೆ ಮಂಗಳೂರಿನಲ್ಲಿ ವ್ಯವಸ್ಥೆ ಬೇಕಾಗಿದೆ.ಸೋಮೇಶ್ವರದಲ್ಲಿ ಟೂರಿಸಂ ಬಂದರು ನಿರ್ಮಾಣದ ಯೋಜನೆ ಮಾಡಲಾಗಿದೆ.
ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ನಾನು ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಎಲ್ಲಾ ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ಬಂದ್ ಮಾಡಿಸಿದ್ದೇನೆ.ತುಂಬಾ ಒತ್ತಡ ಇದ್ದರೂ ನಾನು ಎಲ್ಲ ಅಕ್ರಮ ಬಂದ್ ಮಾಡಿಸಿದೆ.ನಾನು ಸಚಿವ ಆಗಿದ್ದಾಗ ಎಲ್ಲವೂ ಸಂಪೂರ್ಣ ಬಂದ್ ಆಗಿತ್ತು.
ಆದರೆ ಹೊಸ ಸರ್ಕಾರ ಬಂದು ಮತ್ತೊಬ್ಬರು ಸಚಿವರಾದರು.ಆಗ ಯಾರು ಅದನ್ನ ನಿಲ್ಲಿಸೋ ಕೆಲಸ ಮಾಡಿಲ್ಲ.ಈಗ ನನ್ನ ಕ್ಷೇತ್ರದಲ್ಲಿ ಅದನ್ನ ನಿಲ್ಲಿಸಿದ್ದೇನೆ, ಯಾವುದೇ ಅಕ್ರಮ ಇಲ್ಲ.ಉಳಿದಂತೆ ಬೇರೆ ಕಡೆ ಇದ್ದರೆ ಅದಕ್ಕೆ ನಾನು ಏನು ಮಾಡೋದು.
ನಾನು ಅಧಿಕಾರ ಇದ್ದಾಗ ಸಂಪೂರ್ಣ ಕೆಲಸ ಮಾಡಿದ್ದೇನೆ.ಹಿಂದಿನ ಉಸ್ತುವಾರಿ ಸಚಿವರು ಎಷ್ಟು ಬಾರಿ ಮಂಗಳೂರಿನಲ್ಲಿ ಸಭೆ ಮಾಡಿದ್ದಾರೆ.ಈಗಿನ ಸಚಿವರು ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಸಭೆ ಮಾಡ್ತಾರೆ.ಹಿಂದಿನ ಸಚಿವರು ಯಾರ ಕೈಗಾದ್ರೂ ಸಿಗ್ತಾ ಇದ್ರಾ? ಎಂದು ಹೇಳಿದರು.