ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಬೆಂಗಳೂರು ಕ್ಯಾಂಪಸ್ನ ವತಿಯಿಂದ ಮಾನ್ಸೂನ್ ಸ್ಕೂಲ್ [ಮುಂಗಾರು ಶಾಲಾ] ನ ಮೊದಲ ಆವೃತ್ತಿಯನ್ನು ಜೂನ್ 24 ರಿಂದ 29, 2024ರ ವರೆಗೆ ಆರುದಿನಗಳವರೆಗೆ ಮಣಿಪಾಲದಲ್ಲಿ ಆಯೋಜಿಸಲಾಗುತ್ತಿದೆ. ಪರಿಸರ, ಹವಾಮಾನ ಬದಲಾವಣೆ, ಪ್ರಕೃತಿ-ಸಂಸ್ಕೃತಿ ಸಂಬಂಧ ಮತ್ತು ವಿನ್ಯಾಸ ಮುಂತಾದ ಬಹು ವಿಷಯಗಳ ಕುರಿತ ಸವಾಲುಗಳ ವಿಷಯ ಕೇಂದ್ರಿತವಾಗಿ ಈ ಮಾನ್ಸೂನ್ ಸ್ಕೂಲ್ನ್ನು ಆಯೋಜಿಸಲಾಗುತ್ತಿದೆ. ಈ ವಿಶಿಷ್ಟ ಕಾರ್ಯಕ್ರಮವನ್ನು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಸೆಂಟರ್ ಫಾರ್ ದ್ವೀಪ ಮತ್ತು ಸೆಂಟರ್ ಫಾರ್ ಸದ್ಭಾವಗಳ ಸಹಭಾಗಿತ್ವದಲ್ಲಿ ಡಾ. ಟಿ. ಎಂ. ಎ. ಪೈ ದತ್ತಿ ಪೀಠದ ಡಾ. ದೀಪ್ತಾ ಸತೀಶ್ ಅವರು ಸಂಯೋಜಿಸುತ್ತಿದ್ದಾರೆ.
ಬಹುವಿಷಯಗಳ ವಿನ್ಯಾಸ ಪ್ರಯೋಗಾಲಯ [ಡಿಸೈನ್ ಲ್ಯಾಬ್] ವಾಗಿರುವ ಈ ಕಾರ್ಯಕ್ರಮವು ನೈರುತ್ಯ ಘಟ್ಟ ಪ್ರದೇಶ ಮತ್ತು ಕರಾವಳಿ ಕರ್ನಾಟಕಗಳ ನಡುವಿನ ಪರಿಸರ ಅಧ್ಯಯನದ ಮೇಲೆ ಕೇಂದ್ರೀಕೃತವಾಗಿದ್ದು ಈ ಭೂಪ್ರದೇಶವು ಪಾರಿಸರಿಕವಾಗಿ ಸೂಕ್ಷ್ಮ ಪ್ರದೇಶವಾಗಿದೆ. ಇದು ಮನುಷ್ಯ ಮತ್ತು ಮನುಷ್ಯೇತರ ಜೀವಿಗಳಿಗೆ ಆಶ್ರಯತಾಣವಾಗಿದ್ದು, ವಿಶಿಷ್ಟ ನೈಸರ್ಗಿಕ ಲಕ್ಷಣಗಳ ಮತ್ತು ಹವಾಮಾನದ ಪ್ರದೇಶವಾಗಿದೆ. ಅಲ್ಲದೆ, ನಗರೀಕರಣಕ್ಕೆ ಮತ್ತು ಅಸಹಜ ಅಭಿವೃದ್ಧಿಗೆ ತೀವ್ರವಾಗಿ ತುತ್ತಾಗುತ್ತಿದೆ. ಭಾರತದ ದಕ್ಷಿಣಭಾಗಕ್ಕೆ ಮಳೆ ಸುರಿಸುವ ನೈರುತ್ಯ ಮುಂಗಾರುವಿನಿಂದ ಈ ಭೂಭಾಗ ಪ್ರಭಾವಿತವಾಗಿದ್ದು, ಮುಂಗಾರುವಿನ ಅಧ್ಯಯನಕ್ಕೆ ಸೂಕ್ತವಾದ ಭೂಪ್ರದೇಶವಾಗಿದೆ.
ಪರಿಸರ ತಜ್ಞರು, ವಾಸ್ತುಶಿಲ್ಪಿಗಳು, ನಗರ ವಿನ್ಯಾಸಕಾರರು ಮತ್ತು ಯೋಜನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು, ತಂತ್ರಜ್ಞಾನಿಗಳು, ಭೂಪಟ ರೂಪಕರು, ಪತ್ರಿಕೋದ್ಯಮಿಗಳು, ಪರಿಸರ ಕುತೂಹಲಿಗಳು, ಪರಿಸರ ಸಂರಕ್ಷಣೆಯ ಕಾಳಜಿಯುಳ್ಳವರು, ಕಲಾವಿದರು, ಕರಕುಶಲಕಾರರು, ವಿನ್ಯಾಸಕರು, ಭೂಗೋಳ ತಜ್ಞರು, ಪುರಾತತ್ವಶಾಸ್ತ್ರಜ್ಞರು, ಚಾರಣಿಗರು, ಮಾನವಶಾಸ್ತ್ರಜ್ಞರು, ಕಲಾವಿದರು, ಬರಹಗಾರರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಈ ‘ಮುಂಗಾರು ಶಾಲಾ’ [ಮಾನ್ಸೂನ್ ಸ್ಕೂಲ್]ನಲ್ಲಿ ಭಾಗವಹಿಸಬಹುದಾಗಿದೆ.
ಅಭಿವೃದ್ಧಿ ಮತ್ತು ಸಂರಕ್ಷಣೆ, ಸಮುದಾಯಗಳು ಮತ್ತು ಜೀವನವಿಧಾನ, ಹವಾಮಾನ ಬದಲಾವಣೆ ಮತ್ತು ಅಳವಡಿಕೆಗಳು, ಸಾಂಪ್ರದಾಯಿಕ ಜ್ಞಾನ ಮತ್ತು ಸ್ಥಳೀಯ ಸಾಂಸ್ಕೃತಿಕ ಆಚರಣೆಗಳು ಹೀಗೆ ಬಹುವಿಷಯಗಳನ್ನು ಈ ಮಾನ್ಸೂನ್ ಸ್ಕೂಲ್ ಕಾರ್ಯಕ್ರಮವು ಒಳಗೊಳ್ಳಲಿದೆ. ಇದರಲ್ಲಿ ಭಾಗವಹಿಸಲು ಪ್ರಾಯದ, ಅನುಭವದ ಮಿತಿಯಿಲ್ಲ. ಯಾವ ಕ್ಷೇತ್ರದ ಮತ್ತು ಜ್ಞಾನದ ಹಿನ್ನೆಲೆಯವರು ಎಂಬುದನ್ನು ಆಯ್ಕೆಯಲ್ಲಿ ಪರಿಗಣಿಸಲಾಗುತ್ತದೆ.
ಜೂನ್ 3, 2024 ನೋಂದಣಿಗೆ ಕೊನೆಯ ದಿನವಾಗಿರುತ್ತದೆ. ಮಿತ ಅವಕಾಶಗಳು ಉಳಿದಿವೆ. ಯಾವುದೇ ನೋಂದಣಿ ಶುಲ್ಕವಿಲ್ಲ. ಆದರೆ, ಎಲ್ಲ ಆರುದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗುತ್ತದೆ.
ಹೆಚ್ಚಿನ ವಿವರಗಳಿಗೆ : dweepa.maheblr@manipal.edu