ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಮೇ 31 ಸಂಸ್ಥೆಯ ಆವರಣದಲ್ಲಿ ‘ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್‘‘ ಅನ್ನು ಹಮ್ಮಿಕೊಂಡಿದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ಕೊಗ್ಗಾ ಭಾಸ್ಕರ್ ಕಾಮತ್ ಮತ್ತು ತಂಡದಿಂದ ಯಕ್ಷಗಾನ ಬೊಂಬೆ ಪ್ರದರ್ಶನವು ಈ ಕಾರ್ಯಕ್ರಮದ ಆಕರ್ಷಣೆಗಳಲ್ಲಿ ಒಂದಾಗಿರಲಿದೆ. ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್ನ ಎರಡನೇ ಆವೃತ್ತಿಯನ್ನು ಎಂ.ಎ (ಎರಡನೇ ವರ್ಷ) ವಿದ್ಯಾರ್ಥಿಗಳು ಈವೆಂಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ತಮ್ಮ ಅಧ್ಯಯನದ ಭಾಗವಾಗಿ ಆಯೋಜಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಂಪನ್ಮೂಲ ವ್ಯಕ್ತಿಗಳ ಮಾಹಿತಿ
ಕಾರ್ತಿಕ್ ವೆಂಕಟೇಶ್ – ಸಂಪಾದಕರು, ಪೆಂಗ್ವಿನ್ ಇಂಡಿಯಾ,ಮೊಹಮ್ಮದ್ ಇಸ್ಮಾಯಿಲ್ – ಉಪಾಧ್ಯಕ್ಷರು, ಜಿಯೋ ಸಿನಿಮಾ,ರಿತ್ವಿಕ್ ಕಾಯ್ಕಿಣಿ – ಸಂಗೀತ ಸಂಯೋಜಕರು,ಮಮತಾ ರೈ – ಸಂಸ್ಥಾಪಕ ಅಧ್ಯಕ್ಷರು, ಕೇದಿಕೆ ಟ್ರಸ್ಟ್,ಚಂಡೆ ಮತ್ತು ಪಿಟೀಲು ಜುಗಲ್ಬಂದಿ – ಶ್ರೀ ಗುರು ಚಂಡೆ ಸೆಟ್ ಮತ್ತು ಆದ್ಯಾ ವಿಜಯನ್, ಮಂಗಳೂರು,ಭಾಸ್ಕರ್ ಕೊಗ್ಗಾ ಕಾಮತ್ ಅವರಿಂದ ಯಕ್ಷಗಾನ ಬೊಂಬೆ ಪ್ರದರ್ಶನ. (ಚೂಡಾಮಣಿ ಲಂಕಾ ದಹನ),ವಿನ್ಯಾಸ ಹ್ಯಾಂಡ್ಲೂಮ್ಸ್, ಶಿವಮೊಗ್ಗ – ಇವರ ಸಹಯೋಗದೊಂದಿಗೆ ಕಾರ್ಯಕ್ರಮದಲ್ಲಿ ಕೈಮಗ್ಗ ಸೀರೆಗಳು, ವಸ್ತುಗಳು ಮತ್ತು ರೆಡಿಮೇಡ್ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.
ಸಂಪನ್ಮೂಲ ವ್ಯಕ್ತಿಗಳನ್ನು ಕುರಿತು:
ಕಾರ್ತಿಕ್ ವೆಂಕಟೇಶ್, ಸಂಪಾದಕರು, ಪೆಂಗ್ವಿನ್ ಇಂಡಿಯಾ:
ಬೆಂಗಳೂರಿನವರಾದ ಕಾರ್ತಿಕ್ ವೆಂಕಟೇಶ್ ಅವರು ಪೆಂಗ್ವಿನ್ ರಾಂಡಮ್ ಹೌಸ್ನ ಕಾರ್ಯಕಾರಿ ಸಂಪಾದಕರು. ಅವರು ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಪಂಜಾಬಿ ಸೇರಿದಂತೆ ಹಲವು ಭಾಷೆಗಳು ಮತ್ತು ವೈವಿಧ್ಯಮಯ ವಿಷಯಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಅವರು ಒಬ್ಬ ಲೇಖಕರೂ ಹೌದು, ಮಿಂಟ್ ಲಾಂಜ್, ದಿ ಹಿಂದೂ, ಫಸ್ಟ್ ಪೋಸ್ಟ್, ಡೆಕ್ಕನ್ ಹೆರಾಲ್ಡ್ ಮತ್ತು ಮದ್ರಾಸ್ ಕೊರಿಯರ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ತಮ್ಮ ಬರೆಹಗಳನ್ನು ಪ್ರಕಟಿಸಿದ್ದಾರೆ.
ಕಾರ್ತಿಕ್ ವೆಂಕಟೇಶ್ ಅವರು ತಮ್ಮ ಇತ್ತೀಚಿನ ಪುಸ್ತಕ “10 ಇಂಡಿಯನ್ ಲ್ಯಾಂಗ್ವೇಜಸ್ ಅಂಡ್ ಹೌ ದೇ ಕೇಮ್ ಟು ಬಿ” (ಹತ್ತು ಭಾರತೀಯ ಭಾಷೆಗಳು ಮತ್ತು ಅವು ಹೇಗೆ ಉದ್ಭವಿಸಿದವು) ಎಂಬ ಪುಸ್ತಕದಲ್ಲಿ ಹತ್ತು ಭಾಷೆಗಳ ದೀರ್ಘ ಮತ್ತು ವೈವಿಧ್ಯಮಯ ಯಾನಗಳನ್ನು ಕಾಲಾನುಕ್ರಮದಲ್ಲಿ ದಾಖಲಿಸಿದ್ದಾರೆ. ಸಾಂಸ್ಕೃತಿಕ ಬದಲಾವಣೆಗಳು ಮತ್ತು ರಾಜಕೀಯ ಹಾಗೂ ಸಾಮಾಜಿಕ ಪ್ರಭಾವಗಳು ಈ ಭಾಷೆಗಳನ್ನು ಹೇಗೆ ರೂಪಿಸಿವೆ ಎಂಬುದನ್ನು ಪರಿಶೀಲಿಸಿ ವಿಶ್ಲೇಷಿಸಿದ್ದಾರೆ. ಅವರು ಈ ಹತ್ತು ಭಾರತೀಯ ಭಾಷೆಗಳ ಸಾಹಿತ್ಯದ ಒಂದು ಕಿರುನೋಟವನ್ನು ಒದಗಿಸುತ್ತಾರೆ. ಲಿಪಿಗಳ ಬೆಳವಣಿಗೆಯನ್ನು ಪತ್ತೆಹಚ್ಚಿ ಈ ಹತ್ತು ಭಾಷೆಗಳನ್ನು ಸಂರಕ್ಷಿಸಿದ ಮತ್ತು ಪುನರುಜ್ಜೀವಗೊಳಿಸಿದ ಐತಿಹಾಸಿಕ ಕ್ಷಣಗಳನ್ನು ಗುರುತಿಸುತ್ತಾರೆ.
ಮೊಹಮ್ಮದ್ ಇಸ್ಮಾಯಿಲ್, ಸಹ ಉಪಾಧ್ಯಕ್ಷರು, ಜಿಯೊ ಸಿನೆಮಾ:
ಮಹಮದ್ ಇಸ್ಮಾಯಿಲ್ ಅವರು ಜಿಯೋ ಸಿನೆಮಾದ ಸಹ ಉಪಾಧ್ಯಕ್ಷರಾಗಿ ಏಪ್ರಿಲ್ 2019ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಯೋ ಸಿನೆಮಾಗೆ ಸೇರುವ ಮೊದಲು, ಇಸ್ಮಾಯಿಲ್ ಅವರು ಪ್ರಮುಖ ಕನ್ನಡ ದೈನಂದಿನ ಪತ್ರಿಕೆ ‘ಪ್ರಜಾವಾಣಿ’’ಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಅವರು ಒಂದು ದಶಕದ ಕಾಲ ಡಿಜಿಟಲ್ ತಂಡವನ್ನು ಮುನ್ನಡೆಸಿದ್ದರು. ಅವರ ವೃತ್ತಿಜೀವನವು ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನಲ್ಲಿ ಕನ್ನಡದ ದೈನಂದಿನ ‘ಉದಯವಾಣಿ’ ಪತ್ರಿಕೆಯ ಮುಖ್ಯ ಉಪ ಸಂಪಾದಕರಾಗಿ ಪ್ರಾರಂಭವಾಯಿತು. ಡಿಜಿಟಲ್ ಸ್ಟ್ರ್ಯಾಟಜಿ, ಸಂಪಾದಕೀಯ ನಿರ್ವಹಣೆ ಮತ್ತು ಮೀಡಿಯಾ ನಾವೀನ್ಯತೆ ಇಸ್ಮಾಯಿಲ್ ಅವರ ಪರಿಣಿತಿಯಾಗಿದೆ.
ರಿತ್ವಿಕ್ ಕಾಯ್ಕಿಣಿ- ಸಂಗೀತ ಸಂಯೋಜಕರು:
ರಿತ್ವಿಕ್ ಕಾಯ್ಕಿಣಿ ಅವರು ಉಪನ್ಯಾಸಕರಾಗಿ, ಕಲೆ-ವಿಜ್ಞಾನ ಸಂಶೋಧಕರಾಗಿ, ಲೇಖಕರಾಗಿ ಮತ್ತು ಸಂಗೀತಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು 2018ರಲ್ಲಿ ಡಲ್ಲಾಸ್ನಲ್ಲಿರುವ ಯೂನಿವರ್ಸಿಟಿ ಆಫ್ ಟೆಕ್ಸಾಸ್ ನಿಂದ ಕಲೆ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ವಿಜ್ಞಾನ ಸಂವಹನ, ಧ್ವನಿಯ ತತ್ವಶಾಸ್ತ್ರ ಮತ್ತು ಸೋನಿಫಿಕೇಶನ್ದಲ್ಲಿ ಪರಿಣಿತಿ ಹೊಂದಿ ಪಡೆದಿದ್ದಾರೆ. ಅವರ ‘ಮೈಕ್ರೋ ಲಕ್ಸ್ ಚಾಂಟ್ಸ್’ ಯೋಜನೆಯು 2018ರಲ್ಲಿ ATEC ವಿಭಾಗದಲ್ಲಿ ಶ್ರೇಷ್ಠ ಮಹಾಪ್ರಬಂಧ ಪ್ರಶಸ್ತಿಯನ್ನು ಗೆದ್ದಿದೆ.
ಕವಿತೆ, ಸಂಗೀತ, ಧ್ವನಿ ಮತ್ತು ಭಾಷೆಯ ಸಂಪರ್ಕಗಳಲ್ಲಿ ರಿತ್ವಿಕ್ ಅವರು ಧ್ವನಿ ಕಲೆಯನ್ನು ಅಭ್ಯಾಸ ಮಾಡುತ್ತಾರೆ. ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು ಸ್ಪೇಷಿಯಲ್ ಆಡಿಯೊ ಬಳಸಿ ಆಪ್ತ ಅನುಭವಗಳನ್ನು ಸೃಷ್ಟಿಸಲು ಅವರು ಇಷ್ಟಪಡುತ್ತಾರೆ. ಸದ್ಯದಲ್ಲೇ ತೆರೆಕಾಣಲಿರುವ ಕನ್ನಡ ಚಲನಚಿತ್ರ ‘ಕೆಂಡ’ ಮತ್ತು ದುನಿಯಾ ಸೂರಿ ಅವರ ಕಲ್ಟ್ ಚಲನಚಿತ್ರ ‘ಪಾಪ್ಕಾರ್ನ್ ಮಂಕಿ ಟೈಗರ್’ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಮತಾ ರೈ – ಉಡುಪಿ ಸೀರೆಗಳ ಪುನರುಜ್ಜೀವನ:
ಮಮತಾ ರೈ ಅವರು ಕೇದಿಕೆ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರು. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಈಗ ಅವರು ಪೂರ್ಣ ಪ್ರಮಾಣವಾಗಿ ಟ್ರಸ್ಟ್ ನಿರ್ವಹಣೆ ಮಾಡುತ್ತಿದ್ದಾರೆ.
ಕೇದಿಕೆ ಟ್ರಸ್ಟ್ನ ಉದ್ದೇಶಗಳು ಸುಸ್ಥಿರ ಗ್ರಾಮೀಣ ಜೀವನೋಪಾಯಗಳನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಜ್ಞಾನವನ್ನು ದಾಖಲಿಸುವುದಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿರುವ ಉಡುಪಿ ಸೀರೆ ಎಂದು ಕರೆಯಲ್ಪಡುವ ಸ್ಥಳೀಯ GI ಟ್ಯಾಗ್ ಹೊಂದಿರುವ ನೇಕಾರಿಕೆಯನ್ನು ಪುನರುಜ್ಜೀವನಗೊಳಿಸಲು 2018 ರಲ್ಲಿ ಕೇದಿಕೆ ಟ್ರಸ್ಟ್ “ಉಡುಪಿ ಸೀರೆ ಪುನರುಜ್ಜೀವನ” ಯೋಜನೆಯನ್ನು ಪ್ರಾರಂಭಿಸಿತು. ಮಮತಾ ರೈ ಅವರ ಸತತ ಪ್ರಯತ್ನ ಮತ್ತು ಮಾರ್ಗದರ್ಶನದಲ್ಲಿ ಉಡುಪಿ ಸೀರೆಯ ನೇಕಾರಿಕೆ ನಾಶವಾಗುವುದು ತಪ್ಪಿದೆ ಎಂದೇ ಹೇಳಬಹುದು.
ಮಮತಾ ಅವರು ಸೇವಿಸಬಹುದಾದ ಬೇರುಕಾಳುಗಳು ಮುಂತಾದ ಹವಾಮಾನ-ಸಹಿಷ್ಣು ಗಿಡಗಳನ್ನು ಬೆಳೆಸುವಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಸರಳ ಮತ್ತು ಪರಿಸರ ಸ್ನೇಹಿ ಜೀವನ, ತೋಟಗಾರಿಕೆ, ಮನೆಯಲ್ಲಿ ಆಹಾರ ತಯಾರಿಸುವುದು ಮತ್ತು ಕೈಯಿಂದ ಮಾಡಿದ ವಸ್ತುಗಳನ್ನು ಬಳಸುವಂತೆ ಹಲವರನ್ನು ಪ್ರೇರೇಪಿಸಿದ್ದಾರೆ.
ಮಮತಾ ರೈ ಅವರಿಗೆ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು 2021 ರ ‘ಡೆಕ್ಕನ್ ಹೆರಾಲ್ಡ್ ಚೇಂಜ್ಮೇಕರ್ಸ್’ ಪ್ರಶಸ್ತಿಯನ್ನು ಇತರ 20 ಸಾಧಕರರೊಂದಿಗೆ ನೀಡಿದೆ. ಜೊತೆಗೆ, ಕೆನಡಾದ ಕೇಪ್ ಬ್ರೆಟನ್ ದ್ವೀಪದ ಮೇಮೀಸ್ ಸ್ಕೂಲ್ ಹೌಸ್ ನೀಡುವ ಗಿಲ್ಡೆಡ್ ನೈಸರ್ಗಿಕ ಡೈ ಶಿಕ್ಷಣಕ್ಕಾಗಿ ಮೊದಲ ಅಂತರರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಮಮತಾ ಅವರು ಪಡೆದಿದ್ದಾರೆ.
ಭಾಸ್ಕರ್ ಕೊಗ್ಗಾ ಕಾಮತ್ – ಯಕ್ಷಗಾನ ಬೊಂಬೆ ಕಲಾವಿದರು:
ಭಾಸ್ಕರ್ ಕೊಗ್ಗಾ ಕಾಮತ್ ಅವರು ಆರನೇ ತಲೆಮಾರಿನ ಯಕ್ಷಗಾನ ಬೊಂಬೆ ಕಲಾವಿದರು. ಕರಾವಳಿ ಕರ್ನಾಟಕದ ಉಪ್ಪಿನಕುದುರು ಯಕ್ಷಗಾನ ಗೊಂಬೆಯಾಟ ಜಾನಪದ ಕಲಾ ರೂಪದ ಯುವ ಪ್ರತಿನಿಧಿಯಾಗಿದ್ದಾರೆ. ಕಾಮತ್ ತಮ್ಮ ನಿರೂಪಣೆಯನ್ನು ಕೇವಲ ಮಹಾಕಾವ್ಯ ಕಥೆಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ. ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವಂತೆ, ಅರಣ್ಯನಾಶ, ಹವಾಮಾನ ಬದಲಾವಣೆ, ನಮ್ಮ ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆಯಂತಹ ಪ್ರಚಲಿತ ಸಮಸ್ಯೆಗಳನ್ನು ಜನರಿಗೆ ಮನನ ಮಾಡಲು ತಮ್ಮ ಗೊಂಬೆಗಳನ್ನು ಬಳಸುತ್ತಾರೆ.
ಕಾಮತ್ ಅವರು ಬಳಸುವ ಮರದ ಗೊಂಬೆಗಳು ಸುಮಾರು 18 ಇಂಚು ಎತ್ತರ ಇರುತ್ತವೆ. ಅವರ ಉಡುಪುಗಳು ಯಕ್ಷಗಾನ ಬಯಲಾಟದ ಪಾತ್ರಗಳು ಧರಿಸುವಂತೆಯೇ ಇರುತ್ತವೆ, ಅದೇ ರೀತಿಯಾದ ವಿಸ್ತ್ರತ ರೂಪವಿನ್ಯಾಸ, ಎತ್ತರದ ಮತ್ತು ವರ್ಣರಂಜಿತ ತಲೆಕವಚ ಮತ್ತು ಭಾರವಾದ ಆಭರಣಗಳು, ಮುಖವಾಡಗಳು, ಬೊಂಬೆಗಳು ಮತ್ತು ರಂಗಭೂಮಿಯನ್ನು ಕಾಮತ್ ತನ್ನ ತಂಡದ ಭಾಗವಾಗಿರುವ ಸುಮಾರು ಒಂದು ಡಜನ್ ಸಹಾಯಕರ ಸಹಾಯದಿಂದ ವಿನ್ಯಾಸಗೊಳಿಸಿದ್ದಾರೆ. ಅವರು ವಿಭಿನ್ನ ಪ್ರೇಕ್ಷಕರಿಗೆ ತಲುಪುವಂತೆ ಕೊಂಕಣಿ ಮತ್ತು ಹಿಂದಿಯಲ್ಲಿ ಬೊಂಬೆ ಪ್ರಾಣಿಗಳು ಮತ್ತು ಹಕ್ಕಿಗಳನ್ನು, ರಂಗಸಜ್ಜಿಕೆಯಲ್ಲಿ ಹೊಸ ತಂತ್ರಗಳು, ಹೊಸ ಬೆಳಕು ಮತ್ತು ತಂತ್ರಗಳು, ಹಾಡುಗಳು ಹಾಗೂ ನಿರೂಪಣೆಗಳನ್ನು ಪರಿಚಯಿಸಿದ್ದಾರೆ.
ಕಾಮತ್ ಅವರು ಲಾಭದಾಯಕ ಬ್ಯಾಂಕ್ ಕೆಲಸವನ್ನು ನಿರಾಕರಿಸಿ ತಮ್ಮ ಪೂರ್ವಜರ ಈ ಪ್ರಾಚೀನ ಜಾನಪದ ಕಲಾ ರೂಪವನ್ನು ಉಳಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. ಅವರು ಪ್ರಸ್ತುತ ಉಪ್ಪಿನಕುದ್ರುವಿನಲ್ಲಿ ಶಾಶ್ವತವಾಗಿ ಯಕ್ಷಗಾನ ಬೊಂಬೆ ಅಕಾಡೆಮಿ ಮತ್ತು ಸ್ಮಾರಕ ಮಂದಿರವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಶ್ರೀ ಗುರು ಚೆಂಡೆ ಸೆಟ್ ಮತ್ತು ಆದ್ಯಾ ವಿಜಯನ್, ಮಂಗಳೂರು: ಚಂಡೆ ಮತ್ತು ಪಿಟೀಲು ಜುಗಲ್ಬಂದಿ:
ಮಂಗಳೂರಿನ ಶ್ರೀ ಗುರು ಚೆಂಡೆ ಸೆಟ್ ತಂಡವು ಚಂಡೆ ವಾದನ ಕಲೆಯಲ್ಲಿ ಅದ್ಭುತ ಕೌಶಲ್ಯಕ್ಕೆ ಹೆಸರುವಾಸಿಯಾಗಿದೆ. ಯಕ್ಷಗಾನದ ಅವಿಭಾಜ್ಯ ಅಂಗವಾಗಿರುವ, ಒಂದು ಸಾಂಪ್ರದಾಯಿಕ ತಾಳವಾದ್ಯ ಉಪಕರಣವಾದ ಚೆಂಡೆಯನ್ನು ವಾದನಮಾಡುವ ಅದ್ಭುತ ಕೌಶಲ್ಯಕ್ಕೆ ಈ ತಂಡದ ಕಲಾವಿದರು ಪ್ರಸಿದ್ಧರಾಗಿದ್ದಾರೆ.
ತಮ್ಮ ಮೈನವಿರೇಳಿಸುವ ಪ್ರದರ್ಶನಗಳಿಗೆ ಹೆಸರುವಾಸಿಯಾಗಿರುವ ಈ ಗುಂಪು, ತಾಳ ಮತ್ತು ತಂತ್ರಜ್ಞಾನದಲ್ಲಿನ ತಮ್ಮ ಪರಿಣಿತಿಯ ಮೂಲಕ ಈ ಸಾಂಸ್ಕೃತಿಕ ಕಲಾ ರೂಪವನ್ನು ಸಂರಕ್ಷಿಸಿ, ಉತ್ತೇಜಿಸುತ್ತದೆ. ಶ್ರೀ ಗುರು ಚೆಂಡೆ ಸೆಟ್ ತನ್ನ ಪ್ರಬಲ, ಪ್ರತಿಧ್ವನಿಸುವ ಚೆಂಡೆ ಬಡಿತಗಳಿಂದ ಪ್ರೇಕ್ಷಕರನ್ನು ಮೋಡಿ ಮಾಡುವ ಸಾಮರ್ಥ್ಯಕ್ಕಾಗಿ ಮೆಚ್ಚುಗೆ ಗಳಿಸಿದೆ. ಇದು ಕರಾವಳಿ ಕರ್ನಾಟಕ ಪ್ರದೇಶದ ಸಂಸ್ಕೃತಿ, ಪರಂಪರೆ ಮತ್ತು ಕಲಾತ್ಮಕ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮುಖ್ಯಸ್ಥ ಪ್ರೊ.ರವಿರಾಜ್, ವಿದ್ಯಾರ್ಥಿ ಸಂಯೋಜಕರಾದ ಅಸ್ಮಿತಾ ವಿ., ಅನುಪಮಾ ರತೀಶ್, ಜೂಡಿ ಶರೀನ್ ಫೇಬರ್ ಭಾಗವಹಿಸಿದ್ದರು.