ಬೆಂಗಳೂರು: ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಬಳಿ ಶುಕ್ರವಾರ ಮುಂಜಾನೆ ಕಾರೊಂದು ಸೇತುವೆಯಿಂದ ಬಿದ್ದು ಸರ್ವಿಸ್ ರಸ್ತೆಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು 45 ವರ್ಷದ ಸುರೇಶ್, 22 ವರ್ಷದ ಈಶ್ವರ್ಯ, 7 ವರ್ಷದ ಚೇತನಾ ಮತ್ತು 28 ವರ್ಷದ ಪ್ರಮೀಳಾ ಎಂದು ಗುರುತಿಸಲಾಗಿದೆ.
ಬಲಿಯಾದವರು ಹಾವೇರಿ ನಗರದ ಅಶ್ವಿನಿ ನಗರದ ನಿವಾಸಿಗಳಾಗಿದ್ದು, ತೀರ್ಥಯಾತ್ರೆಗೆ ತಿರುಪತಿಗೆ ತೆರಳುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 48ರ ಹಲಗೇರಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ.
ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಮೀಳಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚನ್ನವೀರಪ್ಪ ಜಾಡಿ, ಸಾವಿತ್ರ ಜಾಡಿ, ವಿಕಾಸ ಬಾರ್ಕಿ, ಪ್ರಭುರಾಜ ಸಮಗಂಡಿ, ಗೀತಾ ಬಾರ್ಕಿ, ಹೊನ್ನಪ್ಪ ಬಾರ್ಕಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ರಾಣೆಬೆನ್ನೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘಟನೆಯಿಂದ ದುಃಖಿತನಾಗಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ. “ಗಾಯಗೊಂಡ ವ್ಯಕ್ತಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮೃತರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.