ಮಂಗಳೂರು : ನಗರದ ಆಟೋ ರಿಕ್ಷಾ ಚಾಲಕರೊಬ್ಬರು ಪಣಂಬೂರ್ ಬೀಚ್ ಗೆ ಪ್ರಯಾಣಿಕರನ್ನು ಡ್ರಾಪ್ ಮಾಡಿ ಅಲ್ಲಿ ರಿಕ್ಷಾ ನಿಲ್ಲಿಸಿದಕ್ಕೆ ಸ್ಥಳೀಯ ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಹಲ್ಲಗೊಳಗಾದ ರಿಕ್ಷಾ ಚಾಲಕ ವೆನ್ಲಾಕ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆಂದು ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.
ಮಾರಕಾಸ್ತ್ರದಿಂದ ಇರಿತಕ್ಕೆ ಒಳಗಾದವರನ್ನು ಮಂಗಳೂರು ಬಂದರ್ ನಿವಾಸಿ ಅರಾಫತ್ (30) ಎಂದು ಗುರುತಿಸಲಾಗಿದೆ. ಅರಾಫತ್ ಮಂಗಳೂರು ನಗರ ವಲಯದ ರಿಕ್ಷಾ ಚಾಲಕರಾಗಿದ್ದು, ನಗರದಿಂದ ಪಣಂಬೂರಿಗೆ ಬಾಡಿಗೆ ಹೋಗಿ ಪ್ರಯಾಣಿಕರನ್ನು ಬಿಟ್ಟು ಪಣಂಬೂರು ಬೀಚ್ ಬಳಿಯ ಪಾರ್ಕ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅದೇ ರಿಕ್ಷಾ ಪಾರ್ಕ್ನಲ್ಲಿ ಬಾಡಿಗೆ ಮಾಡುತ್ತಿದ್ದ ನಾಲ್ವರು ರಿಕ್ಷಾ ಚಾಲಕರು “ಮಂಗಳೂರು ನಗರದ ರಿಕ್ಷಾ ಚಾಲಕರು ಇಲ್ಲಿ ಬಾಡಿಗೆ ಮಾಡಬಾರದೆಂದು ಆಕ್ಷೇಪಿಸಿ ಮಾರಕಾಸ್ತ್ರದಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಅರಾಫತ್ ಕೈಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ನಡುವೆ ರಿಕ್ಷಾ ಚಾಲಕನ ಮೇಲೆ ಹಲ್ಲೆ ಖಂಡಿಸಿ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು. ಮುಂದೆ ಇದೇ ರೀತಿಯ ಹಲ್ಲೆ ನಡೆದರೆ ಉಗ್ರ ಹೋರಾಟ ನಡೆಸುವುದಾಗಿ ರಿಕ್ಷಾ ಚಾಲಕರು ಎಚ್ಚರಿಸಿದ್ದಾರೆ.
ಪಣಂಬೂರು ಬೀಚ್ ನಲ್ಲಿರುವ ಪಾರ್ಕ್ ನಲ್ಲಿ ಮಂಗಳೂರು ನಗರದ ರಿಕ್ಷಾಗಳು ಬಂದರೆ ಈ ಹಿಂದೆಯೂ ಇದೇ ರೀತಿಯ ಹಲ್ಲೆ ಮಾಡುವ ಕೆಲಸ ನಡೆದಿದ್ದು, ಪೊಲೀಸ್ ದೂರು ನೀಡಿದ ಯಾವುದೇ ಪ್ರಯೋಜನವಾಗಿಲ್ಲ ಎಂದ ಅವರು, ಪಣಂಬೂರು ಬೀಚ್ ರಿಕ್ಷಾ ಪಾರ್ಕನಲ್ಲಿರುವ ಕೆಲವು ಚಾಲಕರು ಗೂಂಡಾಗಿರಿ ತೋರಿಸುತ್ತಿದ್ದಾರೆ ಎಂದು ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಗೂಂಡಾಗಿರಿ ನಡೆಸಿದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.