ಬೆಂಗಳೂರು: ಭಾರತದ ಮುಂಚೂಣಿಯಲ್ಲಿರುವ ಆಟೋಮೋಬೈಲ್ ಕಂಪನಿ ಟಾಟಾ ಮೋಟರ್ಸ್ ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (IPR)ನಲ್ಲಿ ಮತ್ತೊಂದು ಮಹತ್ವದ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 2024 ನೇ ಹಣಕಾಸು ಸಾಲಿನಲ್ಲಿ ಸಂಸ್ಥೆಯು ದಾಖಲೆಯ 222 ಪೇಟೆಂಟ್ ಗಳು ಮತ್ತು 117 ಡಿಸೈನ್ ಅರ್ಜಿಗಳನ್ನು ಸಲ್ಲಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತ್ಯಧಿಕ ಎನಿಸಿದೆ. ಹೊಸ ಹೊಸ ಉತ್ಪನ್ನಗಳು, ಪ್ರಕ್ರಿಯೆ ನಾವೀನ್ಯತೆಗಳು, ಕನೆಕ್ಟಿವಿಟಿ, ಎಲೆಕ್ಟ್ರಿಫಿಕೇಶನ್, ಸಸ್ಟೇನೇಬಿಲಿಟಿ ಅಂಡ್ ಸೇಫ್ಟಿ (CESS)ಯಂತಹ ಪ್ರಮುಖ ಆಟೋಮೋಟಿವ್ ಟ್ರೆಂಡ್ ಗಳಲ್ಲಿನ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತಾದ ವಿಸ್ತಾರವಾದ ಕ್ಷೇತ್ರಗಳಲ್ಲಿ ಆವಿಷ್ಕಾರ ತರುವ ನಿಟ್ಟಿನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಲ್ಲದೇ, ಪವರ್ ಟ್ರೇನ್, ಬಾಡಿ & ಟ್ರಿಮ್, ಸಸ್ಪೆನ್ಷನ್, ಬ್ರೇಕ್ಸ್, HVAC ಮತ್ತು ಮಾಲಿನ್ಯ ನಿಯಂತ್ರಣ ಸೇರಿದಂತೆ ವಿವಿಧ ವಾಹನ ಸಿಸ್ಟಂಗಳನ್ನೂ ಈ ಅರ್ಜಿಗಳು ಒಳಗೊಂಡಿವೆ. ಇದೇ ವೇಳೆ ಟಾಟಾ ಮೋಟರ್ಸ್ ದಾಖಲೆಯ ಅತ್ಯಧಿಕ 333 ಪೇಟೆಂಟ್ ಗಳಿಗೆ ಅನುಮೋದನೆ ಪಡೆದುಕೊಂಡಿರುವುದು ಹೆಗ್ಗಳಿಕೆಯಾಗಿದೆ. ಈ ಮೂಲಕ ಟಾಟಾ ಮೋಟರ್ಸ್ ಇಲ್ಲಿವರೆಗೆ ಒಟ್ಟು 850 ಕ್ಕೂ ಹೆಚ್ಚು ಪೇಟೆಂಟ್ ಗಳಿಗೆ ಅನುಮೋದನೆ ಪಡೆದಂತಾಗಿದೆ.
ಇದು ಎಂಜಿನಿಯರಿಂಗ್ ಪರಿಣತಿ, ಕ್ಲೀನ್ ಪವರ್ಟ್ರೇನ್ಗಳು, ವಿನ್ಯಾಸ ಸಂಪರ್ಕ ಮತ್ತು ಸ್ಮಾರ್ಟ್ ಸುರಕ್ಷತೆ ವೈಶಿಷ್ಟ್ಯಗಳಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಮೂಲಕ ನೈಜ-ವಿಶ್ವದ ಅಗತ್ಯತೆಗಳಿಗೆ ಅನುಗುಣವಾಗಿ ನಾವೀನ್ಯತೆಗಳನ್ನು ಅಳವಡಿಕೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಹಕರ ಹಿತರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಟಾಟಾ ಮೋಟರ್ಸ್, ಇದಕ್ಕೆ ಪೂರಕವಾಗಿ ಉದ್ದೇಶಿತ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ. ಇದರ ಪರಿಣಾಮ ಕಂಪನಿಯು ಕಾರ್ಯದಕ್ಷತೆ, ಹಸಿರು ಮತ್ತು ಸುರಕ್ಷಿತ ವಾಹನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ಮೂಲಕ ಬಳಕೆದಾರರು ಮತ್ತು ಉದ್ಯಮದ ಪರಿವರ್ತನೆಗೆ ಪ್ರಯೋಜನವಾಗುವಂತೆ ಕಾರ್ಯನಿರ್ವಹಿಸುತ್ತಿದೆ. 2024 ನೇ ಹಣಕಾಸು ಸಾಲಿನಲ್ಲಿ ಟಾಟಾ ಮೋಟರ್ಸ್ ತನ್ನ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (IPR) ಪರಿಣತಿಗಾಗಿ ಐದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಾಗೂ ಜಾಗತಿಕ ಮಾನ್ಯತೆಯನ್ನು ಗಳಿಸಿದೆ.
ಈ ಮೈಲಿಗಲ್ಲು ಸ್ಥಾಪನೆ ಮಾಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಟಾಟಾ ಮೋಟರ್ಸ್ ನ ಅಧ್ಯಕ್ಷ & ಚೀಫ್ ಟೆಕ್ನಾಲಾಜಿ ಆಫೀಸರ್ ರಾಜೇಂದ್ರ ಪೇಟ್ಕರ್ ಅವರು, “ಸಂಶೋಧನೆ ಮತ್ತು ನಾವೀನ್ಯತೆಗೆ ಟಾಟಾ ಮೋಟರ್ಸ್ ನ ಅಚಲ ಬದ್ಧತೆಯು ಬೌದ್ಧಿಕ ಆಸ್ತಿಯ ಮೂಲಕ ನಾವೀನ್ಯತೆ ಮತ್ತು ಮೌಲ್ಯ ಸೃಷ್ಟಿಯಲ್ಲಿ ಹೊಸ ಎತ್ತರಕ್ಕೆ ನಮ್ಮನ್ನು ಮುನ್ನಡೆಸಿದೆ. ದಾಖಲೆ ಸಂಖ್ಯೆಯ ಪೇಟೆಂಟ್ ಗಳನ್ನು ಸಲ್ಲಿಸಿ ಮತ್ತು ಮಂಜೂರು ಪಡೆಯುವುದರೊಂದಿಗೆ ನಾವು ಆಟೋಮೋಟಿವ್ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನಗಳು, ಹಸಿರು ವಾಹನಗಳು ಮತ್ತು ಗ್ರಾಹಕ ಕೇಂದ್ರಿತ ವಿಧಾನವು ನಮ್ಮನ್ನು ಉದ್ಯಮದಲ್ಲಿ ಮುಂಚೂಣಿಯಲ್ಲಿರಿಸಿದೆ. ಚಲನಶೀಲತೆ ವಿಕಸನಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್ ಮುಂಚೂಣಿಯಲ್ಲಿದೆ. ಈ ಮೂಲಕ ಎಲ್ಲರಿಗೂ ಸ್ಮಾರ್ಟ್, ಹೆಚ್ಚು ಸಂಪರ್ಕದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ’’ ಎಂದರು.