ಮಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ದಾರಿ ತಪ್ಪಿದ್ದಾರೆ ಎಂದು ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡನೀಯ. ಯಾವ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ಅವರು ದಾಖಲೆ ಕೊಡಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಸವಾಲು ಹಾಕಿದ್ದಾರೆ.
ಮಂಗಳೂರು ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರು ಪ್ರಚಾರಕ್ಕೆ ಬಂದಾಗ ಮಹಿಳೆಯರ ವಿರೋಧ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಅನೇಕರಿಗೆ ಪ್ರಯೋಜನವಾಗಿದೆ. ಎಲ್ಲೂ ಆ ಹಣ ದುರುಪಯೋಗ ಆಗಿಲ್ಲ. ದುಂದುವೆಚ್ಚವೂ ಆಗಿಲ್ಲ. ಕುಟುಂಬದ ಯಜಮಾನಿಗೆ ಸಿಗುವ ಹಣ ಸದ್ಬಳಕೆ ಆಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ನ ಸುರೇಖಾ ಚಂದ್ರಹಾಸ, ತನ್ವೀರ್ ಷಾ, ಸಾರಿಕಾ ಪೂಜಾರಿ, ರೂಪಾ ಚೇತನ್, ಗೀತಾ ಅತ್ತಾವರ ಮತ್ತಿತರರು ಉಪಸ್ಥಿತರಿದ್ದರು.