ಬೆಂಗಳೂರು: ಭಾರತದ ಸ್ವದೇಶಿ ಡಿಜಿಟಲ್ ಕಮರ್ಷಿಯಲ್ ಪರಿಸರ ವ್ಯವಸ್ಥೆ ಹೊಂದಿರುವ ಫ್ಲಿಪ್ಕಾರ್ಟ್ ಕಂಪನಿಯು ತನ್ನ ಆ್ಯಪ್ನಲ್ಲಿ ಬಸ್ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಅನೇಕ ರಾಜ್ಯ ಸಾರಿಗೆ ನಿಗಮಗಳು ಮತ್ತು ಖಾಸಗಿ ಅಗ್ರಿಗೇಟರ್ಗಳ ಸಹಯೋಗದ ಮೂಲಕ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಭಾರತದಾದ್ಯಂತ 25,000+ ಮಾರ್ಗಗಳಲ್ಲಿ 10 ಲಕ್ಷ ಬಸ್ ಸಂಪರ್ಕಗಳಲ್ಲಿ ಆಯ್ಕೆ ಮಾಡುವ ಸೌಲಭ್ಯ ಒದಗಿಸುತ್ತದೆ. ಫ್ಲಿಪ್ಕಾರ್ಟ್ ಟ್ರಾವೆಲ್ ಬ್ಯಾನರ್ ಅಡಿಯಲ್ಲಿ ಲಭ್ಯವಿರುವ ವಿಮಾನ ಮತ್ತು ಹೋಟೆಲ್ ಬುಕಿಂಗ್ ಸೇವೆಗಳಿಗೆ ಇದು ಹೆಚ್ಚುವರಿ ಸೇರ್ಪಡೆಯಾಗಿದೆ.
ಈ ವಿಭಾಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಫ್ಲಿಪ್ಕಾರ್ಟ್ ಈ ಯೋಜನೆಯನ್ನು ಆರಂಭಿಸಿದೆ. ಫ್ಲಿಪ್ಕಾರ್ಟ್ನ ಅಸ್ತಿತ್ವದಲ್ಲಿರುವ ಗ್ರಾಹಕರು ಮತ್ತು ಬಸ್ ಪ್ರಯಾಣಿಕರ ನಡುವಿನ ಹೊಂದಾಣಿಕೆಯೊಂದಿಗೆ ಕೈಗೆಟುಕುವ ದರದ ಪ್ರಯಾಣ ಸೌಲಭ್ಯವನ್ನು ಒದಗಿಸುವ ಮೂಲಕ ಈ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಲಿದೆ. ಬಸ್ ಬುಕಿಂಗ್ ಗಾಗಿ ಸೂಪರ್ಕಾಯಿನ್ಗಳನ್ನು ಬಳಸಿಕೊಳ್ಳುವುದು ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಫ್ಲಿಪ್ಕಾರ್ಟ್ನ ಹೆಚ್ಚುವರಿ ಪ್ರಯೋಜನವಾಗಿದೆ.
ಫ್ಲಿಪ್ಕಾರ್ಟ್ನಲ್ಲಿನ ಬಸ್ ಬುಕಿಂಗ್ ಸೇವೆಯ ಪ್ರಮುಖ ವೈಶಿಷ್ಟ್ಯಗಳು ಎಂದರೆ ಅತ್ಯುತ್ತುಮ ಕೊಡುಗೆಗಳ ಲಭ್ಯತೆ, ಕನ್ವೇಯನ್ಸ್ ಫೀ ಅಥವಾ ಗುಪ್ತ ಶುಲ್ಕಗಳು ಇಲ್ಲ, ರೂ. 50ವರೆಗಿನ ಸೂಪರ್ಕಾಯಿನ್ ಬಳಕೆಯ ಕೊಡುಗೆ ಮತ್ತು 24/7 ಧ್ವನಿ ಸಹಾಯವಾಣಿ. ಆರಂಭಿಕ ಕೊಡುಗೆಯ ಭಾಗವಾಗಿ, ಗ್ರಾಹಕರು 15 ಏಪ್ರಿಲ್ 2024ರವರೆಗೆ ಮಾಡುವ ಪ್ರತಿ ಬಸ್ ಬುಕಿಂಗ್ಗೆ ಸೂಪರ್ ಕಾಯಿನ್ ಗಳ ಮೇಲೆ 5% ಹೆಚ್ಚುವರಿ ರಿಯಾಯಿತಿಯೊಂದಿಗೆ ಫ್ಲಾಟ್ 15% ರಿಯಾಯಿತಿಯನ್ನು ಪಡೆಯಬಹುದು.
ಈ ಹೊಸ ಬೆಳವಣಿಗೆಯ ಕುರಿತು ಮಾತನಾಡಿದ ಫ್ಲಿಪ್ಕಾರ್ಟ್ನ ಹಿರಿಯ ಉಪಾಧ್ಯಕ್ಷ ಅಜಯ್ ವೀರ್ ಯಾದವ್, “ಫ್ಲಿಪ್ಕಾರ್ಟ್ನ ವಿಸ್ತಾರ ಶ್ರೇಣಿಯ ಸೇವೆಗಳಿಗೆ ಬಸ್ ಬುಕಿಂಗ್ ಸೇರ್ಪಡೆಯು ಮಹತ್ವದ ಮೈಲಿಗಲ್ಲಾಗಿದೆ. ಇದು ನಮ್ಮ ಸಂಸ್ಥೆಯು ಪ್ರಯಾಣ ಸೇರಿದಂತೆ ಗ್ರಾಹಕರ ಎಲ್ಲಾ ಅಗತ್ಯ ಪೂರೈಸುವ ಅಂತಿಮ ತಾಣ ಆಗಬೇಕು ಎಂಬ ಆಶಯಕ್ಕೆ ಪೂರಕವಾಗಿದೆ. ಟಿಯರ್-2 ಮತ್ತು ಟಿಯರ್-3 ಮಾರುಕಟ್ಟೆಗಳಲ್ಲಿ ದೃಢವಾದ ಉಪಸ್ಥಿತಿ ಹೊಂದಿರುವ ಫ್ಲಿಪ್ ಕಾರ್ಟ್ ನ ಈ ಕ್ರಮವು ಗ್ರಾಹಕರಿಗೆ ಅವರ ನಗರ ಪ್ರಯಾಣದ ಅಗತ್ಯಗಳಿಗಾಗಿ ಅನುಕೂಲಕರ ಮತ್ತು ವಿಶ್ವಾಸಾರ್ಹ ಪರಿಹಾರವನ್ನು ಒದಗಿಸಲಿದೆ. ನಾವು ನಮ್ಮ ಗ್ರಾಹಕರಿಗೆ ಭವಿಷ್ಯದಲ್ಲಿ ಪ್ರಯಾಣ ಅನುಭವಗಳನ್ನು ಸರಳಗೊಳಿಸುವ ಮೂಲಕ ಮೌಲ್ಯವರ್ಧಿತ ಸೇವೆ ಒದಗಿಸುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
2019ರಲ್ಲಿ ಪ್ರಾರಂಭವಾದಾಗಿನಿಂದಲೂ ಫ್ಲಿಪ್ಕಾರ್ಟ್ ಫ್ಲೈಟ್ಸ್ ಆಂಡ್ ಹೋಟೆಲ್ಸ್ ಸ್ಥಿರವಾಗಿ ಬೆಳೆಯುತ್ತಿದೆ. ಫ್ಲಿಪ್ಕಾರ್ಟ್ ಒಟ್ಟಾರೆ ಉದ್ಯಮದಲ್ಲಿ ಪ್ರಯಾಣ ವಿಭಾಗದಲ್ಲಿ ಮಹತ್ತರ ಬದಲಾವಣೆ ತಂದಿದೆ ಮತ್ತು ಗ್ರಾಹಕರಿಗೆ ಮೌಲ್ಯಯುತ ಸೇವೆಯನ್ನು ಒದಗಿಸುವುದನ್ನು ಮುಂದುವರಿಸುತ್ತದೆ.