ಮಂಗಳೂರು: ಪುತ್ತಿಲ ಪರಿವಾರ ಹಾಗೂ ಬಿಜೆಪಿ ಸೇರ್ಪಡೆ ಕುರಿತಂತೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉಲ್ಟಾ ಹೊಡೆದಿದ್ದು, ನಿನ್ನೆ ಪುತ್ತೂರಿನಲ್ಲಿ ಮಾಧ್ಯಮ ಸೃಷ್ಠಿ ಎಂದಿದ್ದ ಅವರು ಇಂದು ಮಂಗಳೂರಿನಲ್ಲಿ ಪುತ್ತಿಲ ಅವರು ಬೆಂಗಳೂರಿನಲ್ಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಯ ಗೊಂದಲ ಮುಗಿದಂತೆ ಕಾಣುತ್ತಿಲ್ಲ. ಬಿಜೆಪಿಯ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರೇ ಇನ್ನೂ ಗೊಂದಲದಲ್ಲಿರುವಂತೆ ಕಾಣುತ್ತಿದ್ದು, 24 ಗಂಟೆಯೊಳಗೆ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಅರುಣ್ ಪುತ್ತಿಲ ಅವರು ಬೆಂಗಳೂರಿನಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆದು ಸೇರ್ಪಡೆ ಮಾಡಲಾಗಿದೆ. ಇನ್ನು ಮತ್ತೆ ಮಂಗಳೂರಿನಲ್ಲಿ ಸೇರ್ಪಡೆಯಂಥ ಪ್ರಕ್ರಿಯೆಗಳು ಇಲ್ಲ ಎಂದರು.
ಕೆಲ ಕಾರ್ಯಕರ್ತರು ಹಾಗೂ ಕೆಲವರಲ್ಲಿ ಇಂಥಹ ಗೊಂದಲ ಇರುವುದು ಸಹಜ. ಆದರೆ ರಾಜ್ಯಾಧ್ಯಕ್ಷರೇ ನಮಗೆ ಸುಪ್ರೀಂ, ಅವರ ಸೂಚನೆಯಂತೆ ಪುತ್ತಿಲ ಇರುತ್ತಾರೆ. ಅರುಣ್ ಪುತ್ತಿಲ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ಪುತ್ತಿಲ ಕೂಡ ಒಪ್ಪಿದ್ದಾರೆ ಎಂದರು. ಪುತ್ತಿಲ ಪರಿವಾರ ವಿಸರ್ಜನೆ ಮಾಡಿಕೊಂಡೇ ಬಿಜೆಪಿಯಲ್ಲೇ ಕೆಲಸ ಮಾಡುತ್ತಾರೆ. ಪುತ್ತೂರು ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಪುತ್ತಿಲ ಪಕ್ಷೇತರ ಸ್ಪರ್ಧೆ ವೇಳೆ ಹಲವು ಸಂಘರ್ಷ ಆಗಿದೆ. ಈ ವಿಚಾರದಲ್ಲಿ ಸರಿ ಪಡಿಸುವ ಕೆಲಸ ಆಗುತ್ತಿದೆ, ಬಹುತೇಕ ಸರಿಯಾಗಿದೆ. ಸಣ್ಣ ಸಣ್ಣ ಗೊಂದಲಗಳು ಇರೋದು ಸಹಜ, ಸರಿಪಡಿಸಲಾಗಿದೆ. ಆದರೆ ಪುತ್ತಿಲ ಬಿಜೆಪಿಗೆ ಬರಬಾರದು ಅಂತ ಯಾರೂ ಹೇಳಿಲ್ಲ ಎಂದರು.
ಪಕ್ಷ ಸೇರುವ ಬಗ್ಗೆ ರಾಜ್ಯಾಧ್ಯಕ್ಷರ ಎದುರುಗಡೆ ಸಹಮತ ವ್ಯಕ್ತಪಡಿಸಿ ಪುತ್ತಿಲ ಅವರು ಬಂದಿದ್ದಾರೆ. ಹೀಗಿರುವಾಗ ಮತ್ತೆ ಧ್ವಜ ಕೊಟ್ಟು ಸ್ವಾಗತ ಮಾಡಬೇಕು ಅಂತೇನಿಲ್ಲ. ರಾಜ್ಯಾಧ್ಯಕ್ಷರಿಗಿಂತ ನಾವು ದೊಡ್ಡವರಲ್ಲ, ಅವರು ಹೇಳಿದ ಮೇಲೆ ಮುಗೀತು. ಅರುಣ್ ಪುತ್ತಿಲ ಬಿಜೆಪಿ ಜೊತೆ ಕೆಲಸ ಮಾಡಲಿದ್ದಾರೆ ಎಂದರು.