ಮಂಗಳೂರು: ಬಿಜೆಪಿಗೆ ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡವರು ದೇಶದಲ್ಲಿ ಆಡಳಿತ ನಡೆಸಲು ಅಸಾಧ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿದರು.
ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅಮಾನತಿಗೆ ಆಗ್ರಹಿಸಿ ಮಂಗಳವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಐವನ್ ಡಿಸೋಜ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸತ್ ಸದಸ್ಯರಿಗೆ ನೈತಿಕತೆ ಇದ್ದಲ್ಲಿ ಅನಂತ್ ಕುಮಾರ್ ಅವರನ್ನು ಪಕ್ಷದ ಸಂಸತ್ ಸ್ಥಾನದಿಂದ ಉಚ್ಛಾಟಿಸಲಿ ಎಂದು ಆಗ್ರಹಿಸಿದರು.
ಸಂವಿಧಾನದ ಪ್ರತಿ ಸುಟ್ಟವರಿಗೂ ಬಿಜೆಪಿ ರಕ್ಷಣೆ ನೀಡಿದೆ. ಅಭಿವೃದ್ಧಿ ಕುರಿತು ಮನಸ್ಸಿಲ್ಲ. ಮಹಿಳೆಯರು, ರೈತರು, ಯುವಕರ ಮೇಲೆ ಕಳಕಳಿ ಇಲ್ಲ. ದೇಶ ವಿರೋಧಿಗಳನ್ನೇ ಬಿಜೆಪಿ ಬೆಂಬಲಿಸುತ್ತಿದೆ.
ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಅವರನ್ನು ಕಾರ್ಯಕರ್ತರು ತಿರಸ್ಕರಿಸಿದ್ದಾರೆ. ನಂ.1,2 ಸಾಧಕರಿಗೆ ಗೋಬ್ಯಾಕ್ ಎನ್ನುವುದಾದರೆ ಉಳಿದವರ ಪಾಡೇನು ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬಿಜೆಪಿಯಿಂದ ಸಂವಿಧಾನ ಬದಲಾವಣೆಯನ್ನಷ್ಟೇ ನಿರೀಕ್ಷಿಸಲು ಸಾಧ್ಯ. ಇಂದು ದೇಶ ಉಳಿದಿದೆ ಎಂದರೆ ಅದು ಸಂವಿಧಾನದಿಂದ. ಇದರಿಂದಾಗಿ ಇಂದು ದೇಶದಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಸಂವಿಧಾನವನ್ನು ನಂಬಿಕೊಂಡು ದೇಶದ ಜನ ಬದುಕುತ್ತಿದ್ದೇವೆ. ಪ್ರಧಾನಿಯನ್ನು ಟೀಕಿಸಿದ್ದಲ್ಲಿ ಅವರನ್ನು ದೇಶ ವಿರೋಧಿ ಎನ್ನುತ್ತಾರೆ. ಅದರೆ ಸರಕಾರ ಅನಂತ್ ಕುಮಾರ್ ವಿಚಾರದಲ್ಲಿ ಮೌನವಾಗಿದೆ. ಸುಳ್ಳೆ ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿಯ ಬಂಡವಾಳ ಎಂದರು.