ಮಂಗಳೂರು:ಪಲ್ಗುಣಿ ನದಿಗೆ ಎಂಆರ್ಪಿಎಲ್ ಕಡೆಯಿಂದ ಮಾರಕ ಕೈಗಾರಿಕಾ ತ್ಯಾಜ್ಯ ಹರಿಯ ಬಿಡಲಾಗುತ್ತಿದೆ. ಮಾರಕ ತ್ಯಾಜ್ಯ ನೇರವಾಗಿ ಹರಿದು ಬಂದು ತೋಕೂರು ಹಳ್ಳ ಸೇರಿ ಪೂರ್ತಿ ನೀರು ಮಲಿನಗೊಂಡಿದ್ದನ್ನು ಗಮನಿಸಿದ ಮಂಗಳೂರಿನ ಹಲವು ಮಾಧ್ಯಮಗಳ ವರದಿಗಾರರು ಆಗಮಿಸಿದ್ದರು. ಸುದ್ದಿ ಚಿತ್ರೀಕರಣ ಮುಗಿಸಿ ಪತ್ರಕರ್ತರು ವಾಪಾಸ್ ಆದ ಬಳಿಕ ಎಂಆರ್ಪಿಎಲ್ ಅಧಿಕಾರಿಗಳು ಹಾಗೂ ರಕ್ಷಣಾ ವಿಭಾಗದವರು ಆಗಮಿಸಿ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಕಂಪೆನಿಯ ಒಪ್ಪಿಗೆ ಇಲ್ಲದೆ ಕಂಪೆನಿಯ ಕಾಂಪೌಂಡ್ ಹೊರ ಸುತ್ತಲ ಪ್ರದೇಶದಲ್ಲಿ ನದಿ ವೀಕ್ಷಿಸುವುದು, ನೀರು ಪರೀಕ್ಷೆ ಮಾಡುವುದು, ಸ್ಥಳೀಯ ಪರಿಸರದ ಫೋಟೊ, ವೀಡಿಯೊ ಮಾಡುವಂತಿಲ್ಲ” ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹಾಗೂ ಸ್ಥಳೀಯ ನಾಗರಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡೆದಿದ್ದು, “ಎಂಆರ್ಪಿಎಲ್ ಕಂಪೆನಿಯ ಕಾಂಪೌಂಡ್ ಹೊರಗಡೆಯಲ್ಲಿ ಫೋಟೊ, ವೀಡಿಯೊ ಚಿತ್ರೀಕರಣ ಮಾಡಲು ಹಾಗೂ ಅಡ್ಡಾಡಲು, ನದಿ ಪರಿಸರದ ಪೊಟೋ ತೆಗೆಯಲು ನಿರ್ಬಂಧಿಸಲು ಕಂಪೆನಿಗೆ ಏನು ಅಧಿಕಾರ ಇದೆ” ಎಂದು ಮುನೀರ್ ಕಾಟಿಪಳ್ಳ ಹಾಗೂ ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
“ಸಾರ್ವಜನಿಕ ರಸ್ತೆಯಲ್ಲಿನ ಜನರ ಓಡಾಟ ನಿರ್ಬಂಧಿಸಲು ಹಾಗೂ ಪೊಟೋ ತೆಗೆಯುವುದನ್ನು ಆಕ್ಷೇಪಿಸಲು ಯಾವ ಅಧಿಕಾರ ಇದೆ” ಎಂದು ಮರು ಪ್ರಶ್ನಸಿದ್ದಾರೆ.
“ಎಂಆರ್ಪಿಎಲ್ ಅಧಿಕಾರಿಗಳು ಸುಮಾರು ಹದಿನೈದು ನಿಮಿಷಗಳಿಗೂ ಹೆಚ್ಚು ಹೊತ್ತು ಮಾತಿನ ಚಕಮಕಿ ನಡೆಸಿದ್ದಾರೆ. ಅಷ್ಟೂ ಹೊತ್ತು ಮಾತಿನ ಚಕಮಕಿ ನಡೆದಾಗಲೂ ನದಿಗೆ ಕಂಪೆನಿಯ ತ್ಯಾಜ್ಯವನ್ನು ನೇರವಾಗಿ ಬಿಡುತ್ತಿರುವ ಬಗ್ಗೆ ಎಂಆರ್ಪಿಎಲ್ ಕಂಪೆನಿ ಅಧಿಕಾರಿಗಳು ಒಂದು ಶಬ್ದವನ್ನೂ ಮಾತನಾಡಿಲ್ಲ. ಅವರ ಎಲ್ಲ ಆಕ್ಷೇಪ ಇದ್ದದ್ದು ಮಲಿನಗೊಂಡ ನದಿಯ ಫೋಟೋ ತೆಗೆದ ಬಗ್ಗೆ ಮಾತ್ರ” ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.