ಉಳ್ಳಾಲ: ಸೋಮೇಶ್ವರ ದೇವಸ್ಥಾನದ ಕುರಿತು ಮಾತನಾಡುವಾಗ ಗಟ್ಟಿ ಸಮಾಜದ ವಿರುದ್ಧ ಆರೋಪದ ಮಾತುಗಳನ್ನಾಡಿದ ಮುಡಾ ನಿಗಮ ಅಧ್ಯಕ್ಷ ಸದಾಶಿವ್ ಉಳ್ಳಾಲ್ ತಕ್ಷಣವೇ ಸಮುದಾಯದವರ ಮುಂದೆ ಕ್ಷಮೆಯಾಚಿಸಬೇಕು, ಈ ಕುರಿತು ಮಾಧ್ಯಮಗಳ ಮುಂದೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಂದಿನ ಆಡಳಿತದ ವಾಸ್ತವ ಸಂಗತಿಯನ್ನು ತಿಳಿಸಬೇಕು ಎಂದು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ್ ಗಟ್ಟಿ ವಗ್ಗ ಆಗ್ರಹಿಸಿದ್ದಾರೆ.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿ ಗಲಾಟೆ ನಡೆದಿದ್ದು, ಗಟ್ಟಿ ಸಮಾಜದವರು ಆಡಳಿತ ನಡೆಸುತ್ತಿದ್ದ ಸಂದರ್ಭ ‘ಲಾಸು ಲಾಸು’ ಹೇಳಿದ್ದು, ಅದಕ್ಕಾಗಿ ಅಂದು ಸೋಮೇಶ್ವರ ಮಂಡಲ ಪ್ರಧಾನರಾಗಿದ್ದ ತಾನು ಮುಜರಾಯಿ ಇಲಾಖೆಗೆ ಸೇರಿಸಿದ್ದೇನೆ ಅನ್ನುವ ಹೇಳಿಕೆಯನ್ನು ಕೊಂಡಾಣ ದೈವಸ್ಥಾನದ ಕೃತ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಇಂತಹ ಹೇಳಿಕೆಯಿಂದ ಇಡೀ ಗಟ್ಟಿ ಸಮಾಜಕ್ಕೆ ನೋವಾಗಿದೆ. ಹಿಂದೂಗಳಲ್ಲಿರುವ ಕೆಲ ವಿಕೃತಿ ಮನಸ್ಥಿತಿಯವರಿಂದ ದೇವಸ್ಥಾನ ನಷ್ಟಕ್ಕೆ ತಿರುಗಿದೆ. ವಾಸ್ತವ ಸ್ಥಿತಿಯನ್ನು ತಿಳಿಸದೆ ಸಮುದಾಯವೊಂದನ್ನು ಆರೋಪಿಸುವುದು ಸರಿಯಲ್ಲ.
ಶ್ರೀ ಸೋಮನಾಥ ದೇವಸ್ಥಾನವನ್ನು ರಾಜ ಮಹಾರಾಜರ ಕಾಲದಿಂದ ವಿಜಯನಗರ ಸಾಮ್ರಾಜ್ಯದವರು, ರಾಣಿ ಅಬ್ಬಕ್ಕ ಆಳ್ವಿಕೆ ನಡೆಸುತ್ತಾ ಬಂದಿದ್ದು ಮತ್ತು ಇನ್ನಿತರ ಪ್ರತಿಷ್ಠಿತ ಸಮಾಜದವರು ಆಳ್ವಿಕೆ ನಡೆಸಿದ್ದು, 1930 ನೇ ಇಸವಿಯಿಂದ 1988 ನೇ ಇಸವಿಯವರೆಗೆ ಗಟ್ಟಿ ಸಮಾಜದವರ ದೇವಸ್ಥಾನದ ಆಡಳಿತವನ್ನು ಹಾಗೂ ಕ್ಷೇತ್ರದಲ್ಲಿ ನಡೆಯುವ ಪಂಚ ಪರ್ವ ವಾರ್ಷಿಕ ಉತ್ಸವಗಳನ್ನು ಸಮಾಜದ ಜನರ ಸಹಕಾರದೊಂದಿಗೆ ಅತ್ಯಂತ ಸುಂದರವಾಗಿ ನಡೆಸಿಕೊಂಡು ಬರುತ್ತಿದ್ದರು. ಆ ಕಾಲದಲ್ಲಿ 1 ಮುಡಿ ಅಕ್ಕಿಗೆ 25 ರೂ.ಗಳಿದ್ದು ದೇವಸ್ಥಾನದ ದೈನಂದಿನ ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಗಟ್ಟಿ ಸಮಾಜದ ಒಂಭತ್ತು ಮಾಗಣೆ ಸೀಮೆಯ ಪ್ರತಿಯೊಂದು ಮನೆಯಿಂದಲೂ ಬಂದು ಮುಷ್ಠಿ ಅಕ್ಕಿ, ಒಂದು ಕುಡ್ತೆ ಎಳ್ಳೆಣ್ಣೆಯನ್ನು ಸಮಾಜದ ಗುರುಸ್ಥಾನದಲ್ಲಿರುವ ನಾಯ್ಗರು, ಮೇಲ್ಡರುಗಳ ನೇತೃತ್ವದಲ್ಲಿ ಗುರಿಕಾರರುಗಳ ಸಹಕಾರದಿಂದ ಸಮಾಜ ಬಾಂಧವರು ಒಗ್ಗೂಡಿ ದೇವಸ್ಥಾನಕ್ಕೆ ಸಮರ್ಪಿಸಿ ಕುಲಸ್ವಾಮಿ ಶ್ರೀ ಸೋಮನಾಥ ದೇವರ ಮೇಲೆ ನಂಬಿಕೆಯನ್ನು ನಿರಂತರವಾಗಿ ಪಾಲಿಸಿಕೊಂಡು ಬಂದಿದ್ದರೂ, ಸೋಮನಾಥ ದೇವರಿಲ್ಲದೇ ಗಟ್ಟಿ ಸಮಾಜವಿಲ್ಲ ಎಂಬ ನಂಬಿಕೆ ಸಮಗ್ರ ಗಟ್ಟಿ ಸಮಾಜ ಬಾಂಧವರ ಅನಿಸಿಕೆಯಾಗಿದೆ.
ಆ ನಂಬಿಕೆ ಪ್ರಕಾರ ಇಂದಿಗೂ ಸಹ ದೇವರ ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ಗಟ್ಟಿ ಜಾತಿಯವರ ಮನೆಯಿಂದ ವಂತಿಗೆ ಸಂಗ್ರಹಿಸಿ, ಹೊರೆಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದೇವೆ. ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸದಾ ಉತ್ಸುಕತೆಯಿಂದ ಇದ್ದು, ಶ್ರೀ ಸೋಮನಾಥ ದೇವರಿಗೆ ಬಂಗಾರದ ಕಣ್ಣು, ಉತ್ಸವದ ಸಂದರ್ಭ ಉಪಯೋಗಿಸುತ್ತಿರುವ ಬೆಳ್ಳಿಯ ಪಲ್ಲಂಕಿ, ದೈನಂದಿನ ಪೂಜಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪರಿಕರಗಳು ಹಾಗೂ ಜೀರ್ಣೋದ್ಧಾರ ಸಮಯದಲ್ಲಿ ದೊಡ್ಡ ಮೊತ್ತದ ಸಹಕಾರವನ್ನು ನೀಡುತ್ತಾ ಶ್ರದ್ಧೆಯಿಂದ ದೇವರಸೇವೆಯಲ್ಲಿ ಪಾಲ್ಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭ ಗಟ್ಟಿ ಸಮಾಜದ ನಾಯ್ಗರು ಹರಿಶ್ಚಂದ್ರ ಗಟ್ಟಿ, ಮೇಲ್ಡರಾದ ಯಾದವ್ ಗಟ್ಟಿ ಪಿಲಾರ್ , ಸೋಮನಾಥ ಸೇವಾ ಸಮಿತಿ ಅಧ್ಯಕ್ಷ ಜಯರಾಮ್ ಗಟ್ಟಿ ಪಿಲಾರ್, ಪೊಲದವರ ಯಾನೆ ಗಟ್ಟಿ ಸೇವಾ ಸಮಾಜದ ಮಾಜಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ , ಮೋಹನ್ ಗಟ್ಟಿ ಕುಂಪಲ ಉಪಸ್ಥಿತರಿದ್ದರು.