ಮಂಗಳೂರು: ಖ್ಯಾತ ಪತ್ರಕರ್ತ, ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ, ಉತ್ತಮ ಕತೆಗಾರ ಹಾಗೂ ಕವಿ ಮನೋಹರ ಪ್ರಸಾದ್(64) ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ಶುಕ್ರವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಕಾರ್ಕಳ ತಾ| ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ. ನವ ಭಾರತ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಉದಯವಾಣಿ ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ನಂತರದ ದಿನಗಳಲ್ಲಿ ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.
ಕರ್ನಾಟಕ ಕರಾವಳಿ ಇತಿಹಾಸದ ಕುರಿತು 608 ಸಂಶೋಧನ ಲೇಖನಗಳನ್ನು ಬರೆದಿದ್ದ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ ಮೊದಲಾದ ಹಲವು ಗೌರವ ಗಳಿಗೆ ಭಾಜನರಾಗಿದ್ದಾರೆ.