ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂವಿಧಾನ. ಸ್ವಾತಂತ್ರ್ಯದ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರು ಕೂಡ ಸಂವಿಧಾನಕ್ಕೆ ಧಕ್ಕೆಯಾಗಿದೆ ಎಂದು ಮಾತನಾಡುತ್ತಾರೆ. ಸಂವಿಧಾನದ ತಿದ್ದು ಮಾಡಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಸಂವಿಧಾನಕ್ಕೆ ಧಕ್ಕೆ ತಂದಿರುವುದು ಕಾಂಗ್ರೆಸ್ ಪಕ್ಷ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿಯಂತಹ ಹಿರಿಯ ನಾಯಕರನ್ನು ಜೈಲಿಗೆ ಹಾಕಿದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಕ್ಕೆ
ಧಕ್ಕೆಯಾಗಿದೆ ಎಂದು ಹೇಳುವ ಹಕ್ಕಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮಶಾನ ನಿರ್ಮಾಣಕ್ಕೆ ಕಾಂಗ್ರೆಸ್ ಹೊಸದಿಲ್ಲಿಯಲ್ಲಿ 10 ಅಡಿ ಜಾಗ ನೀಡಲಿಲ್ಲ. ರಾಜಕೀಯ ಬೇಳೆ ಬೇಯಿಸಲು ಅಂಬೇಡ್ಕರ್ ಅವರ ಹೆಸರು ಬಳಕೆ ಮಾಡುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಸಂವಿಧಾನದ ಬಗ್ಗೆ ಸಮಾವೇಶ ಏರ್ಪಡಿಸಿ ಸರಕಾರಿ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರನ್ನು ನಿಂದಿಸಲು ಬಳಸಿದ್ದಾರೆ. ಕೇಂದ್ರದ ಬಗ್ಗೆ ದೂಷಣೆ ಮಾಡಲು ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸತೀಶ್ ಕುಂಪಲ, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಕಿಶೋರ್, ಮಂಜುಳಾ ರಾವ್, ನಂದನ್ ಮಲ್ಯ, ವಸಂತ ಪೂಜಾರಿ ಇದ್ದರು.